ಎದುರಾಳಿ ಯಾರೇ ಆಗಲಿ; 3 ಲಕ್ಷ ಮತ ಅಂತರದಿಂದ ಗೆಲ್ಲುತ್ತೇನೆ: ಪ್ರಹ್ಲಾದ ಜೋಶಿ

| Published : Mar 14 2024, 02:03 AM IST

ಎದುರಾಳಿ ಯಾರೇ ಆಗಲಿ; 3 ಲಕ್ಷ ಮತ ಅಂತರದಿಂದ ಗೆಲ್ಲುತ್ತೇನೆ: ಪ್ರಹ್ಲಾದ ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಎನ್‌ಡಿಎ 400 ಸ್ಥಾನ ಗೆಲ್ಲುವುದು ಗ್ಯಾರಂಟಿ ಎಂದ ಅವರು, ಮೂರನೇ ಬಾರಿಗೆ ನಾವು ದಾಖಲೆ ವಿಜಯ ಸಾಧಿಸುತ್ತೇವೆ. ಉಳಿದ ಕ್ಷೇತ್ರಗಳಿಗೂ ಆದಷ್ಟೇ ಬೇಗನೆ ಘೋಷಣೆ ಮಾಡುತ್ತೇವೆ.

ಹುಬ್ಬಳ್ಳಿ:ನನ್ನ ವಿರುದ್ಧ ಯಾರೇ ಅಭ್ಯರ್ಥಿಯಾಗಲಿ ನಾನು ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿ ಅವರು ದೇಶದ ಅತ್ಯಂತ ಜನಪ್ರೀಯ ನಾಯಕರು. ಇಂದು 72 ಸ್ಥಾನಗಳಿಗೆ ಟಿಕೆಟ್ ಘೋಷಣೆಯಾಗಿದೆ. ಕರ್ನಾಟಕದಲ್ಲಿ 20 ಅಭ್ಯರ್ಥಿಗಳ ಘೋಷಣೆ ಮಾಡಿದೆ. ಅದರಲ್ಲಿ ಧಾರವಾಡಕ್ಕೆ ನನ್ನ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ದೇಶದಲ್ಲಿ ಎನ್‌ಡಿಎ 400 ಸ್ಥಾನ ಗೆಲ್ಲುವುದು ಗ್ಯಾರಂಟಿ ಎಂದ ಅವರು, ಮೂರನೇ ಬಾರಿಗೆ ನಾವು ದಾಖಲೆ ವಿಜಯ ಸಾಧಿಸುತ್ತೇವೆ. ಉಳಿದ ಕ್ಷೇತ್ರಗಳಿಗೂ ಆದಷ್ಟೇ ಬೇಗನೆ ಘೋಷಣೆ ಮಾಡುತ್ತೇವೆ. ಇವತ್ತು ಟಿಕೆಟ್‌ ಲಭಿಸಿದ ಎಲ್ಲರಿಗೂ ಅಭಿನಂದನೆ ಎಂದರು.ಹೊಸ ಮುಖಗಳಿಗೆ ಮಣೆ ಹಾಕಿರುವ ಕುರಿತಂತೆ ಕೇಳಿದ ಪ್ರಶ್ನೆಗೆ, ಗೆಲುವಿನ ಪ್ರಮಾಣ ನೋಡಿ ಕೆಲ ಕಡೆಗಳಲ್ಲಿ ಬದಲಾವಣೆ ಮಾಡಲಾಗಿದೆ. ಇದು ಸಾಮಾನ್ಯ ಪ್ರಕ್ರಿಯೆ ಎಂದರು.ನಳೀನಕುಮಾರ ಕಟೀಲ್‌ ಅವರು ರಾಜ್ಯಾಧ್ಯಕ್ಷರಾಗಿದ್ದರು. ನಾವು ಯಾರನ್ನು ಕೈ ಬಿಡಲ್ಲ. ಅವರಿಗೂ ಜವಾಬ್ದಾರಿ ಕೊಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು. ಕೆ.ಎಸ್‌. ಈಶ್ವರಪ್ಪ ಪುತ್ರ ಕಾಂತೇಶ್‌ಗೆ ಟಿಕೆಟ್ ತಪ್ಪಿರುವ ಕುರಿತು ಕೇಳಿದ ಪ್ರಶ್ನೆಗೆ, ಅದು ರಾಷ್ಟ್ರೀಯ ನಾಯಕರ ತೀರ್ಮಾನ ಎಂದರು.ಎಲ್ಲಿ ಗೆಲ್ಲುತ್ತೇವೆ ಅಲ್ಲಿ ಸ್ಪರ್ಧೆ ಇದ್ದೆ ಇರುತ್ತದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಟಿಕೆಟ್‌ ಕೇಳುವ ಹಕ್ಕಿದೆ. ಎಲ್ಲವೂ ಸರಿಯಾಗುತ್ತದೆ. ಜಗದೀಶ ಶೆಟ್ಟರ್‌ ಅವರು ನನಗೆ ಟಿಕೆಟ್‌ ತಪ್ಪಿಸುವ ಪ್ರಯತ್ನ ಮಾಡಿಲ್ಲ. ನಾನೂ ಅವರನ್ನು ಟೀಕೆ ಮಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳೇ ಇಲ್ಲ. ಸ್ಪರ್ಧೆಗೆ ಅಲ್ಲಿ ಉತ್ಸಾಹ ಇಲ್ಲ ಎಂದ ಅವರು, ಆದರೆ ಬಿಜೆಪಿಯಲ್ಲಿ ಹಾಗಲ್ಲ. ದೊಡ್ಡ ಪಟ್ಟಿ ಇಲ್ಲಿದೆ. ಯದುವೀರ ಅವರನ್ನು ಮನವೋಲಿಸಿದ್ದು ಯಡಿಯೂರಪ್ಪ ಎಂದು ತಿಳಿಸಿದರು.