ನಿರೀಕ್ಷೆಯಂತೆ ಪ್ರಹ್ಲಾದ ಜೋಶಿಗೆ ಟಿಕೆಟ್‌

| Published : Mar 14 2024, 02:03 AM IST

ಸಾರಾಂಶ

ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಗೆಲ್ಲುವ ಕುದುರೆ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೇ ಬಿಜೆಪಿ ಮತ್ತೊಮ್ಮೆ ಮಣೆ ಹಾಕಿದೆ. ಇದೀಗ ಐದನೆಯ ಬಾರಿಗೆ ಸ್ಪರ್ಧೆಗೆ ಜೋಶಿ ಸಿದ್ಧರಾಗಿದ್ದಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಗೆಲ್ಲುವ ಕುದುರೆ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೇ ಬಿಜೆಪಿ ಮತ್ತೊಮ್ಮೆ ಮಣೆ ಹಾಕಿದೆ. ಇದೀಗ ಐದನೆಯ ಬಾರಿಗೆ ಸ್ಪರ್ಧೆಗೆ ಜೋಶಿ ಸಿದ್ಧರಾಗಿದ್ದಾರೆ.ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 1996ರಿಂದ ಈವರೆಗೆ ನಡೆದ ಏಳು ಚುನಾವಣೆಯಲ್ಲಿ ಬಿಜೆಪಿಯೇ ಪಾರುಪತ್ಯ ಸಾಧಿಸಿದೆ. 2004ರಿಂದ ಜೋಶಿ ಸತತವಾಗಿ ನಾಲ್ಕು ಬಾರಿ ಚುನಾವಣೆ ಎದುರಿಸಿ ಗೆಲುವು ಸಾಧಿಸಿದ್ದಾರೆ. 2019ರಲ್ಲಿ ಬೌಂಡರಿ ಹೊಡೆದ ಬಳಿಕ ಜೋಶಿ ಅವರಿಗೆ ಕೇಂದ್ರ ಸಚಿವ ಸ್ಥಾನ ಲಭಿಸಿತು. ಅತಿ ಹೆಚ್ಚು ಅನುದಾನ ತರುವಲ್ಲಿ ದೇಶದಲ್ಲೇ ಗಮನ ಸೆಳೆದು ಸೈ ಎನಿಸಿಕೊಂಡವರು ಜೋಶಿ, ಸಾಕಷ್ಟು ಅಭಿವೃದ್ಧಿ ಕೆಲಸಗಳು ಕ್ಷೇತ್ರದಲ್ಲಿ ನಡೆಯುತ್ತಿವೆ. ಪೈಪೋಟಿ ಹೇಗಿತ್ತು?ಹಾಗೆ ನೋಡಿದರೆ ಜೋಶಿಗೆ ಪಕ್ಷದಲ್ಲಿ ಪ್ರಾರಂಭದಲ್ಲಿ ಯಾರೊಬ್ಬರು ಪೈಪೋಟಿ ಇರಲಿಲ್ಲ. ಜಗದೀಶ ಶೆಟ್ಟರ್‌ ಕಾಂಗ್ರೆಸ್‌ ಹೋಗಿ ಅಲ್ಲಿಂದ ಮರಳಿ ಬಿಜೆಪಿಗೆ ಬಂದ ಬಳಿಕ ಅವರ ಹೆಸರು ಕೇಳಿ ಬಂದಿತ್ತು. ಜೋಶಿ ಕೂಡ ರೇಸ್‌ನಲ್ಲಿದ್ದರು. ಶೆಟ್ಟರ್‌ಗೆ ಧಾರವಾಡ ಕೊಡುತ್ತಾರೆ. ಜೋಶಿ ಅವರಿಗೆ ಕೆನರಾ ಕ್ಷೇತ್ರಕ್ಕೆ (ಉತ್ತರ ಕನ್ನಡ) ಕಳುಹಿಸುತ್ತಾರೆ ಎಂಬೆಲ್ಲ ಮಾತುಗಳು ಕೇಳಿ ಬಂದಿದ್ದವು. ಆದರೆ ಇದೆಲ್ಲವನ್ನು ಜೋಶಿ ಅವರೇ ಹಲವಾರು ಬಾರಿ ಅಲ್ಲಗೆಳೆದಿದ್ದರು. ತಾವು ಇಲ್ಲಿಂದಲೇ ಸ್ಪರ್ಧಿಸುತ್ತೇವೆ ಎಂದೇ ಸ್ಪಷ್ಟಪಡಿಸುತ್ತಿದ್ದರು. ಅದಕ್ಕೆ ಬೇಕಾದ ತಯಾರಿಯನ್ನೂ ನಡೆಸಿದ್ದರು. ಇದೀಗ ಮತ್ತೊಮ್ಮೆ ಜೋಶಿ ಅವರಿಗೆ ಟಿಕೆಟ್ ನೀಡುವ ಮೂಲಕ ಗೆಲ್ಲುವ ಕುದುರೆ ಪಕ್ಷ ಗುರುತಿಸಿ ಟಿಕೆಟ್‌ ಕೊಟ್ಟಂತಾಗಿದೆ.ಹಾಗಾದರೆ ಶೆಟ್ಟರ್‌ಗೆ ಎಲ್ಲಿ?ಈ ನಡುವೆ ಜಗದೀಶ ಶೆಟ್ಟರ್‌ ಅವರ ಹೆಸರು ಧಾರವಾಡದಲ್ಲಿ ಕೇಳಿ ಬರುವುದರ ಜತೆ ಜತೆಗೆ ಹಾವೇರಿ ಹಾಗೂ ಬೆಳಗಾವಿ ಕ್ಷೇತ್ರಕ್ಕೂ ಹೆಸರು ಕೇಳಿ ಬರುತ್ತಿತ್ತು. ಶೆಟ್ಟರ್‌ ಕೂಡ ತಮಗೆ ಕಾರ್ಯಕರ್ತರ ಒತ್ತಡವಿದೆ, ಹೈಕಮಾಂಡ್‌ ಸೂಚನೆ ನೀಡಿದರೆ ಮಾತ್ರ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದುಂಟು. ಇದೀಗ ಧಾರವಾಡಕ್ಕೆ ಪ್ರಹ್ಲಾದ ಜೋಶಿ ಹಾಗೂ ಹಾವೇರಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಆದರೆ ಶೆಟ್ಟರ್‌ ಬೀಗರಾದ ಮಂಗಳಾ ಅಂಗಡಿ ಪ್ರತಿನಿಧಿಸುತ್ತಿರುವ ಬೆಳಗಾವಿ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು? ಎಂಬುದು ನಿಗೂಢವಾಗಿಯೇ ಉಳಿದಿದೆ. ಹೀಗಾಗಿ ಜಗದೀಶ ಶೆಟ್ಟರ್‌ ಅವರಿಗೆ ಬೆಳಗಾವಿಗೇನಾದರೂ ಟಿಕೆಟ್‌ ಸಿಗಬಹುದಾ? ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಹಿಂದೆ ಸುರೇಶ ಅಂಗಡಿ ನಿಧನರಾಗಿದ್ದ ವೇಳೆ ಪಕ್ಷ ಮಂಗಳಾ ಅಂಗಡಿ ಅವರಿಗೆ ಟಿಕೆಟ್‌ ಕೊಟ್ಟಿತ್ತು. ಆಗ ಚುನಾವಣೆ ಜವಾಬ್ದಾರಿಯನ್ನೆಲ್ಲ ಹೊತ್ತುಕೊಂಡು ಮಂಗಳಾ ಅಂಗಡಿಯನ್ನು ಗೆಲ್ಲಿಸಿಕೊಂಡು ಬಂದ್ದದ್ದು ಇದೇ ಜಗದೀಶ ಶೆಟ್ಟರ್‌. ಹೀಗಾಗಿ ಬೆಳಗಾವಿ ಕ್ಷೇತ್ರದ ಮೇಲೂ ಶೆಟ್ಟರ್‌ ಅವರಿಗೆ ಹಿಡಿತವಿದೆ. ಹೀಗಾಗಿ ಬೆಳಗಾವಿ ಟಿಕೆಟ್‌ ಕೊಡುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ಒಟ್ಟಿನಲ್ಲಿ ಧಾರವಾಡ, ಹಾವೇರಿ, ಬೆಳಗಾವಿ ಟಿಕೆಟ್‌ ವಿಷಯವಾಗಿ ಒಂದಕ್ಕೊಂದು ತಳಕು ಹಾಕಿಕೊಂಡು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವನ್ನುಂಟು ಮಾಡಿತ್ತು. ಅದರಲ್ಲೀಗ ಧಾರವಾಡ, ಹಾವೇರಿ ಕ್ಷೇತ್ರಗಳ ಸಮಸ್ಯೆ ಬಗೆಹರಿದಿದೆ. ಇನ್ನು ಬೆಳಗಾವಿಗೆ ಯಾರು ಎಂಬುದರ ಚರ್ಚೆ ಶುರುವಾದಂತಾಗಿದೆ.ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನಿರೀಕ್ಷೆಯಂತೆ ಸತತ 5ನೇ ಬಾರಿಗೆ ನನಗೆ ಸಿಕ್ಕಿದೆ. ಪಕ್ಷದ ವರಿಷ್ಠರು ಮತ್ತು ಜನರ ಆಶೀರ್ವಾದದಿಂದ ಇದೀಗ ಮತ್ತೆ ಅವಕಾಶ ದೊರೆತಿದೆ. ಇದಕ್ಕಾಗಿ ಎಲ್ಲರಿಗೂ ಧನ್ಯವಾದಗಳು, ಜನರ ಹಾಗೂ ಪಕ್ಷದ ನಾಯಕರ ಪ್ರೀತಿ, ವಿಶ್ವಾಸಕ್ಕೆ ಚಿರಋಣಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.