ಸಾರಾಂಶ
ಚನ್ನಪಟ್ಟಣ: ಗ್ರಾಪಂನಲ್ಲಿ ಆಗಿರುವ ಒತ್ತುವರಿಯನ್ನು ತೆರವುಗೊಳಿಸಲು ವಿಫಲವಾಗಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ಮಾಡಿಕೊಡಲು ಪಂಚಾಯಿತಿ ವಿಫಲವಾಗಿದೆ ಎಂದು ಆರೋಪಿಸಿ ಶ್ರೀ ವೇಣುಗೋಪಾಲಕೃಷ್ಣಸ್ವಾಮಿ ರೈತ ಸಂಘದ ಕಾರ್ಯಕರ್ತರು ತಾಲೂಕಿನ ಸಿಂಗರಾಜಿಪುರ ಗ್ರಾಮ ಪಂಚಾಯಿತಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಸಿಂಗರಾಜಿಪುರ ಗ್ರಾಪಂ ಕಚೇರಿ ಎದುರು ಜಮಾಯಿಸಿದ ಶ್ರೀ ವೇಣುಗೋಪಾಲಕೃಷ್ಣಸ್ವಾಮಿ ರೈತ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಗ್ರಾಪಂ ಕಾರ್ಯವೈಖರಿ ವಿರುದ್ಧ ಘೋಷಣೆ ಕೂಗಿದರು.ಸಿಂಗರಾಜಿಪುರ ಗ್ರಾಪಂ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ. ಗ್ರಾಪಂನಲ್ಲಿ ಜನರ ಕೆಲಸಗಳಾಗುತ್ತಿಲ್ಲ. ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಅವುಗಳನ್ನು ಪರಿಹರಿಸುವಲ್ಲಿ ಪಂಚಾಯಿತಿ ಆಡಳಿತ ಮಂಡಳಿ ವಿಫಲವಾಗಿದೆ. ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಬೇಜಬ್ದಾರಿಯಿಂದ ಜನರು ಸಮಸ್ಯೆ ಎದುರಿಸುವಂತಾಗಿದೆ ಎಂದು ಆರೋಪಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಆಗಿರುವ ಒತ್ತುವರಿ ತೆರವುಗೊಳಿಸಬೇಕು. ಗ್ರಾಮಗಳಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಬೇಕು. ಜನರ ಕೆಲಸ ಕಾರ್ಯಗಳನ್ನು ತ್ವರಿತವಾಗಿ ಮಾಡಿಕೊಡಬೇಕು. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವವರೆಗೆ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಘೋಷಿಸಿದರು.ಪ್ರತಿಭಟನಾನಿರತ ರೈತರನ್ನು ಭೇಟಿಯಾದ ಪಿಡಿಒ, ಕಾರ್ಯದರ್ಶಿ ಹಾಗೂ ಅಧ್ಯಕ್ಷರು, ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಪ್ರತಿಭಟನೆ ಹಿಂಪಡೆದು, ಸ್ವಲ್ಪ ಕಾಲಾವಕಾಶ ನೀಡುವಂತೆ ಮನವಿ ಮಾಡಿಕೊಂಡರು. ಇದಕ್ಕೆ ಜಗ್ಗದ ಪ್ರತಿಭಟನಾಕಾರರು ನಿಮಗೆ ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಿ ಸಮಯ ನೀಡಿದ್ದರೂ ಸಹ ಉದಾಸೀನತೆಯಿಂದ ಕಾರ್ಯ ನಿರ್ವಹಿಸುತ್ತಿದ್ದೀರಿ. ಸುಮ್ಮನೆ ಕಾಲಹರಣ ಮಾಡುತ್ತಿದ್ದೀರಾ. ಹಾಗಾಗಿ ನೀವು ಒತ್ತುವರಿ ತೆರವುಗೊಳಿಸುವವರೆಗೂ ಧರಣಿ ನಿಲ್ಲಿಸುವುದಿಲ್ಲವೆಂದು ಪಟ್ಟು ಹಿಡಿದು ಧರಣಿ ಮುಂದುವರಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಚಾಮರಾಜು, ಉಪಾಧ್ಯಕ್ಷ ಶೇಖರ್, ಕಾರ್ಯದರ್ಶಿಗಳಾದ ಶಂಕರ್, ಮಲ್ಲಿಕಾರ್ಜುನ್, ಸತೀಶ್ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.ಪೋಟೊ೧೨ಸಿಪಿಟಿ೪: ಚನ್ನಪಟ್ಟಣ ತಾಲೂಕಿನ ಸಿಂಗರಾಜಿಪುರ ಗ್ರಾಮ ಪಂಚಾಯಿತಿ ಎದುರು ಅನಿರ್ಧಾಷ್ಟಾವಧಿ ಧರಣಿ ನಡೆಸುತ್ತಿರುವ ರೈತಸಂಘದ ಪದಾಧಿಕಾರಿಗಳು.