ಶಾಲಾ, ಕಾಲೇಜ್‌ ಬಳಿ ಪುಂಡರಿಗೆ ಪೊಲೀಸರ ಕ್ಲಾಸ್‌!

| Published : Jul 17 2024, 12:49 AM IST

ಶಾಲಾ, ಕಾಲೇಜ್‌ ಬಳಿ ಪುಂಡರಿಗೆ ಪೊಲೀಸರ ಕ್ಲಾಸ್‌!
Share this Article
  • FB
  • TW
  • Linkdin
  • Email

ಸಾರಾಂಶ

ಈ ಪೊಲೀಸರ ತಂಡ ಮಫ್ತಿಯಲ್ಲಿ ಜಿಲ್ಲೆಯ ಶಾಲಾ-ಕಾಲೇಜ್‌ಗಳ ಬಳಿ ನಿಗಾವಹಿಸುತ್ತಿದೆ. ಇನ್ನೂ ಕೆಲ ಪ್ರಮುಖ ಸ್ಥಳಗಳಲ್ಲಿ ಮಹಿಳೆಯರಿಗೆ ಚುಡಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ.

ಕೃಷ್ಣ ಎನ್‌. ಲಮಾಣಿ

ಕನ್ನಡಪ್ರಭ ವಾರ್ತೆ ಹೊಸಪೇಟೆ

ವಿಜಯನಗರ ಜಿಲ್ಲೆಯ ಶಾಲಾ, ಕಾಲೇಜ್ ಬಳಿ ಪುಂಡರ ಪಡೆ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದರೆ ತಕ್ಷಣವೇ ಪೊಲೀಸರು ಮಫ್ತಿಯಲ್ಲಿ ಪ್ರತ್ಯಕ್ಷರಾಗುತ್ತಿದ್ದಾರೆ! ಈ ಮೂಲಕ ಪುಂಡರನ್ನು ಹೆಡೆಮುರಿಕಟ್ಟುತ್ತಿದ್ದಾರೆ.

ವಿಜಯನಗರ ಎಸ್ಪಿ ಬಿ.ಎಲ್‌. ಶ್ರೀಹರಿಬಾಬು ಅವರಿಗೆ ಶಾಲಾ, ಕಾಲೇಜ್‌ಗಳ ಬಳಿ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ ವಿಶೇಷ ತಂಡ ರಚನೆ ಮಾಡಿದ್ದಾರೆ. ಈ ತಂಡ ಮಫ್ತಿಯಲ್ಲಿ ಜಿಲ್ಲೆಯ ಶಾಲಾ-ಕಾಲೇಜ್‌ಗಳ ಬಳಿ ನಿಗಾವಹಿಸುತ್ತಿದೆ. ಇನ್ನೂ ಕೆಲ ಪ್ರಮುಖ ಸ್ಥಳಗಳಲ್ಲಿ ಮಹಿಳೆಯರಿಗೆ ಚುಡಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ.

ಕಾರ್ಯಾಚರಣೆ ಹೇಗೆ?

ವಿಜಯನಗರ ಜಿಲ್ಲೆಯ ಪ್ರಮುಖ ಶಾಲಾ, ಕಾಲೇಜ್‌ಗಳು ಹಾಗೂ ಮಹಿಳೆಯರು ಓಡಾಡುವ ಸ್ಥಳಗಳಲ್ಲಿ ಈ ತಂಡ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಈಗಾಗಲೇ ಎಸ್ಪಿಯವರು ಈ ತಂಡಕ್ಕೆ ಮಾರ್ಗದರ್ಶನ ನೀಡಿದ್ದು, ಪೊಲೀಸರು ಎಂದು ಗುರುತು ಸಿಗದಂತೆ ಹಳ್ಳಿ ಜನರ ಸೋಗಿನಲ್ಲಿ ಪೊಲೀಸರು ಇರುತ್ತಾರೆ. ಇನ್ನೂ ಕೆಲವರು ಸಾಮಾನ್ಯ ಜನರಂತೇ, ಮಕ್ಕಳ ಪಾಲಕರಂತೆ ಕಾಲೇಜ್‌ ಆವರಣ ಹಾಗೂ ಕಾಲೇಜಿನ ರಸ್ತೆಯಲ್ಲಿ ತಿರುಗಾಡುತ್ತಿರುತ್ತಾರೆ. ಇನ್ನೂ ಶಾಲೆಗಳ ಬಳಿಯೂ ಈ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಬೈಕ್‌ಗಳಲ್ಲಿ ವೀಲ್ಹಿಂಗ್ ಮಾಡಿಕೊಂಡು, ಸೈರನ್‌ ಮಾಡಿಕೊಂಡು ಬಂದು ವಿದ್ಯಾರ್ಥಿನಿಯರನ್ನು ಚುಡಾಯಿಸುವವರನ್ನು ಈ ತಂಡ ಕೂಡಲೇ ವಶಕ್ಕೆ ಪಡೆಯುತ್ತಿದೆ. ವಿದ್ಯಾರ್ಥಿನಿಯರಿಗೆ ಏಕ ವಚನದಲ್ಲಿ ಬೈಯ್ಯುವುದು, ಸಿನಿಮಾ ಹಾಡುಗಳನ್ನು ಹಾಡಿ ಪೀಡಿಸುವುದು ಸೇರಿದಂತೆ ವಿವಿಧ ನೆಪದಲ್ಲಿ ಕಾಡಿಸುವ ಪಡ್ಡೆ ಹುಡುಗರ ಪಡೆಗೆ ಪೊಲೀಸರು ಮಫ್ತಿಯಲ್ಲೇ ಶಾಕ್‌ ನೀಡುತ್ತಿದ್ದಾರೆ.

ಜಾಗೃತಿ ಅಭಿಯಾನ

ಜಿಲ್ಲೆಯ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಈಗಾಗಲೇ ಶಾಲಾ-ಕಾಲೇಜ್‌ಗಳಲ್ಲಿ ಪೊಲೀಸರು ಈ ಕುರಿತು ಜಾಗೃತಿ ಅಭಿಯಾನ ಕೂಡ ನಡೆಸುತ್ತಿದ್ದಾರೆ. ಶಾಲಾ, ಕಾಲೇಜ್‌ ವಿದ್ಯಾರ್ಥಿಗಳು ಓದಿನ ಕಡೆಗೆ ಗಮನಹರಿಸಬೇಕು. ಇದನ್ನು ಬಿಟ್ಟು ಚುಡಾಯಿಸುವುದು, ಕೀಟಲೆ ಮಾಡುವುದನ್ನು ಮಾಡಿದರೆ ಖಂಡಿತ ಕೇಸ್‌ ಬೀಳುತ್ತದೆ ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಒಂದು ವೇಳೆ ಚುಡಾಯಿಸಿದರೆ ಸಂಬಂಧಿಸಿದ ಠಾಣಾಧಿಕಾರಿಗಳಿಗೆ ಕರೆ ಮಾಡಲು ಕೂಡ ವಿದ್ಯಾರ್ಥಿನಿಯರಿಗೆ ಮೊಬೈಲ್‌ ನಂಬರ್ ಕೂಡ ನೀಡಲಾಗುತ್ತಿದೆ. ವಿದ್ಯಾರ್ಥಿನಿಯರು, ಮಹಿಳೆಯರ ಜತೆಗೆ ದುರ್ವತನೆ, ಅಸಭ್ಯ ವರ್ತನೆ ಮಾಡುವ ಪುಂಡರಿಗೆ ಪಾಠ ಕಲಿಸಲು ಪೊಲೀಸರು ಕಾರ್ಯಾಚರಣೆ ಕೂಡ ನಡೆಸುತ್ತಿದ್ದಾರೆ.

ಎಲ್ಲಿ ಎಷ್ಟು ಕೇಸ್‌

ಈಗಾಗಲೇ ಜಿಲ್ಲೆಯಾದ್ಯಂತ ಮಫ್ತಿ ತಂಡ ಕಾರ್ಯಾಚರಣೆ ನಡೆಸಿ ಕರ್ನಾಟಕ ಪೊಲೀಸ್‌ ಕಾಯ್ದೆ-92 ಪ್ರಕಾರ 49 ಪೆಟ್ಟಿ ಕೇಸ್‌ಗಳನ್ನು ದಾಖಲಿಸಿದೆ. ಈ ಪ್ರಕರಣಗಳಲ್ಲಿ ಸಿಲುಕಿದ ಆರೋಪಿಗಳು ನ್ಯಾಯಾಲಯದ ಎದುರು ಹಾಜರಾಗಿ ದಂಡ ಕಟ್ಟುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಮತ್ತೊಮ್ಮೆ ಸಿಕ್ಕಿ ಬಿದ್ದರೆ, ಎಫ್‌ಐಆರ್ ಹಾಕಿ ಜೈಲಿಗೆ ಕಳುಹಿಸಲಾಗುವುದು ಎಂದು ಪುಂಡರಿಗೆ ಪೊಲೀಸರು ಎಚ್ಚರಿಕೆ ಕೂಡ ನೀಡುತ್ತಿದ್ದಾರೆ.

ಕೊಟ್ಟೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 19, ಹೊಸಪೇಟೆಯ ಪಟ್ಟಣ ಪೊಲೀಸ್‌ ಠಾಣೆಯಲ್ಲಿ 4, ಗ್ರಾಮೀಣ ಠಾಣೆಯಲ್ಲಿ 5, ಚಿತ್ತವಾಡ್ಗಿ ಠಾಣೆಯಲ್ಲಿ 5, ಟಿಬಿಡ್ಯಾಂ ಠಾಣೆಯಲ್ಲಿ 2, ಕೂಡ್ಲಿಗಿಯಲ್ಲಿ 4, ಹಗರಿಬೊಮ್ಮನಹಳ್ಳಿಯಲ್ಲಿ 4, ತಂಬ್ರಹಳ್ಳಿಯಲ್ಲಿ 2, ಮರಿಯಮ್ಮನಹಳ್ಳಿಯಲ್ಲಿ 4 ಕೇಸ್‌ಗಳನ್ನು ದಾಖಲಿಸಲಾಗಿದೆ. ಒಟ್ಟು 49 ಕೇಸ್‌ಗಳನ್ನು ದಾಖಲಿಸಿ ಪುಂಡರ ವಿರುದ್ಧ ಕಾರ್ಯಾಚರಣೆ ನಡೆಸಲಾಗಿದೆ. ಹೆಣ್ಣು ಮಕ್ಕಳನ್ನು ಚುಡಾಯಿಸುವವರ ವಿರುದ್ಧ ದೂರು ಸಲ್ಲಿಸಲು (9480805700/ 9480805716) ನಂಬರ್‌ಗೆ ಕರೆ ಮಾಡಲು ಕೂಡ ವಿಜಯನಗರ ಎಸ್ಪಿಯವರು ತಿಳಿಸಿದ್ದಾರೆ.ಉತ್ತಮ ಕಾರ್ಯ

ಜಿಲ್ಲೆಯ ಶಾಲಾ, ಕಾಲೇಜ್‌ಗಳ ಬಳಿ ಹೆಣ್ಣು ಮಕ್ಕಳಿಗೆ ಚುಡಾಯಿಸುವವರ ವಿರುದ್ಧ ಪೊಲೀಸರು ಮಫ್ತಿ ಕಾರ್ಯಾಚರಣೆ ನಡೆಸುತ್ತಿರುವುದು ಉತ್ತಮ ಕಾರ್ಯ ಆಗಿದೆ. ಕೆಲ ಶಾಲೆ, ಕಾಲೇಜ್‌ಗಳ ಬಳಿ ಚುಡಾಯಿಸುತ್ತಿದ್ದಾರೆ. ಈ ಕಾರ್ಯಾಚರಣೆ ನಿಲ್ಲಿಸದೇ ಮುಂದುವರಿಸಬೇಕು. ಇದರಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕೂ ಅನುಕೂಲ ಆಗಲಿದೆ.

ಡಾ. ಪ್ರಿಯಾಂಕಾ ಜೈನ್‌, ಮಹಿಳಾ ಹೋರಾಟಗಾರ್ತಿ ಹೊಸಪೇಟೆ.ಮೊದಲು ದಂಡ

ವಿಜಯನಗರ ಜಿಲ್ಲೆಯಲ್ಲಿ ಶಾಲಾ, ಕಾಲೇಜ್‌ಗಳ ಬಳಿ ಹೆಣ್ಣು ಮಕ್ಕಳನ್ನು ಚುಡಾಯಿಸುವವರ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಗಾಗಲೇ 49 ಕೇಸ್‌ ದಾಖಲಿಸಿ, ಕರ್ನಾಟಕ ಪೊಲೀಸ್‌ ಕಾಯ್ದೆ-92 ಪ್ರಕಾರ ಕಾನೂನು ರೀತ್ಯ ಕ್ರಮವಹಿಸಲಾಗಿದೆ. ಆರೋಪಿಗಳು ನ್ಯಾಯಾಲಯದಲ್ಲಿ ದಂಡ ಕಟ್ಟಬೇಕಾಗುತ್ತದೆ. ಮೊದಲ ಸಲ ಸಿಕ್ಕಿ ಬಿದ್ದವರಿಗೆ ಕೇಸ್‌ ದಾಖಲಿಸಿ ಎಚ್ಚರಿಕೆ ಕೂಡ ನೀಡಲಾಗುತ್ತಿದೆ. ಒಂದು ವೇಳೆ ಮತ್ತೊಮ್ಮೆ ಸಿಕ್ಕಿ ಬಿದ್ದರೆ, ಕಾನೂನು ಪ್ರಕಾರ ಎಫ್‌ಐಆರ್‌ ದಾಖಲಿಸಲಾಗುವುದು.

ಬಿ.ಎಲ್‌. ಶ್ರೀಹರಿಬಾಬು ಎಸ್ಪಿ ವಿಜಯನಗರ.