ರಸ್ತೆ ಗುಂಡಿ ಮುಚ್ಚಿದ ಪೊಲೀಸರು

| Published : Aug 25 2025, 01:00 AM IST

ಸಾರಾಂಶ

ನಿತ್ಯ ಲಾಟಿ ಹಿಡಿಯುವ ಕೈಯಿಂದ ಸಲಕಿ ಹಿಡಿದು ರಸ್ತೆಯ ಗುಂಡಿಗಳಿಗೆ ಮಣ್ಣು ಎಳೆದ ಪೊಲೀಸರು ಮಾದರಿಯಾಗಿದ್ದಾರೆ.

ಟ್ರ್ಯಾಕ್ಟರ್‌ ಮಾಲೀಕರ ಜತೆಗೂಡಿ ಶ್ರಮದಾನ ಮಾಡಿದ ಹಿರೇಹಡಗಲಿ ಪೊಲೀಸ್‌ ಠಾಣೆ ಸಿಬ್ಬಂದಿಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ನಿತ್ಯ ಲಾಟಿ ಹಿಡಿಯುವ ಕೈಯಿಂದ ಸಲಕಿ ಹಿಡಿದು ರಸ್ತೆಯ ಗುಂಡಿಗಳಿಗೆ ಮಣ್ಣು ಎಳೆದ ಪೊಲೀಸರು ಮಾದರಿಯಾಗಿದ್ದಾರೆ.

ಹೌದು, ತಾಲೂಕಿನ ಹಿರೇಹಡಗಲಿ ಪೊಲೀಸ್‌ ಠಾಣೆಯ ಪಿಎಸ್‌ಐ, ಎಎಸ್‌ಐ ಸೇರಿದಂತೆ ಎಲ್ಲ ಸಿಬ್ಬಂದಿ ವರ್ಗವು 35 ಟ್ರ್ಯಾಕ್ಟರ್‌ ಮಣ್ಣನ್ನು ತಂದು ರಸ್ತೆಯ ಗುಂಡಿಗಳಿಗೆ ಹಾಕಿ ವಾಹನಗಳು ಸರಾಗವಾಗಿ ಓಡಾಡುವಂತೆ ಮಾಡಿದ್ದಾರೆ, ಪೊಲೀಸ್‌ ಇಲಾಖೆಯ ಈ ಜನಪರ ಕಾರ್ಯಕ್ಕೆ ಎಲ್ಲ ಕಡೆಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಸರ್ಕಾರ ಮುಚ್ಚಬೇಕಿದ್ದ ರಸ್ತೆಯ ಗುಂಡಿಗಳನ್ನು ಪೊಲೀಸರೇ ಶ್ರಮದಾನದ ಮೂಲಕ ಮುಚ್ಚಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ತಾಲೂಕಿನ ಮೈಲಾರ -ತೋರಣಗಲ್ಲು ರಾಜ್ಯ ಹೆದ್ದಾರಿ ಸಂಪೂರ್ಣ ಹಾಳಾಗಿದ್ದು, ತಗ್ಗು ಗುಂಡಿಗಳಿಂದ ಆವೃತವಾಗಿತ್ತು. ನಿತ್ಯ ವಾಹನ ಸವಾರರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಾ ವಿಧಿ ಇಲ್ಲದೇ ಓಡಾಡುತ್ತಿದ್ದಾರೆ.

ರಾಜ್ಯದ ಕಾಂಗ್ರೆಸ್‌ ಸರ್ಕಾರ ಜನರಿಗೆ ನೀಡಿರುವ ಗ್ಯಾರಂಟಿ ಯೋಜನೆಗಳೇ, ಬಹುದೊಡ್ಡ ಅಭಿವೃದ್ಧಿ ಎಂದು ನಿತ್ಯ ಜಪ ಮಾಡುತ್ತಿದೆ. ಸರ್ಕಾರಕ್ಕೆ ಮತ್ತು ಲೋಕೋಪಯೋಗಿ ಇಲಾಖೆಗೆ ನಾಚಿಗೆಯಾಗುವಂತೆ ಪೊಲೀಸರು ಮತ್ತು ರೈತರು ಹಾಗೂ ಟ್ರ್ಯಾಕ್ಟರ್‌ ಮಾಲೀಕರು ಜಂಟಿಯಾಗಿ ರಸ್ತೆಯ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.

ತಾಲೂಕಿನ ಹಗರನೂರು ಗ್ರಾಮದಲ್ಲಿ ಹಾಯ್ದು ಹೋಗಿರುವ ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿ ಪ್ರತಿ ವರ್ಷವೂ ಮಳೆಗಾಲದಲ್ಲಿ ಸಂಚಾರ ಮಾಡಲಾಗದಷ್ಟು ಹದಗೆಟ್ಟು ಹೋಗುತ್ತದೆ. ಸಾರಿಗೆ ಇಲಾಖೆಯ ಬಸ್ಸುಗಳಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಈ ತಗ್ಗು ಗುಂಡಿಗಳಲ್ಲಿ ಸಂಚರಿಸುವಾಗ ಪ್ರಯಾಣಿಕರ ಮೂಳೆಯೇ ಮುರಿದು ಹೋಗಿರುವ ಪ್ರಸಂಗ ಜರುಗಿತ್ತು. ಸಾಕಷ್ಟು ರಸ್ತೆ ಅಪಘಾತಗಳು ಜರುಗಿದು ಸ್ಥಳದಲ್ಲೇ ಮೃತಪಟ್ಟಿರುವ ಪ್ರಕರಣಗಳಿಗೆ ಸಾಕ್ಷಿಯಾಗಿರುವ, ಈ ರಸ್ತೆಯಲ್ಲಿನ ಗುಂಡಿಗಳನ್ನು ಪೊಲೀಸರು ಮುಚ್ಚಿ ಪುಣ್ಯ ಕಟ್ಟಿಕೊಂಡಿದ್ದಾರೆಂದು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆ ಹಾಳಾಗಿದೆ, ಅನುದಾನ ಕೊಡಿ ಎಂದು ಸದನದಲ್ಲಿ ಶಾಸಕ ಕೃಷ್ಣನಾಯ್ಕ ಚರ್ಚಿಸಿದ್ದರು. ಆದರೆ ಸರ್ಕಾರ ಈವರೆಗೂ ರಸ್ತೆ ದುರಸ್ತಿಗೆ ಅನುದಾನ ನೀಡುವ ಯಾವುದೇ ಭರವಸೆ ಇನ್ನು ಸಿಕ್ಕಿಲ್ಲ, ಎಲ್ಲ ರಸ್ತೆಗಳಲ್ಲಿ ಅಪಾರ ಆಳ-ಆಗಲದ ಗುಂಡಿಗಳಿದ್ದರೂ, ಬೊಗಸೆ ಮಣ್ಣು ಹಾಕಲು ಲೋಕೋಪಯೋಗಿ ಇಲಾಖೆ ಬಳಿ ಅನುದಾನ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ.ಹಿರೇಹಡಗಲಿ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರತ ಸಿಬ್ಬಂದಿ ರಾತ್ರಿ ಪಾಳೆಯ ಕೆಲಸ ಮುಗಿಸಿ ಹಡಗಲಿಗೆ ಹೋಗುವ ಸಂದರ್ಭದಲ್ಲಿ ಗುಂಡಿಗಳಲ್ಲಿ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿದ್ದವು. ಈ ರೀತಿ ರಸ್ತೆಯಲ್ಲಿ ಅಪಘಾತ ಆಗಬಾರದೆಂಬ ಕಾರಣಕ್ಕಾಗಿ ಭಾನುವಾರ ಇದ್ದ ಕಾರಣ, ಮೇಲಾಧಿಕಾರಿಗಳ ಗಮನಕ್ಕೆ ತಂದು, ಠಾಣೆಯ 25ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಹಗರನೂರು, ಹಿರೇಹಡಗಲಿ ಗ್ರಾಮಸ್ಥರ ಸಹಕಾರದೊಂದಿಗೆ 45ಕ್ಕೂ ಹೆಚ್ಚು ಟ್ರ್ಯಾಕ್ಟರ್‌ ನಷ್ಟು ಮಣ್ಣು ಹಾಕಿ ರಸ್ತೆ ಗುಂಡಿ ಮುಚ್ಚಿದ್ದೇವೆ. ಸಣ್ಣ ಸೇತುವೆ ಬಳಿ ಸಾಕಷ್ಟು ಅಪಘಾತಗಳಾಗಿದ್ದು ವಾಹನ ಮುಗುಚಿ ಬಿದ್ದರೇ ರಸ್ತೆ ಸಂಪರ್ಕವೇ ಇಲ್ಲದಂತಾಗುತ್ತದೆ ಪರ್ಯಾಯ ರಸ್ತೆ ಇಲ್ಲದ ಕಾರಣ ರಸ್ತೆಯನ್ನು ಮಣ್ಣು ಹಾಕಿ ದುರಸ್ತಿ ಮಾಡಿದ್ದೇವೆ ಎಂದು ಹಿರೇಹಡಗಲಿ ಪೊಲೀಸ್‌ ಠಾಣೆ ಪಿಎಸ್‌ಐ ಭರತ್‌ ರೆಡ್ಡಿ ತಿಳಿಸಿದ್ದಾರೆ.