ಪೊಲೀಸ್ ಇಲಾಖೆಯು ಕೇವಲ ಉದ್ಯೋಗವಲ್ಲ, ಸಮಾಜ ಸೇವೆಗೆ ದೊರೆಯುವ ಒಂದು ಮಹತ್ತರವಾದ ಅವಕಾಶವಾಗಿದೆ.
ಹಳಿಯಾಳದಲ್ಲಿ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ಆಕಾಂಕ್ಷಿಗಳಿಗೆ ಮಾಹಿತಿ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ ಹಳಿಯಾಳಪೊಲೀಸ್ ಇಲಾಖೆಯು ಕೇವಲ ಉದ್ಯೋಗವಲ್ಲ, ಸಮಾಜ ಸೇವೆಗೆ ದೊರೆಯುವ ಒಂದು ಮಹತ್ತರವಾದ ಅವಕಾಶವಾಗಿದೆ. ಜೊತೆಗೆ ಗೌರವ ಹಾಗೂ ಜವಾಬ್ದಾರಿಯ ಸ್ಥಾನವಾಗಿದೆ ಎಂದು ಹಳಿಯಾಳ ಠಾಣೆಯ ಸಿಪಿಐ ಜೈಪಾಲ್ ಪಾಟೀಲ ಹೇಳಿದರು.
ಪಟ್ಟಣದ ದೇಶಪಾಡೆ ಆರ್‌ಸೆಟಿ ಸಭಾಂಗಣದಲ್ಲಿ ಸಿವಿಲ್ ಪೊಲೀಸ್ ಕಾನಸ್ಟೇಬಲ್ ಹುದ್ದೆಗಳ ಆಕಾಂಕ್ಷಿಗಳಿಗಾಗಿ ಆಯೋಜಿಸಿದ ಮಾಹಿತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.ಪೊಲೀಸ್ ಇಲಾಖೆಯ ಹುದ್ದೆಗಳಿಗೆ ಆಕಾಂಕ್ಷಿಯಾಗಲು ಬಯಸುವರು ಶಿಸ್ತು, ಸಮಯಪ್ರಜ್ಞೆ ಹಾಗೂ ನಿರಂತರ ಪರಿಶ್ರಮದ ಮೂಲಕ ತಮ್ಮ ಗುರಿಯನ್ನು ಸಾಧಿಸಬೇಕು ಎಂದರು.ಗ್ರಾಮೀಣ ಭಾಗದ ಯುವಕರು ಕೂಡ ಸೂಕ್ತ ಮಾರ್ಗದರ್ಶನ ಮತ್ತು ದೃಢಸಂಕಲ್ಪದ ಮೂಲಕ ಪೊಲೀಸ್ ಇಲಾಖೆಯಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವಾಗ ಸಮಯ ನಿರ್ವಹಣೆ, ಮಾನಸಿಕ ದೃಢತೆ ಹಾಗೂ ದೈಹಿಕ ಆರೋಗ್ಯಕ್ಕೆ ಸಮಾನವಾದ ಆದ್ಯತೆ ನೀಡಬೇಕು. ಯುವತಿಯರು ಸಹ ಪೊಲೀಸ್ ಇಲಾಖೆಯಂತಹ ಸವಾಲಿನ ಕ್ಷೇತ್ರಗಳಲ್ಲಿ ಆತ್ಮವಿಶ್ವಾಸದಿಂದ ಮುಂದೆ ಬರಬೇಕು ಎಂದು ಕರೆನೀಡಿದರು.
ಹಳಿಯಾಳ ಪಿಎಸ್‌ಐ ಬಸವರಾಜ ಮಬನೂರ ಮಾತನಾಡಿ, ಆತ್ಮವಿಶ್ವಾಸ ಮತ್ತು ನಿರಂತರ ಪ್ರಯತ್ನ ಯಶಸ್ಸಿನ ಮೂಲಮಂತ್ರಗಳಾಗಿವೆ. ಯಶಸ್ಸು ಸಾಧಿಸಲು ಅಭ್ಯರ್ಥಿಗಳು ದಿನನಿತ್ಯದ ಅಧ್ಯಯನ, ಸಾಮಾನ್ಯ ಜ್ಞಾನ ವೃದ್ಧಿ ಹಾಗೂ ದೈಹಿಕ ಕ್ಷಮತೆಯ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿ.ಆರ್.ಡಿ.ಎಮ್ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಮಾತನಾಡಿದರು.
ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ ಸಂಸ್ಥೆ ಹಾಗೂ ಹಳಿಯಾಳ ಪೋಲಿಸ್ ಇಲಾಖೆಯವರು ಜಂಟಿಯಾಗಿ ಈ ಕಾರ್ಯಾಗಾರ ಆಯೋಜಿಸಿದ್ದರು.ಆರ್ ಸೆಟಿ ಸಂಸ್ಥೆಯ ಸಂಯೋಜಕ ವಿನಾಯಕ ಚವ್ಹಾಣ ಸಂಸ್ಥೆಯಲ್ಲಿ ನೀಡಲಾಗುತ್ತಿರುವ ಕೌಶಲ್ಯಾಭಿವೃದ್ಧಿ ತರಬೇತಿ, ಸ್ವಾವಲಂಬಿ ಉದ್ಯೋಗ ಕಾರ್ಯಕ್ರಮಗಳ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಹಳಿಯಾಳ ತಾಲೂಕು ಹಾಗೂ ಸುತ್ತಮುತ್ತಲಿನ ತಾಲೂಕುಗಳಿಂದ 100ಕ್ಕೂ ಹೆಚ್ಚು ಪೊಲೀಸ್ ಹುದ್ದೆಗಳ ಆಕಾಂಕ್ಷಿಗಳು ಭಾಗವಹಿಸಿದ್ದರು. ಸಂಸ್ಥೆಯ ಉಪನ್ಯಾಸಕ ವೀರೇಶ ತಾಳಿಕೋಟಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿಗಳಾದ ಬಾಹುಬಲಿ ಚಿಣಗಿ, ವಿನೋದ ಅಗಸರ್, ಉಳವಯ್ಯಾ ಬೆಂಡಿಗೇರಿ ಮತ್ತು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.