ಹಾವೇರಿ: ಹಿರೇಕೆರೂರು ತಾಲೂಕಿನಲ್ಲಿ ಇತ್ತೀಚೆಗೆ ನಡೆದಿದ್ದ ಮನೆ ದರೋಡೆ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿ ಐವರು ಆರೋಪಿಗಳನ್ನು ಬಂಧಿಸಿದ್ದು, ಅದರಲ್ಲಿ ಪೊಲೀಸ್ ಪೇದೆಯೂ ಭಾಗಿಯಾಗಿರೋದು ಇಲಾಖೆ ಮತ್ತೊಮ್ಮೆ ತಲೆತಗ್ಗಿಸುವಂತಾಗಿದೆ.ಹಿರೇಕೆರೂರು ಪೊಲೀಸ್ ಠಾಣೆ ವ್ಯಾಪ್ತಿಯ ನಿಡನೇಗಿಲು ಗ್ರಾಮದ ಈಶ್ವರಗೌಡ ಪಾಟೀಲ ಎಂಬುವವರ ಮನೆಯಲ್ಲಿ ಜ.೧೯ರಂದು ರಾತ್ರಿ ೧೧.೪೫ರ ಸುಮಾರಿಗೆ ಆರೋಪಿಗಳು ಹಿಂಬಾಗಿಲಿನಿಂದ ನುಗ್ಗಿ, ಮನೆಯಲ್ಲಿದ್ದವರನ್ನು ಬೆದರಿಸಿ ಬೆಳ್ಳಿ, ಬಂಗಾರದ ಆಭರಣಗಳು ಹಾಗೂ ೫ ಲಕ್ಷ ರು. ನಗದು ಸೇರಿದಂತೆ ಸುಮಾರು ೨೫ ಲಕ್ಷ ರು. ಮೌಲ್ಯದ ಸ್ವತ್ತುಗಳನ್ನು ದರೋಡೆ ಮಾಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಗಳಾದ ಬ್ಯಾಡಗಿ ತಾಲೂಕಿನ ಶಿಡೆನೂರು ತಾಂಡಾದ ಮಲ್ಲೇಶಪ್ಪ ವೆಂಕಪ್ಪ ನಾಯ್ಕ (೪೭), ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಕೇರೂರಿನ ಕಾಂತೇಶ ಮುತ್ತಪ್ಪ ವಡ್ಡರ (೩೨), ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕು ಬೆಳವಡಿಯ ಅಜೇಯ ಹನುಮಂತ ಸಾಲಹಳ್ಳಿ (೨೦), ಅದೇ ಗ್ರಾಮದ ನಾಗರಾಜ ಹನಮಂತ ವಡ್ಡರ್ (೧೯) ಹಾಗೂ ಪೊಲೀಸ್ ಸಿಬ್ಬಂದಿಯಾಗಿರುವ ಹಿರೇಕೆರೂರು ತಾಲೂಕಿನ ಮುದ್ದಿನಕೊಪ್ಪದ ಪ್ರದೀಪ ಹನುಮಂತಪ್ಪ ನಾಯ್ಕ (೩೭) ಎಂಬುವವರನ್ನು ಬಂಧಿಸಿದ್ದಾರೆ. ಇನ್ನೂ ಇಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ದರೋಡೆಗೆ ಪೊಲೀಸಪ್ಪನೇ ಐಡಿಯಾ ಕೊಟ್ಟಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಬಂಧನಕ್ಕೊಳಗಾದ ಪೊಲೀಸ್.. ಪ್ರಕರಣದ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಯಶೋದಾ ವಂಟಗೋಡಿ, ಈಶ್ವರಗೌಡ ಪಾಟೀಲ್ ಮತ್ತು ಅವರ ಪತ್ನಿ ಸೇರಿದಂತೆ ಕುಟುಂಬದ ಕೆಲವರು ಘಟನೆ ನಡೆದ ರಾತ್ರಿ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ್ದರು. ಮನೆಯಲ್ಲಿ ಈಶ್ವರಗೌಡ ಅವರ ಪುತ್ರ ಮಲ್ಲನಗೌಡ, ಅವರ ಪತ್ನಿ, ತಾಯಿ, ಮಗು ಸೇರಿದಂತೆ ಐವರು ಇದ್ದರು. ಮುಸುಕುಧಾರಿಗಳಾಗಿ ಬಂದ ಆರೋಪಿಗಳು ಚಾಕು ತೋರಿಸಿ ಬೆದರಿಸಿ ಸ್ವತ್ತುಗಳನ್ನು ದರೋಡೆ ಮಾಡಿದ್ದಾರೆ ಎಂದು ತಿಳಿಸಿದರು. ಆರೋಪಿಗಳ ಪೈಕಿ ಪ್ರದೀಪ್ ಎಂಬುವವನು ಡಿಎಆರ್ ಪೊಲೀಸ್ ಸಿಬ್ಬಂದಿಯಾಗಿದ್ದು ದರೋಡೆಗೆ ಸಹಕಾರ ನೀಡಿರುವುದು ತನಿಖೆಯಲ್ಲಿ ಪತ್ತೆಯಾಗಿದ್ದು, ಆತನನ್ನು ತಕ್ಷಣ ಅಮಾನತ್ತು ಮಾಡಲಾಗುವುದು ಎಂದರು. ಪ್ರಕರಣದ ತನಿಖೆಗೆ ಪೊಲೀಸರ ೪ ತಂಡಗಳನ್ನು ರಚಿಸಲಾಗಿತ್ತು. ಆರೋಪಿಗಳಿಂದ ೭೫ ಸಾವಿರ ರು. ಮೌಲ್ಯದ ಚಿನ್ನಾಭರಣ, ಸುಮಾರು ೧೦೦ ಗ್ರಾಂ ಬೆಳ್ಳಿ, ಕೃತ್ಯಕ್ಕೆ ಬಳಸಿದ ೪ ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಲಕ್ಷ್ಮಣ ಶಿರಕೋಳ, ರಾಣೆಬೆನ್ನೂರು ಡಿವೈಎಸ್ಪಿ ಲೋಕೇಶ ಇದ್ದರು.
ದರೋಡೆ ಪ್ರಕರಣದಲ್ಲಿ ಪೊಲೀಸ್ ಪೇದೆ ಭಾಗಿ
ಹಿರೇಕೆರೂರು ತಾಲೂಕಿನಲ್ಲಿ ಇತ್ತೀಚೆಗೆ ನಡೆದಿದ್ದ ಮನೆ ದರೋಡೆ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿ ಐವರು ಆರೋಪಿಗಳನ್ನು ಬಂಧಿಸಿದ್ದು, ಅದರಲ್ಲಿ ಪೊಲೀಸ್ ಪೇದೆಯೂ ಭಾಗಿಯಾಗಿರೋದು ಇಲಾಖೆ ಮತ್ತೊಮ್ಮೆ ತಲೆತಗ್ಗಿಸುವಂತಾಗಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.