ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಪೊಲೀಸ್ ಪೇದೆ ಮನೆಯಲ್ಲಿಯೇ ಚಿನ್ನಾಭರಣ ನಗದನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಪಟ್ಟಣದಲ್ಲಿ ಜರುಗಿದೆ.ತಾಲೂಕಿನ ರಾಮಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜೀಪ್ ಚಾಲಕ ಪೊಲೀಸ್ ಪೇದೆ ಪರಮೇಶ್ ಎಂಬುವರ ಮನೆಯಲ್ಲಿಯೇ ಕಳ್ಳತನವಾಗಿರುವ ಬಗ್ಗೆ ವರದಿಯಾಗಿದೆ.
ವಿವರ:ಹನೂರು ಪಟ್ಟಣದ 11ನೇ ವಾರ್ಡಿನ ವಿನಾಯಕ ನಗರ ಬಡವಣೆಯಲ್ಲಿರುವ ರಾಮಪುರ ಪೊಲೀಸ್ ಇನ್ಸ್‌ಪೆಕ್ಟರ್ ಜೀಪ್ ಚಾಲಕ ಪೊಲೀಸ್ ಪೇದೆ ಪರಮೇಶ್ ಎಂಬುವರ ಮನೆಯ ಬೀರುವಿನಲ್ಲಿ ಇಡಲಾಗಿದ್ದ 15 ಗ್ರಾಂ ಚಿನ್ನಾಭರಣ, ಬೆಳ್ಳಿ ಪದಾರ್ಥ ಮತ್ತು 75,000 ನಗದನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ ಎಂದು ಮನೆಯ ಮಾಲಿಕ ಪೊಲೀಸ್ ಪೇದೆ ಪರಮೇಶ್ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಮಕ್ಕಳಿಗೆ ಬೇಸಿಗೆ ರಜೆ ಇದ್ದ ಕಾರಣ ತಮ್ಮ ಸ್ವಗ್ರಾಮಕ್ಕೆ ಕುಟುಂಬ ಸಮೇತ ತೆರಳಿದ್ದರು. ಮಕ್ಕಳ ಪರೀಕ್ಷೆ ಫಲಿತಾಂಶದ ಮಾಹಿತಿ ಪಡೆಯಲು ಮತ್ತೆ ಮನೆಗೆ ಆಗಮಿಸಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಮನೆಯ ಹಿಂಭಾಗದ ಬಾಗಿಲನ್ನು ಮುರಿದು ಮನೆಗೆ ನುಗ್ಗಿರುವ ಕಳ್ಳರು ಮನೆಯ ಬೇರುವಿನಲ್ಲಿ ಇಡಲಾಗಿದ್ದ ನಗದು, ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಹನೂರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಕರಣದ ಕಲಿಸಿಕೊಂಡು ಘಟನೆ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ಕರೆಸಿ ಕಳ್ಳತನವಾಗಿರುವ ಬಗ್ಗೆ ಕೂಲಂಕುಶವಾಗಿ ಪೊಲೀಸರು ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.