ಸಾರಾಂಶ
ಕೊಪ್ಪಳ: ದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಮತ್ತು ಜನರಿಗೆ ಅಗತ್ಯ ರಕ್ಷಣೆ ನೀಡುವಲ್ಲಿ ಪೊಲೀಸ್ ಕೊಡುಗೆ ಅಪಾರವಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಹೇಳಿದರು.
ಅವರು ಮಂಗಳವಾರ ಕೊಪ್ಪಳ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ಸೈನಿಕರು ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿ ದೇಶ ರಕ್ಷಣೆ ಮಾಡಿದರೆ ಪೊಲೀಸರು ಜನರ ಮಧ್ಯದಲ್ಲಿದ್ದುಕೊಂಡೇ ಎಲ್ಲರಿಗೂ ರಕ್ಷಣೆ ನೀಡುತ್ತಾರೆ. ಪ್ರವಾಹ, ವಿಪತ್ತು ಸೇರಿದಂತೆ ಹಲವಾರು ಆಪತ್ತು ಸಂದರ್ಭಗಳಲ್ಲಿ ಜನರನ್ನು ರಕ್ಷಿಸಲು ತಮ್ಮ ಜೀವನದ ಹಂಗನ್ನು ತೊರೆದು ಕಾರ್ಯನಿರ್ವಹಿಸುವ ಪೊಲೀಸರ ಸೇವೆ ಬಹಳ ಮಹತ್ವದ್ದಾಗಿದೆ. ಪೊಲೀಸ್ ಕರ್ತವ್ಯ ನಿಷ್ಠೆಗೆ ಅವರ ಕುಟುಂಬ ಸದಸ್ಯರ ಸಹಕಾರ ಕೂಡ ಸಾಕಷ್ಟಿದೆ. ಹುತಾತ್ಮ ಪೊಲೀಸರ ಸ್ಮರಣೆ ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಬಾರದು. ನಮ್ಮ ದೇಶದಲ್ಲಿ ಇತ್ತೀಚೆಗೆ ಹುತಾತ್ಮರಾದ ಪೊಲೀಸ್‌ರ ಕುಟುಂಬಗಳಿಗೆ ನಾವೆಲ್ಲರೂ ಆತ್ಮಸ್ಥೈರ್ಯ ತುಂಬಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್.ಅರಸಿದ್ಧಿ ಮಾತನಾಡಿ, ರಾಷ್ಟ್ರದಾದ್ಯಂತ ಇಂದು ಪೊಲೀಸ್ ಹುತಾತ್ಮರ ದಿನ ಆಚರಿಸುತ್ತಿದ್ದು, ಈ ಮೂಲಕ ಹುತಾತ್ಮ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಗೌರವ ಸಲ್ಲಿಸಲಾಗುತ್ತದೆ. 1957ರ ಅ.21ರಂದು ಸಿ.ಆರ್.ಪಿ.ಎಫ್.ನ ಒಂದು ಪೋಲಿಸ್ ಪಡೆಯು ಡಿಎಸ್ಪಿ ಕರಣ್‌ಸಿಂಗ್ ನೇತೃತ್ವದಲ್ಲಿ ಭಾರತ-ಚೀನಾ ಗಡಿಭಾಗದಲ್ಲಿ ಗಸ್ತು ಮಾಡುವಾಗ ಚೀನಾ ದೇಶದ ಸೈನಿಕರು ಭಾರತದಲ್ಲಿ ಅತಿಕ್ರಮಣ ಮಾಡಿದ್ದರು. ಆಗ ಭಾರತೀಯ ಪೊಲೀಸರಲ್ಲಿ ಕೇವಲ ಕೆಲ ರೈಪಲ್‌ಗಳಿದ್ದವು. ಚೀನಾದ ಸೈನಿಕರ ಹತ್ತಿರ ಆಧುನಿಕ ಶಸ್ತ್ರಗಳಿದ್ದವು. ಆದರೂ ಸಹ ಭಾರತದ ಪೊಲೀಸರು ಅತೀ ಧೈರ್ಯ ಮತ್ತು ಸಾಹಸದಿಂದ ತಮ್ಮ ಕೊನೆಯ ಉಸಿರಿನವರೆಗೂ ವೈರಿಗಳ ಜೊತೆ ಯುದ್ಧ ಮಾಡಿದರು. ಆ ಸಮಯದಲ್ಲಿ ಹತ್ತು ಪೊಲೀಸ್ ಅಧಿಕಾರಿಗಳು ಹುತಾತ್ಮರಾದರು. ಉಳಿದವರನ್ನು ಚೀನಾದವರು ಬಂಧಿಸಿದರು. ಈ ಎಲ್ಲ ವೀರರು ದೇಶಕ್ಕಾಗಿ ತಮ್ಮ ಪ್ರಾಣವನ್ನೆ ಬಲಿಧಾನಕೊಟ್ಟ ಆ ದಿನದ ಮತ್ತು ಹುತಾತ್ಮರ ನೆನಪಿಗಾಗಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ದೇಶ ರಕ್ಷಣೆಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಪೋಲಿಸರ ಸ್ಮರಣೆಗಾಗಿ ಈ ದಿನವನ್ನು ಪೊಲೀಸ್ ಹುತಾತ್ಮರ ದಿನಾಚರಣೆ ಆಚರಿಸುತ್ತಾ ಬರಲಾಗುತ್ತಿದೆ ಎಂದರು.ಕರ್ತವ್ಯ ಪಾಲನೆಯಲ್ಲಿ ಪೊಲೀಸ್ ಪಡೆಗಳು ತಮ್ಮ ಜೀವನ ಮುಡಿಪಾಗಿಟ್ಟು ಹೋರಾಡಿ ಹುತಾತ್ಮರಾದವರನ್ನು ಇಂದು ನಾವು ಸ್ಮರಿಸಬೇಕಾಗಿದೆ ಎಂದು ಹೇಳಿದ ಅವರು, ಕಳೆದ ಒಂದು ವರ್ಷದಲ್ಲಿ ನಮ್ಮ ದೇಶದಲ್ಲಿ ಹುತಾತ್ಮರಾದ ಎಲ್ಲ ಪೊಲೀಸರನ್ನು ಇದೇ ವೇಳೆಯಲ್ಲಿ ಸ್ಮರಿಸಿದರು.
ಪೊಲೀಸ್ ಹುತಾತ್ಮರಿಗೆ ಗೌರವ ಸಮರ್ಪಣೆ:ಕಾರ್ಯಕ್ರಮದ ಆರಂಭದಲ್ಲಿ ಪೊಲೀಸ್ ಸ್ಮಾರಕಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಇತರೆ ಅಧಿಕಾರಿಗಳು ಹಾಗೂ ಹಲವು ಗಣ್ಯರು ಪುಷ್ಪನಮನ ಸಲ್ಲಿಸಿದರು.
ಹುತಾತ್ಮರಾದ ಪೊಲೀಸರಿಗೆ ಗೌರವ ಸಮರ್ಪಣೆಗಾಗಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಲಾಯಿತು ಮತ್ತು ಮೌನಾಚಾರಣೆ ಆಚರಿಸಲಾಯಿತು. ಕೊಪ್ಪಳ ಜಿಲ್ಲೆಯಲ್ಲಿ ಕರ್ತವ್ಯದ ವೇಳೆ ಇತ್ತೀಚೆಗೆ ನಿಧನರಾದ ಪೊಲೀಸ್ ಕುಟುಂಬದ ಸದಸ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಹೇಮಂತ ಕುಮಾರ್ ಸೇರಿದಂತೆ ಡಿವೈಎಸ್ಪಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಹಲವು ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.