ಪ್ರಕರಣವನ್ನು ಬೆನ್ನು ಹತ್ತಿದ ಪೊಲೀಸರು ಆರೋಪಿಗಳಾದ ​ಈರಪ್ಪ ಹನುಮಂತಪ್ಪ ಕುದರಿ(34), ​ಮಹಾಂತೇಶ ರಂಗಪ್ಪ ಹದ್ದಿ(30), ​ರತ್ನಾ(ರಾಮವ್ವ) ಈರಪ್ಪ ಕುದರಿ(27) ಬಂಧಿತ ಆರೋಪಿಗಳಾಗಿದ್ದಾರೆ.

​ಗದಗ: ತಾಲೂಕಿನ ಹುಯಿಲಗೋಳ ಗ್ರಾಮದ ಹೊರವಲಯದಲ್ಲಿರುವ ಆಲಿ ಹಳ್ಳದ ಸೇತುವೆ ಕೆಳಗೆ ನಡೆದಿದ್ದ ಭೀಕರ ಕೊಲೆ ಪ್ರಕರಣವನ್ನು ಗದಗ ಗ್ರಾಮೀಣ ಠಾಣೆಯ ಪೊಲೀಸರು ಕೇವಲ 48 ಗಂಟೆಗಳಲ್ಲಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಮಾ. 28ರಂದು ಆಲಿ ಹಳ್ಳದ ಬ್ರಿಡ್ಜ್ ಕೆಳಗೆ ಸುಮಾರು 30 ವರ್ಷದ ವ್ಯಕ್ತಿಯ ಅರ್ಧ ಮರ್ಧ ಸುಟ್ಟ ಸ್ಥಿತಿಯ ಶವ ಪತ್ತೆಯಾಗಿತ್ತು. ಮೃತನನ್ನು ಹುಯಿಲಗೋಳ ಗ್ರಾಮದ ಚಂದ್ರು ಬಸವರಾಜ ಕುರಿ ಎಂದು ಗುರುತಿಸಲಾಗಿತ್ತು. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಸಾಕ್ಷ್ಯ ನಾಶದಡಿ(ನಂ. 75/2026, ಕಲಂ 103[1], 239 ಬಿಎನ್ಎಸ್) ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಬೆನ್ನು ಹತ್ತಿದ ಪೊಲೀಸರು ಆರೋಪಿಗಳಾದ ​ಈರಪ್ಪ ಹನುಮಂತಪ್ಪ ಕುದರಿ(34), ​ಮಹಾಂತೇಶ ರಂಗಪ್ಪ ಹದ್ದಿ(30), ​ರತ್ನಾ(ರಾಮವ್ವ) ಈರಪ್ಪ ಕುದರಿ(27) ಬಂಧಿತ ಆರೋಪಿಗಳಾಗಿದ್ದಾರೆ.

ವಿಚಾರಣೆಯ ವೇಳೆ ಆರೋಪಿಗಳು ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಮೃತ ಚಂದ್ರು ಕುರಿ, ಆರೋಪಿ ರತ್ನಾ ಎಂಬಾಕೆಯೊಂದಿಗೆ ಕಳೆದ ನಾಲ್ಕೈದು ವರ್ಷಗಳಿಂದ ಸಲುಗೆಯಿಂದ ಇದ್ದು, ಪದೇ ಪದೇ ಫೋನ್ ಮಾಡಿ ಪೀಡಿಸುತ್ತಿದ್ದ ಎನ್ನಲಾಗಿದೆ. ಈ ವಿಷಯ ತಿಳಿದ ರತ್ನಾಳ ಪತಿ ಈರಪ್ಪ ಮತ್ತು ಆಕೆಯ ಅಣ್ಣ ಮಹಾಂತೇಶ ಅವರು ಚಂದ್ರುಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಆದರೂ ಚಂದ್ರು ತನ್ನ ವರ್ತನೆ ತಿದ್ದಿಕೊಳ್ಳದಿದ್ದಾಗ, ಆರೋಪಿಗಳು ಆತನನ್ನು ಕೊಲೆ ಮಾಡಿದ್ದಾರೆ.ಮಾ. 24ರಂದು ರಾತ್ರಿ ರತ್ನಾಳ ಮೂಲಕ ಫೋನ್ ಮಾಡಿಸಿ ಚಂದ್ರುವನ್ನು ಮನೆಗೆ ಕರೆಸಿಕೊಳ್ಳಲಾಗಿತ್ತು. ಅಲ್ಲಿಂದ ಆತನನ್ನು ಬೈಕ್ ಮೇಲೆ ಆಲಿ ಹಳ್ಳದ ಬ್ರಿಡ್ಜ್ ಕೆಳಗೆ ಕರೆದೊಯ್ದು, ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾರೆ. ನಂತರ ಗುರುತು ಸಿಗಬಾರದೆಂಬ ಉದ್ದೇಶದಿಂದ ಪೆಟ್ರೋಲ್ ಸುರಿದು ಶವಕ್ಕೆ ಬೆಂಕಿ ಹಚ್ಚಿ ಸಾಕ್ಷ್ಯ ನಾಶಪಡಿಸಿದ್ದರು.ಎಸ್ಪಿ ರೋಹನ್ ಜಗದೀಶ ನಿರ್ದೇಶನದಲ್ಲಿ ಗದಗ ಗ್ರಾಮೀಣ ಪಿಐ ಸಿದ್ದರಾಮೇಶ್ವರ ಗಡೇದ, ಪಿಎಸ್‌ಐಗಳಾದ ಎಸ್.ಬಿ. ಕವಲೂರ, ವಿ.ಜಿ. ಪವಾರ ಮತ್ತು ಸಿಬ್ಬಂದಿಗಳಾದ ಪ್ರಕಾಶ ಗಾಣಿಗೇರ, ಎನ್.ಜಿ. ಮಜ್ಜಗಿ, ಎಂ.ಬಿ. ವಡ್ಡಟ್ಟಿ, ಎಂ.ಐ. ಪಾಟೀಲ ಹಾಗೂ ತಾಂತ್ರಿಕ ವಿಭಾಗದ ಗುರುರಾಜ ಬೂದಿಹಾಳ ಒಳಗೊಂಡ ತಂಡವು ಆರೋಪಿಗಳನ್ನು ಧಾರವಾಡ ಜಿಲ್ಲೆಯ ಯರಗುಪ್ಪಿ ಗ್ರಾಮದಲ್ಲಿ ಬಂಧಿಸಿದೆ.​ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ಮತ್ತು ಚಾಕುವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಿದ ತಂಡಕ್ಕೆ ಇಲಾಖೆ ಪ್ರಶಂಸೆ ವ್ಯಕ್ತಪಡಿಸಿದೆ.