ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ನಗರದಲ್ಲಿ ಸಮರ್ಪಕ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಹಾಗೂ ಟ್ರಾಫಿಕ್ ಪೊಲೀಸ್ ವ್ಯವಸ್ಥೆ ಇಲ್ಲದೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಅಮಾಯಕರ ಜೀವಗಳು ಬಲಿಯಾಗುತ್ತಿದ್ದರೂ ಶಾಸಕರು ಸೇರಿದಂತೆ ತಾಲೂಕು ಆಡಳಿತವಾಗಲಿ, ಪೊಲೀಸ್ ಇಲಾಖೆಯಾಗಲಿ ಅಗತ್ಯ ಕ್ರಮಕೈಗೊಳ್ಳದೆ ಜಾಣಕುರುಡು ಪ್ರದರ್ಶಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಜನತೆ ಆಕ್ರೋಶ ವ್ಯ ವ್ಯಕ್ತಪಡಿಸಿದ್ದಾರೆ.ನಗರದಲ್ಲಿ ಹಾಯ್ದು ಹೋಗುವ ಬಿ.ಎಚ್. ರಸ್ತೆ ನಗರದ ಒಳಗಡೆ ಸುಮಾರು ೬ ಕಿಲೋಮೀಟರ್ ಉದ್ದವಿದ್ದು ಈ ರಸ್ತೆಯಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು ಅವುಗಳ ನಿಯಂತ್ರಣಕ್ಕೆ ಯಾವುದೇ ಕ್ರಮಕೈಗೊಳ್ಳದ ಕಾರಣ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ನಗರದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಲಕ್ಷಾಂತರ ರೂ ವೆಚ್ಚದಲ್ಲಿ ಸಿಗ್ನಲ್ ಲೈಟ್ ಅಳವಡಿಸುತ್ತೇವೆಂದು ನಗರದ ಪ್ರಮುಖ ರಸ್ತೆಗಳಲ್ಲಿ ಸಿಗ್ನಲ್ ಲೈಟ್‌ಗಳನ್ನು ತಂದು ಅಳವಡಿಸಿದ್ದು ಬಿಟ್ಟರೆ ಈವರೆಗೂ ಕಾರ್ಯಾರಂಭ ಮಾಡುತ್ತಿಲ್ಲ. ಹಾಸನ ಸರ್ಕಲ್, ಐಬಿ ಸರ್ಕಲ್, ಗುರುದರ್ಶನ್ ಸರ್ಕಲ್, ನಗರದ ಮಧ್ಯ ಭಾಗದಲ್ಲಿರುವ ಮೋರ್, ಎಸ್‌ಬಿಐ ಬ್ಯಾಂಕ್, ಗುರುಕುಲ ಸೂಪರ್ ಮಾರ್ಕೆಟ್, ಜಯದೇವ ಕಾಂಪ್ಲೆಕ್ಸ್, ಕೆನರಾ ಬ್ಯಾಂಕ್, ನಗರಸಭಾ ಸರ್ಕಲ್, ರೈಲ್ವೆ ಸ್ಟೇಷನ್ ರಸ್ತೆ, ಅರಳೀಕಟ್ಟೆ ಸರ್ಕಲ್ ಸೇರಿದಂತೆ ದೊಡ್ಡಪೇಟೆ ರಸ್ತೆ, ಕೋಡಿಸರ್ಕಲ್‌ಗಳು ಜನಜಂಗಳಿಯಿಂದ ಕೂಡಿದ್ದು ಜನರು ರಸ್ತೆ ದಾಟಬೇಕೆಂದರೆ ಅಥವಾ ಅಂಗಡಿಗಳಿಗೆ ಹೋಗಬೇಕೆಂದರೆ ಜೀವವನ್ನು ಕೈಲಿಡಿದು ಓಡಾಡಬೇಕಿದೆ.
ಶಾಲಾ ಕಾಲೇಜು ಮಕ್ಕಳಿಗೆ ಸಮಸ್ಯೆಇನ್ನೂ ನಗರದಲ್ಲಿರುವ ಬಹುತೇಕ ಶಾಲಾ ಕಾಲೇಜುಗಳು ನಗರದ ಬಿ.ಹೆಚ್. ರಸ್ತೆಯನ್ನು ಹೊಂದಿಕೊಂಡಂತಿವೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಬಾಲಕಿಯರ ಕಾಲೇಜು, ಬಾಲಕರ ಕಾಲೇಜು, ಕಲ್ಪತರು ಪಲ್ಲಾಗಟ್ಟಿ, ಕಲ್ಪತರು ತಾಂತ್ರಿಕ ಮಹಾವಿದ್ಯಾಲಯ, ಎಸ್‌ವಿಪಿ, ಬಾಲಕರ ಕಾಲೇಜು ಹೀಗೆ ವಿವಿಧ ಶಾಲಾ ಕಾಲೇಜುಗಳಿಗೆ ಸಾವಿರಾರು ವಿದ್ಯಾರ್ಥಿಗಳು ಬಂದು ಹೋಗುತ್ತಾರೆ. ಅಲ್ಲದೆ ನೂರಾರು ಸಂಖ್ಯೆಯಲ್ಲಿ ಪಾದಚಾರಿಗಳು ಓಡಾಡುತ್ತಾರೆ. ಆದರೆ ಬಿ.ಎಚ್.ರಸ್ತೆಯಲ್ಲಿ ಹಾಕಿಸಿರುವ ಹಂಪ್ಸ್‌ಗಳಿಗೆ ಬಹುವರ್ಣದ ಪಟ್ಟೆಗಳು ಮತ್ತು ಬ್ಲಿಂಕಿಂಗ್ ಲೈಟ್‌ಗಳನ್ನು ಅಳವಡಿಸಿದ ಕಾರಣ ಹಂಪ್ಸ್‌ಗಳು ಇರುವುದೇ ವಾಹನ ಸವಾರರಿಗೆ ತಿಳಿಯದೆ ನಿತ್ಯ ಹತ್ತಾರು ಅಪಘಾತಗಳುಂಟಾಗುತ್ತಿದ್ದು ವಿದ್ಯಾರ್ಥಿಗಳು, ಸಾರ್ವಜನಿಕರು ಭಯದಿಂದ ರಸ್ತೆ ದಾಟುವಂತಾಗಿದೆ.
ಪೊಲೀಸರ ನಿಗಾ ಅಗತ್ಯ : ಪ್ರತಿ ಶಾಲೆಗಳ ಮುಂದೆ ಶಾಲೆ ಪ್ರಾರಂಭವಾದಾಗ ಮತ್ತು ಬಿಡುವಾಗ ಪೊಲೀಸ್ ವ್ಯವಸ್ಥೆ ಕಲ್ಪಿಸಬೇಕು, ಬಾಲಕಿಯರ ಶಾಲಾಕಾಲೇಜು ಮುಂಭಾಗ ಹಾಗೂ ಮುಖ್ಯ ರಸ್ತೆಯಲ್ಲಿ ವೀಲ್ಹಿಂಗ್ ಮಾಡುವ ಪುಂಡರ ಮೇಲೆ ಅಗತ್ಯ ಕ್ರಮಕೈಗೊಂಡು ಬ್ರೇಕ್ ಹಾಕುವ ಕೆಲಸ ಮಾಡಬೇಕು. ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಚಂದನಾ ಸ್ಥಿತಿ ಮತ್ತೊಮ್ಮೆ ಯಾರಿಗೂ ಬಾರದಿರಲಿ. ಬದುಕಿ ಬಾಳಬೇಕಿದ್ದ ಜೀವನದಲ್ಲಿ ಆಸೆ, ಕನಸುಗಳನ್ನು ಕಂಡಿದ್ದ ಅಮಾಯಕ ಬಾಲಕಿ ಅತಿ ಚಿಕ್ಕವಯಸ್ಸಿನಲ್ಲಿಯೇ ಅಪಘಾತಕ್ಕೀಡಾಗಿದ್ದು ಬಹುದೊಡ್ಡ ದುರಂತ. ಈಕೆಯ ತಂದೆತಾಯಿಗಳಿಗೆ ಬಂದಿರುವ ನೋವು ಮತ್ತೆ ಮರುಕಳಿಸದಂತೆ ಪೊಲೀಸ್ ಇಲಾಖೆ ಕ್ರಮವಹಿಸಬೇಕೆಂದು ಆಗ್ರಹಿಸಿದ್ದಾರೆ.