ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ಕೈಗಾರಿಕಾ ಪ್ರದೇಶಗಳ ಸುರಕ್ಷತೆಗಾಗಿ ಅಗತ್ಯ ಭದ್ರತೆಯನ್ನು ಒದಗಿಸಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಕೈಗಾರಿಕೋದ್ಯಮಿಗಳಿಗೆ ಭರವಸೆ ನೀಡಿದರು.ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ತೆಯ ಸಭಾಂಗಣದಲ್ಲಿ ಜರುಗಿದ ಕೈಗಾರಿಕೋದ್ಯಮಿಗಳ ಕುಂದು ಕೊರತೆಗಳು ಹಾಗೂ ಬೇಡಿಕೆಗಳ ಮನವಿ ಕುರಿತ ಸಂವಾದ ಸಭೆಯಲ್ಲಿ ಅವರು ಮಾತನಾಡಿದರು.
ಕೈಗಾರಿಕೋದ್ಯಮಿಗಳು ಮತ್ತು ಪೊಲೀಸರ ನಡುವೆ ಸದಾ ಸಮನ್ವಯತೆ ಇರಬೇಕು. ಕೈಗಾರಿಕಾ ಪ್ರದೇಶಗಳಲ್ಲಿ ರೌಡಿಗಳು, ಗೂಂಡಾಗಳು, ಹಫ್ತಾ ವಸೂಲಿ, ಬ್ಲಾಕ್‌ಮೇಲ್ ಮಾಡುವಂತಹ ವ್ಯಕ್ತಿಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರೆ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.ಹಿರೇಹಳ್ಳಿ, ಅಂತರಸನಹಳ್ಳಿ ಮತ್ತು ಸತ್ಯಮಂಗಲ ಪೊಲೀಸ್ ಔಟ್ ಪೋಸ್ಟ್ ಸ್ಥಾಪನೆ ಮಾಡುವುದು ಹಾಗೂ ನಿತ್ಯ ಪೊಲೀಸ್ ಗಸ್ತನ್ನು ಹೆಚ್ಚಿಸಬೇಕೆಂಬ ಕೈಗಾರಿಕೋದ್ಯಮಿಗಳ ಬೇಡಿಕೆಗೆ ಸ್ಪಂದಿಸಿದ ಎಸ್ಪಿ , ಸೂಕ್ತ ಸ್ಥಳ ನೀಡಿದರೆ ಪೊಲೀಸ್ ಔಟ್ ಪೋಸ್ಟ್ ಸ್ಥಾಪಿಸಿ ಭದ್ರತೆ ಒದಗಿಸಲು ಸಿದ್ದರಿದ್ದೇವೆ ಎಂದರು.
ಕೈಗಾರಿಕಾ ಪ್ರದೇಶಗಳಲ್ಲಿ ಭದ್ರತೆ ಹಿತ ದೃಷ್ಟಿಯಿಂದ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಜತೆಗೆ ಕೈಗಾರಿಕಾ ಪ್ರದೇಶಗಳಲ್ಲಿ ಅಗತ್ಯ ಇರುವ ಕಡೆ ರಸ್ತೆ ಉಬ್ಬುಗಳನ್ನು ಹಾಕಲಾಗುವುದು ಹಾಗೂ ಅದಕ್ಕೆ ಬಣ್ಣ ಬಳೆಯಲಾಗುವುದು ಎಂದು ತಿಳಿಸಿದರು.ಸತ್ಯಮಂಗಲ ಕೈಗಾರಿಕಾ ಪ್ರದೇಶದ ಸರ್ವೀಸ್ ರಸ್ತೆಗಳಿಂದ ಮಧುಗಿರಿ ರಸ್ತೆಯಲ್ಲಿ ಅಂತರಸನಹಳ್ಳಿ ಬೈಪಾಸ್ ಬ್ರಿಡ್ಜ್ ಬಳಿ ಬರುವುದಕ್ಕೆ ಸಂಪರ್ಕ ಇಲ್ಲದಿರುವುದರಿಂದ ತೊಂದರೆಯಾಗುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಕೂಡಲೇ ಈ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು.
ಸತ್ಯಮಂಗಲ ಕೈಗಾರಿಕಾ ಪ್ರದೇಶದಲ್ಲಿ ಭಾರಿ ಲಾರಿಗಳನ್ನು ರಸ್ತೆಯಲೇ ರಿಪೇರಿ ಕೆಲಸ ಮಾಡುವ ಸಲುವಾಗಿ ಪಾರ್ಕಿಂಗ್ ಮಾಡುತ್ತಿದ್ದು, ಇದರಿಂದ ವಾಹನ ಚಾಲನೆ ದುಸ್ತರವಾಗಿದೆ. ಅಲ್ಲದೆ ಕಾರ್ಮಿಕರು ನಡೆದಾಡಲು ಕೂಡ ಅಪಾಯಕಾರಿಯಾಗಿದೆ ಎಂದು ಕೈಗಾರಿಕೋದ್ಯಮಿಗಳು ಎಸ್ಪಿ ಅಶೋಕ್ ರವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಅವರು, ಆ ಸ್ಥಳಕ್ಕೆ ಶೀಘ್ರ ಭೇಟಿ ನೀಡಿ ಪರಿಶೀಲನೆ ಮಾಡುತ್ತೇವೆ. ಜೊತೆಗೆ ಕೈಗಾರಿಕಾ ಪ್ರದೇಶಗಳಲ್ಲಿ ಸಂಜೆ 7 ಗಂಟೆಯ ನಂತರ ಕುಡುಕರ ಹಾವಳಿ ಹಾಗೂ ಕಳ್ಳತನ ವಿಪರೀತವಾಗಿರುವ ಬಗ್ಗೆಯೂ ನನ್ನ ಗಮನಕ್ಕೆ ಬಂದಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಮುಂದಾಗುತ್ತೇವೆ ಎಂದರು.ಕೈಗಾರಿಕಾ ಪ್ರದೇಶಗಳಲ್ಲಿ ಹೈಮಾಸ್ಟ್ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ತೊಂದರೆಯಾಗುತ್ತಿದೆ ಎಂದು ಕೈಗಾರಿಕೋದ್ಯಮಿಗಳು ಹೇಳಿದಾಗ ಅಗತ್ಯ ಇರುವ ಕಡೆ ಇನ್ನೂ ಹೆಚ್ಚಿನ ಹೈಮಾಸ್ಟ್ ಲೈಟ್ ಪೋಲ್‌ಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.
ಕೈಗಾರಿಕಾ ಪ್ರದೇಶಗಳಲ್ಲಿ ರಸ್ತೆಯ ತಿರುವುಗಳಲ್ಲಿ ನಾಮಫಲಕಗಳನ್ನು ಅಳವಡಿಸಬೇಕೆಂಬ ಮನವಿಗೆ ಸ್ಪಂದಿಸಿದ ಎಸ್ಪಿ ಅಶೋಕ್ ಅವರು ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಜತೆ ಚರ್ಚಿಸಿ ಪೂರಕವಾದ ಕಾರ್ಯಕ್ಕೆ ಶ್ರಮಿಸುತ್ತೇವೆ ಎಂದು ಹೇಳಿದರು.ಅಂತರಸನಹಳ್ಳಿ ಹ್ಯಾಂಡ್ ಟೂಲ್ ಕಾಂಪ್ಲೆಕ್ಸ್ ಕೈಗಾರಿಕಾ ಪ್ರದೇಶದಿಂದ ಮಧುಗಿರಿ ಮುಖ್ಯ ರಸ್ತೆಗೆ ಸೇರುವಾಗ ಹೆಚ್ಚು ಅಫಘಾತಗಳು ಸಂಭವಿಸುತ್ತಿದ್ದು, ರಸ್ತೆ ಉಬ್ಬುಗಳನ್ನು ನಿರ್ಮಿಸಿ ಕೊಡಬೇಕು ಎಂಬ ಕೈಗಾರಿಕೋದ್ಯಮಿಗಳು ಮನವಿಗೆ ಸ್ಪಂದಿಸಿದ ಅವರು, ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಲಾಗುವುದು ಎಂದರು.
ನಗರದ ಹಲವೆಡೆ ಈ ಸಮಸ್ಯೆ ಇದ್ದು, ಜನ ಅರಿತುಕೊಳ್ಳಬೇಕು. ರಿಂಗ್ ರೋಡ್ ಸುತ್ತಲೂ ಹಾಗೂ ನಗರದ ಕೆಲವು ಕಡೆ ವ್ಯಾಪಾರಸ್ಥರು ರಸ್ತೆಯನ್ನು ಆಕ್ರಮಣ ಮಾಡಿದ್ದಾರೆ. ಈ ಬಗ್ಗೆಯೂ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಪರಿಹಾರ ಒದಗಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಅಡಿಷನಲ್ ಎಸ್ಪಿ ಪುರುಷೋತ್ತಮ್, ಟಿಡಿಸಿಸಿಐ ಅಧ್ಯಕ್ಷ ಪಿ.ಆರ್.ಕುರಂದವಾಡ್, ಉಪಾಧ್ಯಕ್ಷ ಸಿ.ಎಸ್.ಸಂಜಯ್, ಗೌರವ ಕಾರ್ಯದರ್ಶಿ ಟಿ.ಎನ್.ಶ್ರೀಕಂಠ ಸ್ವಾಮಿ, ಜಂಟಿ ಕಾರ್ಯದರ್ಶಿ ಎಂ.ಎಸ್.ಉಮೇಶಯ್ಯ, ಖಜಾಂಚಿ ರವಿಶಂಕರ್ ಮತ್ತಿತರರು ಭಾಗವಹಿಸಿದ್ದರು.