ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಪೊಲೀಸ್ ಇಲಾಖೆಯ ಸುವರ್ಣ ಮಹೋತ್ಸವದ ಪ್ರಯುಕ್ತ ಭಾರತೀಯ ಸ್ಟೇಟ್ ಬ್ಯಾಂಕ್ ಸಹಯೋಗದಲ್ಲಿ ಮಾ.10ರಂದು 5 ಹಾಗೂ 10 ಕಿ.ಮೀ. ಓಟದ ಸ್ಪರ್ಧೆ ಆಯೋಜಿಸಲಾಗಿದೆ.
ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸೋಮವಾರ ಸುವರ್ಣ ಮಹೋತ್ಸವದ ಲೋಗೋ ಮತ್ತು ಟೀ ಶರ್ಟ್ ಬಿಡುಗಡೆಗೊಳಿಸಿ ಮಾತನಾಡಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಮಟ್ಟದಲ್ಲಿ ‘ಫಿಟ್‌ನೆಸ್ ಫಾರ್ ಆಲ್’ ಶೀರ್ಷಿಕೆಯಡಿ ಈ ಓಟದ ಸ್ಪರ್ಧೆ ಏರ್ಪಡಿಸಲಾಗಿದೆ.
ಈ ಓಟದ ಮುಖಾಂತರ ಮಾದಕ ವಸ್ತು ಮುಕ್ತ ಕರ್ನಾಟಕ, ಸೈಬರ್ ಕ್ರೈಂ ಮತ್ತು ಹಸಿರು ಬೆಂಗಳೂರು ಎಂಬ ನಾಲ್ಕು ಮಾದರಿಯಲ್ಲಿ ಜಾಗೃತಿ ಮೂಡಿಸುವುದಾಗಿ ತಿಳಿಸಿದರು.
ವಿಜೇತರಿಗೆ ಆಕರ್ಷಕ ಬಹುಮಾನ: ಮಾ.10ರಂದು ವಿಧಾನಸೌಧದ ಎದುರು ಓಟ ಪ್ರಾರಂಭವಾಗಲಿದ್ದು, ಕಬ್ಬನ್ ಉದ್ಯಾನದ ಮುಖಾಂತರ ಸಾಗಿ ವಿಧಾನಸೌಧದ ಎದುರೇ ಮುಕ್ತಾಯಗೊಳ್ಳಲಿದೆ. ಪೊಲೀಸ್, ಪಬ್ಲಿಕ್ ಹಾಗೂ ಎಸ್‌ಬಿಐ ಎಂಬ ಮೂರು ವಿಭಾಗಗಳಲ್ಲಿ 5 ಕಿ.ಮೀ. ಮತ್ತು 10 ಕಿ.ಮೀ. ಓಟ ನಡೆಯಲಿದೆ.
ನಿಗದಿತ ಸಮಯಕ್ಕೆ 10 ಕಿ.ಮೀ. ಓಟಕ್ಕೆ ಪ್ರಥಮ ಬಹುಮಾನ ₹1 ಲಕ್ಷ ಮತ್ತು ಐದು ಕಿ.ಮೀ. ಓಟದಲ್ಲಿ ಪ್ರಥಮ ಬಹುಮಾನ ₹40 ಸಾವಿರ ನೀಡಲಾಗುತ್ತದೆ. ಅಂದರೆ, ಮೂರು ವಿಭಾಗಗಳಲ್ಲಿ ಪುರುಷರು ಮತ್ತು ಮಹಿಳಾ ವಿಜೇತರಿಗೆ ಪ್ರತ್ಯೇಕವಾಗಿ ನಗದು ಬಹುಮಾನ ನೀಡಲಾಗುತ್ತದೆ. ಅಂತೆಯೇ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೂ ಪ್ರತ್ಯೇಕವಾಗಿ ಬಹುಮಾನ ನೀಡುವುದಾಗಿ ಹೇಳಿದರು.
ಟೀ ಶರ್ಟ್, ಪದಕ: ಓಟ ನಡೆಯುವ ಆಯ್ದ ಸ್ಥಳಗಳಲ್ಲಿ ಪೊಲೀಸ್ ಬ್ಯಾಂಡ್ ತಂಡವು ಪ್ರದರ್ಶನ ನೀಡಲಿದೆ. ಓಟದ ಕೊನೆಯಲ್ಲಿ ಕರ್ನಾಟಕ ಪೊಲೀಸ್ ಮೌಂಟೆಂಡ್ ಕಂಪನಿಯ ಕುದುರೆಗಳು ಭಾಗವಹಿಸಲಿವೆ.
ಕರ್ನಾಟಕ ಪೊಲೀಸ್ ಇಲಾಖೆಯ ಅತ್ಯುತ್ತಮ ಓಟಗಾರರು ಸಹ ಈ ಓಟದಲ್ಲಿ ಭಾಗವಹಿಸಲಿದ್ದಾರೆ. ಹಿರಿಯ ನಾಗಕರಿಕರು, ಹವ್ಯಾಸಿ ಹಾಗೂ ವೃತ್ತಿಪರ ಓಟಗಾರರು ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಎಲ್ಲಾ ಸ್ಪರ್ಧಿಗಳಿಗೆ ಟೀ-ಶರ್ಟ್ ಹಾಗೂ ಉಪಹಾರದ ವ್ಯವಸ್ಥೆ ಇರಲಿದೆ. ಓಟ ಪೂರ್ಣಗೊಳಿಸುವವರಿಗೆ ಪದಕ ನೀಡುವುದಾಗಿ ತಿಳಿಸಿದರು.ಡಿಜಿಪಿ ಕರ್ನಾಟಕ ಕಪ್
ವಿಜೇತರಿಗೆ ರಾಜ್ಯ ಪೊಲೀಸ್ ಇಲಾಖೆಯಿಂದ ‘ಡಿಜಿಪಿ ಕರ್ನಾಟಕ ಕಪ್’ ನೀಡಲು ನಿರ್ಧರಿಸಲಾಗಿದೆ. 10 ಕಿ.ಮೀ, ಓಟವನ್ನು ಮೊದಲು ಪೂರ್ಣಗೊಳಿಸುವ ಪುರುಷ ಮತ್ತು ಮಹಿಳಾ ಓಟಗಾರರಿಗೆ ತಲಾ ₹50 ಸಾವಿರ ನಗದು ಬಹುಮಾನದ ಜತೆಗೆ ಡಿಜಿಪಿ ಕರ್ನಾಟಕ ಕಪ್ ನೀಡಲಾಗುವುದು. ಇದರೊಂದಿಗೆ ವಿಜೇತರಿಗೆ ಒಟ್ಟು ₹1.50 ಲಕ್ಷ ಬಹುಮಾನ ನೀಡುವುದಾಗಿ ಅಲೋಕ್ ಮೋಹನ್ ಹೇಳಿದರು.ಜಿಲ್ಲಾ ಮಟ್ಟದಲ್ಲೂ ಓಟ
ಈ ಓಟದ ಸ್ಪರ್ಧೆ ಬೆಂಗಳೂರು ಸೇರಿದಂತೆ ಜಿಲ್ಲಾ ಮಟ್ಟದಲ್ಲೂ ನಡೆಯಲಿದೆ. ಆಯಾಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಓಟದ ಸ್ಪರ್ಧೆ ನಡೆಯಲಿದೆ. ಇಲ್ಲಿ ವಿಜೇತರಾದವರಿಗೂ ಆಕರ್ಷಕ ಬಹುಮಾನ ನೀಡುವುದಾಗಿ ಡಿಜಿಪಿ ಅಲೋಕ್ ಮೋಹನ್ ತಿಳಿಸಿದರು.ಇಲ್ಲಿ ನೋಂದಾಯಿಸಿ
ಓಟದಲ್ಲಿ ಭಾಗವಹಿಸುವ ಆಸಕ್ತರು www.click2race.com ಜಾಲತಾಣದ ಮುಖಾಂತರ ನೋಂದಣಿ ಮಾಡಿಕೊಳ್ಳಬಹುದು.