ಸಾರಾಂಶ
ತಾಲೂಕಿನಲ್ಲಿ ಮುಂದಿನ ಮೂರು ತಿಂಗಳ ಕಾಲ ಕುಡಿಯುವ ನೀರಿನ ತೊಂದರೆ ಆಗದಂತೆ ಅಧಿಕಾರಿಗಳು ಎಚ್ಚರವಹಿಸಲು ಸಚಿವ ಈಶ್ವರ ಖಂಡ್ರೆ ಸಲಹೆ ನೀಡಿದರು.
ಭಾಲ್ಕಿ: ತಾಲೂಕಿನಲ್ಲಿ ಮುಂದಿನ ಮೂರು ತಿಂಗಳ ಕಾಲ ಕುಡಿಯುವ ನೀರಿನ ತೊಂದರೆ ಆಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಅಧಿಕಾರಿಗಳು ಮತ್ತು ಪಿಡಿಓಗಳ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿ, ಬೇಸಿಗೆ ಪ್ರಾರಂಭಗೊಂಡಿದ್ದು, ಪಟ್ಟಣ ಸೇರಿ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಎಲ್ಲಿಯು ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು.ಅಗತ್ಯ ಇರುವ ಕಡೆಗಳಲ್ಲಿ ಕೊಳವೆ ಬಾವಿ, ತೆರೆದ ಬಾವಿ ಬಾಡಿಗೆ ಪಡೆದು ಜನರಿಗೆ ನೀರಿನ ಸಮಸ್ಯೆ ನೀಗಿಸಬೇಕು. ಜೆಸ್ಕಾಂ ಅಧಿಕಾರಿಗಳು ಕುಡಿಯುವ ನೀರಿನ ವ್ಯವಸ್ಥೆ ಇರುವ ಕಡೆಗಳಲ್ಲಿ ವಿದ್ಯುತ್ ಕಡಿತ ಆಗದಂತೆ ಎಚ್ಚರ ವಹಿಸಬೇಕು ಎಂದರು.
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ವಾರದೊಳಗೆ ಬರಬಹುದು. ಅರ್ಧಕ್ಕೆ ನಿಂತ ಮನೆಗಳ ಹಣ ಕೂಡ ಬಿಡುಗಡೆ ಆಗುತ್ತಿದೆ. ಅಧಿಕಾರಿಗಳು ತಕ್ಷಣ ಜಿಪಿಎಸ್ ಮಾಡಿಸಿ ಅರ್ಹ ಫಲಾನುಭವಿಗಳ ಖಾತೆಗೆ ಹಣ ವರ್ಗಾಯಿಸಬೇಕು. ಬಡವರಿಂದ ಹಣ ವಸೂಲಿ ಮಾಡುವುದು. ಅನಗತ್ಯ ತೊಂದರೆ ಕೊಟ್ಟಿದ್ದು ಕಂಡು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ತಹಸೀಲ್ದಾರ ಶ್ರೀಯಂಕಾ ಧನಶ್ರೀ, ತಾಪಂ ಅಧಿಕಾರಿ ಸೂರ್ಯಕಾಂತ ಬಿರಾದಾರ, ಎಡಿ ಚಂದ್ರಶೇಖರ ಬನ್ನಾಳೆ ಇದ್ದರು.