ಸಾರಾಂಶ
ಬೆಂಗಳೂರು : ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿ ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿಸಲು ರಾತ್ರಿ ರಾತ್ರಿ 8 ರಿಂದ 10 ಗಂಟವೆರೆಗೆ ಮಾತ್ರ ಅವಕಾಶವಿದೆ. ನಿಗದಿತ ಸಮಯ ಉಲ್ಲಂಘಿಸಿ ಪಟಾಕಿ ಸಿಡಿಸಿದರೆ ನ್ಯಾಯಾಲಯದ ಆದೇಶ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಎಚ್ಚರಿಕೆ ನೀಡಿದ್ದಾರೆ.
ದೀಪಾವಳಿ ಹಬ್ಬದ ಆಚರಣೆ ಹಿನ್ನಲೆಯಲ್ಲಿ ನಾಗರಿಕರಿಗೆ ಕೆಲ ಸೂಚನೆಗಳನ್ನು ನೀಡಿರುವ ಆಯುಕ್ತರು. ಹಸಿರು ಪಟಾಕಿಗಳನ್ನು ಬಳಸಿ ಪರಿಸರ ಉಳಿಸುವಂತೆ ಕರೆ ನೀಡಿದ್ದಾರೆ.
ಆಯುಕ್ತರ ಸೂಚನೆಗಳು
1.ಹಸಿರು ಪಟಾಕಿಗಳನ್ನು ಖರೀದಿಸಿ, ಪಟಾಕಿ ಖರೀದಿಸುವ ಮುನ್ನ ಪಟಾಕಿ ಬಾಕ್ಸ್‌ಗಳ ಮೇಲಿರುವ ಕ್ಯೂ.ಆರ್‌ಕೋಡ್ ಸ್ಯ್ಯಾನ್ ಮಾಡಿ ಖಚಿತಪಡಿಸಿಕೊಳ್ಳಿ.
2.ಉತ್ತಮ ಗುಣಮಟ್ಟದ ಪಟಾಕಿಗಳನ್ನು ಅಧಿಕೃತವಾಗಿ ಪರವಾನಿಗೆ ಪಡೆದ ಅಂಗಡಿ/ಮಳಿಗೆಗಳಿಂದ ಖರೀದಿಸಿ
3.ಅತಿ ಹೆಚ್ಚು ಶಬ್ಧ, ವಾಯುಮಾಲಿನ್ಯ ಉಂಟು ಮಾಡುವ ಪಟಾಕಿ ಖರೀದಿಸಬೇಡಿ, ಹಳೆಯ ಪಟಾಕಿ ಖರೀದಿಸಬೇಡಿ
4.ಪಟಾಕಿಗಳನ್ನು ಚಿಕ್ಕ ಮಕ್ಕಳು ಹಚ್ಚಲು ಅವಕಾಶ ಮಾಡಿಕೊಡಬೇಡಿ. ಮಕ್ಕಳ ಜತೆ ಪೋಷಕರು ಸಹ ಜೊತೆಯಲ್ಲಿದ್ದು ಸುರಕ್ಷಿತವಾಗಿ ಪಟಾಕಿ ಹಚ್ಚಿಸಬೇಕು
5.ಜನನಿಬಿಡ ಪ್ರದೇಶ, ಮುಖ್ಯ ರಸ್ತೆ ಹಾಗೂ ವಾಹನಗಳನ್ನು ಪಾರ್ಕಿಂಗ್ ಮಾಡಿರುವ ಸ್ಥಳಗಳಲ್ಲಿ ಪಟಾಕಿ ಸಿಡಿಸಬಾರದು.
6.ತೆರೆದ ಮೈದಾನ ಹಾಗೂ ಜನಜಂಗುಳಿ ಕಡಿಮೆ ಇರುವ ಪ್ರದೇಶಗಳಲ್ಲಿ ಸುರಕ್ಷಿತ ಕ್ರಮ ಅನುಸರಿಸಿ ಪಟಾಕಿ ಹೆಚ್ಚಿ
6. ಆಸ್ಪತ್ರೆ, ಪೆಟ್ರೋಲ್ ಬಂಕ್, ಅನಿಲ ಕೇಂದ್ರಗಳು, ಧಾರ್ಮಿಕ ಸ್ಥಳಗಳು, ವೃದ್ಧಾಶ್ರಮ ಹಾಗೂ ಶಿಶುಪಾಲನಾ ಕೇಂದ್ರ ಸುತ್ತ ಪಟಾಕಿ ಸಿಡಿಸಬಾರದು.
7.ಪಟಾಕಿಗಳನ್ನು ಸಿಡಿಸುವಾಗ ಮೂಕ ಪ್ರಾಣಿಗಳಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಿ
8.ಪಟಾಕಿ ಸಿಡಿಸುವ ವೇಳೆ ಕೈಗಳಿಗೆ ಗ್ಲೌಸ್ ಧರಿಸುವುದು, ಕಣ್ಣುಗಳಿಗೆ ಸುರಕ್ಷತಾ ಕನ್ನಡಕಗಳನ್ನು ಧರಿಸುವುದು ಹಾಗೂ ಅಗ್ನಿನಂದಿಸುವ ನೀರು, ಮರಳು, ಬೆಂಕಿನಂದಿಸುವ ಸಿಲಿಂಡರ್‌ಗಳನ್ನು ಹತ್ತಿರದಲ್ಲಿ ಇಟ್ಟುಕೊಳ್ಳುವುದು.
9.ಪಟಾಕಿ ಹಚ್ಚುವ ವೇಳೆಯಲ್ಲಿ ಹತ್ತಿಯ ಬಟ್ಟೆಯನ್ನು ಧರಿಸುವುದು ಉತ್ತಮ. ಆದಷ್ಟು ಸಿಂಥಟೆಕ್, ನೈಲಾನ್, ಪಾಲಿಸ್ಟರ್ ಬಟ್ಟೆಗಳನ್ನು ಧರಿಸಬೇಡಿ.
10.ಕೈಯಲ್ಲಿ ಪಟಾಕಿಗಳನ್ನು ಹಿಡಿದು ಹಚ್ಚುವುದು ಅಪಾಯಕಾರಿ. ದೇಹದ ಸೂಕ್ಷ್ಮ ಅಂಗಾಂಗಗಳಾದ ಕಿವಿ, ಕಣ್ಣು, ಬಾಯಿ, ಅಂಗಗಳ ಮೇಲೆ ಹೆಚ್ಚು ಗಮನವಿರಲಿ. ಪ್ರಥಮ ಚಿಕಿತ್ಸಾ ಪೆಟ್ಟಿಗೆ ಹತ್ತಿರದಲ್ಲಿಟ್ಟುಕೊಳ್ಳುವುದು. ಅವಘಡಗಳು ಸಂಭವಿಸಿದರೆ ಕೂಡಲೇ 112 ಹಾಗೂ 108ಕ್ಕೆ ಕರೆ ಮಾಡಬೇಕು.
11.ಠುಸ್ ಆಗಿರುವ ಪಟಾಕಿಗಳನ್ನು ಗುಡ್ಡೆ ಹಾಕಿ ಬೆಂಕಿ ಹಚ್ಚುವುದು ಹೆಚ್ಚು ಅಪಾಯಕಾರಿ.
12.ಪಟಾಕಿ ಸಿಡಿಸಿದ ನಂತರ ಮೈದಾನ/ರಸ್ತೆಗಳು/ಮನೆ ಮುಂದಿನ ಅಂಗಳಗಳಲ್ಲಿ ಸ್ವಚ್ಚತೆ ಕಾಪಾಡುವುದು.