ನಾಗಮಂಗಲದಲ್ಲಿ ಗಣೇಶ ವಿಸರ್ಜನಾ ಪೂರ್ವ ಪೊಲೀಸರ ಪಥ ಸಂಚಲನ

| Published : Aug 30 2025, 01:00 AM IST

ಸಾರಾಂಶ

ಗಣೇಶ ಮತ್ತು ಈದ್‌ಮಿಲಾದ್ ಹಬ್ಬದ ಪ್ರಯುಕ್ತ ಪೊಲೀಸ್ ಇಲಾಖೆ ವತಿಯಿಂದ ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ಹಾಗಾಗಿ ಸಾರ್ವಜನಿಕರು ಶಾಂತಿ ಸುವ್ಯವಸ್ಥೆ ಕಾಪಾಡುವ ಜೊತೆಗೆ ಸಣ್ಣ ಪುಟ್ಟ ಅಹಿತಕರ ಘಟನೆಗಳಿಗೂ ಅವಕಾಶ ನೀಡದಂತೆ ಯಾವುದೇ ಭಯವಿಲ್ಲದೆ ಸಂಭ್ರಮ ಸಡಗರ ಮತ್ತು ಶ್ರದ್ಧಾಭಕ್ತಿಯಿಂದ ಹಬ್ಬವನ್ನು ಆಚರಿಸಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಗಣೇಶ ವಿಸರ್ಜನಾ ಪೂರ್ವ ಮೆರವಣಿಗೆ ಮತ್ತು ಈದ್‌ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದ 250ಕ್ಕೂ ಹೆಚ್ಚು ಪೊಲೀಸರು ಮತ್ತು ಗೃಹರಕ್ಷಕದಳದ ಸಿಬ್ಬಂದಿ ಪಟ್ಟಣದಲ್ಲಿ ಶುಕ್ರವಾರ ಪಥ ಸಂಚಲನ ನಡೆಸಿದರು.

ಪಟ್ಟಣದಲ್ಲಿ ಗುರುತಿಸಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಸಂಚರಿಸಿದ ಪಥ ಸಂಚಲನ ತಂಡ ನಿಮ್ಮೊಂದಿಗೆ ನಾವಿದ್ದೇವೆಂದು ಜನರಲ್ಲಿ ವಿಶ್ವಾಸ ಮೂಡಿಸುವ ಜೊತೆಗೆ, ಶಾಂತಿ ಕದಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವ ಸಂದೇಶ ರವಾನಿಸಿದರು.

ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡ ಪೊಲೀಸ್ ಪಥ ಸಂಚಲನ ಟಿ.ಮರಿಯಪ್ಪ ವೃತ್ತದ ಮಾರ್ಗವಾಗಿ ಚಾಮರಾಜನಗರ - ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಹಳೇ ಟೋಲ್‌ಗೇಟ್ ಬಳಿ ತಿರುವು ಪಡೆದು ಮೆಕ್ಕಾ ಮಸೀದಿ ರಸ್ತೆ ಮೂಲಕ ಮುಸ್ಲಿಂ ಬ್ಲಾಕ್‌ಗಳಲ್ಲಿ ಸಂಚರಿಸಿ ಮಾಯಣ್ಣಗೌಡನಕೊಪ್ಪಲು ರಸ್ತೆ ಮೂಲಕ ಮೈಸೂರು ರಸ್ತೆಗೆ ಬಂದು ಕನ್ನಿಕಾಪರಮೇಶ್ವರಿ ದೇವಸ್ಥಾನದ ರಸ್ತೆ, ಕುಂಬಾರಬೀದಿ, ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ರಸ್ತೆ, ಪಡುವಲಪಟ್ಟಣ ರಸ್ತೆಯ ಬಡಗೂಡಮ್ಮದೇವಿ ಸರ್ಕಲ್, ಬ್ರಾಹ್ಮಣರ ಬೀದಿಗಳಲ್ಲಿ ಸಂಚರಿಸಿದ ಬಳಿಕ ಪುನಃ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಮುಕ್ತಾಯಗೊಳಿಸಲಾಯಿತು.

ಈ ವೇಳೆ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಗಣೇಶ ಮತ್ತು ಈದ್‌ಮಿಲಾದ್ ಹಬ್ಬದ ಪ್ರಯುಕ್ತ ಪೊಲೀಸ್ ಇಲಾಖೆ ವತಿಯಿಂದ ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ಹಾಗಾಗಿ ಸಾರ್ವಜನಿಕರು ಶಾಂತಿ ಸುವ್ಯವಸ್ಥೆ ಕಾಪಾಡುವ ಜೊತೆಗೆ ಸಣ್ಣ ಪುಟ್ಟ ಅಹಿತಕರ ಘಟನೆಗಳಿಗೂ ಅವಕಾಶ ನೀಡದಂತೆ ಯಾವುದೇ ಭಯವಿಲ್ಲದೆ ಸಂಭ್ರಮ ಸಡಗರ ಮತ್ತು ಶ್ರದ್ಧಾಭಕ್ತಿಯಿಂದ ಹಬ್ಬವನ್ನು ಆಚರಿಸಬೇಕು ಎಂದು ಮನವಿ ಮಾಡಿದರು.

ಪಟ್ಟಣದಲ್ಲಿ ಸೆ.4ರಂದು ಸಾಮೂಹಿಕ ಗಣೇಶ ವಿಸರ್ಜನೆ ಮತ್ತು ಸೆ.5ರಂದು ಈದ್‌ಮಿಲಾದ್ ಹಬ್ಬವಿದೆ. ನಂತರದಲ್ಲಿ ಅನೇಕ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯುವುದರಿಂದ ಸೂಕ್ತ ಪೊಲೀಸ್ ಭದ್ರತೆ ಮಾಡಲಾಗುತ್ತಿದೆ. ಇದರ ಒಂದು ಭಾಗವಾಗಿ ಪಟ್ಟಣದಲ್ಲಿ ಸುಮಾರು 250ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ, ಸಿಬ್ಬಂದಿ, ಗೃಹರಕ್ಷಕದಳ, ಕೆಎಸ್‌ಆರ್‌ಪಿ ಮತ್ತು ಡಿಆರ್ ತುಕಡಿಗಳೊಂದಿಗೆ ರೂಟ್ ಮಾರ್ಚ್ ನಡೆಸಲಾಗಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಮಂಡ್ಯ ನಗರ ಸೇರಿ ಶ್ರೀರಂಗಪಟ್ಟಣದಲ್ಲಿಯೂ ಕೂಡ ರೂಟ್ ಮಾರ್ಚ್ ನಡೆಸಲಾಗುವುದು. ಒಟ್ಟಾರೆ ಈ ಬಾರಿ ಗಣೇಶೋತ್ಸವ ಮತ್ತು ಈದ್‌ಮಿಲಾದ್ ಹಬ್ಬಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಇಲಾಖೆ ಎಲ್ಲ ರೀತಿಯಲ್ಲಿಯೂ ಸಜ್ಜಾಗಿದೆ ಎಂದರು.

ಕಳೆದ ವರ್ಷ ಪಟ್ಟಣದಲ್ಲಿ ಗಣೇಶ ಮೆರವಣಿಯಲ್ಲಿ ಉಂಟಾದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 55 ಮಂದಿಯನ್ನು ವಶಕ್ಕೆ ಪಡೆದು 24 ಪ್ರಕರಣಗಳನ್ನು ದಾಖಲು ಮಾಡಲಾಗಿತ್ತು. ಆ ಪ್ರಕರಣದ ತನಿಖೆ ಮುಗಿದು ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸುಮಾರು 189 ಜನರ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಅವರೆಲ್ಲರ ಮೇಲೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಜೊತೆಗೆ ಹಬ್ಬಗಳಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಸಬಹುದೆಂಬ ಕಾರಣಕ್ಕೆ ಅವರ ಚಟುವಟಿಕೆ, ಚಲನವಲನಗಳ ಬಗ್ಗೆ ಹದ್ದಿನ ಕಣ್ಣಿರಿಸಲಾಗಿದೆ. ಈ ಬಾರಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಎಲ್ಲ ರೀತಿಯಲ್ಲಿಯೂ ಸಜ್ಜಾಗಿದೆ ಎಂದರು.

ನಿಯಮ ಉಲ್ಲಂಘಿಸಿದರೆ ಕ್ರಮ:

ಸುಪ್ರೀಂ ಕೊರ್ಟ್ ಆದೇಶದಂತೆ ರಾತ್ರಿ ಹಗಲು ಮತ್ತು ಜನವಸತಿ ಪ್ರದೇಶಗಳಿಗೆ ನಿಗದಿಪಡಿಸಿರುವ ಡಿಸಿಬಲ್ ಪ್ರಮಾಣದ ಸ್ಪೀಕರ್ ಬಾಕ್ಸ್‌ಗಳನ್ನು ಮಾತ್ರ ಬಳಕೆ ಮಾಡಬೇಕು. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯೂ ಕೂಡ ಮಾರ್ಗಸೂಚಿ ನೀಡಿದೆ. ಈ ಹಿನ್ನೆಲೆಯಲ್ಲಿ ಗಣೇಶೋತ್ಸವದಲ್ಲಿ ನಿಯಮಾನುಸಾರ ಸೌಂಡ್ ಬಾಕ್ಸ್ ಬಳಸುವವರಿಗೆ ಮಾತ್ರ ಅನುಮತಿ ನೀಡಲಾಗುವುದು. ದೊಡ್ಡ ಪ್ರಮಾಣದ ಡಿಜೆ ಬಳಕೆಗೆ ಯಾವುದೇ ಕಾರಣಕ್ಕೂ ಅವಕಾಶವಿಲ್ಲ. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಎಎಸ್ಪಿ ತಿಮ್ಮಯ್ಯ, ಡಿವೈಎಸ್ಪಿ ಬಿ.ಚಲುವರಾಜು, ಸಿಪಿಐ ನಿರಂಜನ್, ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಿವಕುಮಾರ್, ಪಿಎಸ್‌ಐಗಳಾದ ವೈ.ಎನ್.ರವಿಕುಮಾರ್, ರಾಜೇಂದ್ರ, ಮಾರುತಿ ಸೇರಿ 4 ಕೆಎಸ್‌ಆರ್‌ಪಿ, 2 ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸೇರಿ ಒಟ್ಟು 250 ಕ್ಕೂ ಹೆಚ್ಚು ಖಾಕಿಪಡೆ ಪಥಸಂಚಲನ ನಡೆಸಿದರು.