ಕರಾವಳಿಯಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರೂ, ಕಳ್ಳಮಾರ್ಗದಲ್ಲಿ ಮರಳು ಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ.
ಇಬ್ಬರ ವಿರುದ್ಧ ಪ್ರಕರಣ ದಾಖಲು
ಕನ್ನಡಪ್ರಭ ವಾರ್ತೆ ಕಾರವಾರಕರಾವಳಿಯಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರೂ, ಕಳ್ಳಮಾರ್ಗದಲ್ಲಿ ಮರಳು ಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕಾರವಾರ ಗ್ರಾಮೀಣ ಠಾಣಾ ಪೊಲೀಸರು ನಡೆಸಿದ ದಿಢೀರ್ ಕಾರ್ಯಾಚರಣೆಯಲ್ಲಿ, ಪರವಾನಗಿ ಇಲ್ಲದೇ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಒಂದನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಾರವಾರ ತಾಲೂಕಿನ ಕಿನ್ನರ ಗ್ರಾಮದ ಕಾಳಿ ನದಿಯ ಹಿನ್ನೀರಿನ ಪ್ರದೇಶದಲ್ಲಿ ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೆ ಅಕ್ರಮವಾಗಿ ಮರಳು ತೆಗೆಯಲಾಗಿತ್ತು. ಸರ್ಕಾರಕ್ಕೆ ತೆರಿಗೆ ವಂಚಿಸಿ, ಪರಿಸರಕ್ಕೆ ಹಾನಿ ಉಂಟುಮಾಡಿ, ಸ್ವಂತ ಲಾಭಕ್ಕಾಗಿ ಮರಳು ಮಾರಾಟ ಮಾಡಲು ಸಂಚು ರೂಪಿಸಲಾಗಿತ್ತು. ಶುಕ್ರವಾರ ಬೆಳಗ್ಗೆ ಸುಮಾರು 7.15ರ ಸುಮಾರಿಗೆ ಈ ಅಕ್ರಮ ದಂಧೆ ಬಯಲಿಗೆ ಬಂದಿದೆ. ಕಿನ್ನರ ಕಡೆಯಿಂದ ಕಾರವಾರದ ಕಡೆಗೆ ಸಾಗುವ ರಾಜ್ಯ ಹೆದ್ದಾರಿ-06ರಲ್ಲಿ ಕಡವಾಡ ಕ್ರಾಸ್ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಕೆಎ 30/ಬಿ 9936 ನೋಂದಣಿ ಸಂಖ್ಯೆಯ ಟಿಪ್ಪರ್ ಲಾರಿಯನ್ನು ತಡೆದು ಪರಿಶೀಲಿಸಿದಾಗ, ಅದರಲ್ಲಿ ಸುಮಾರು ₹10,000 ಮೌಲ್ಯದ (ಅಂದಾಜು 1 ಬ್ರಾಸ್) ಮರಳು ಪತ್ತೆಯಾಗಿದೆ. ಕಟ್ಟಡ ನಿರ್ಮಾಣಕ್ಕೆ ಬಳಸುವ ಈ ಮರಳನ್ನು ಕಳ್ಳತನದಿಂದ ಸಾಗಿಸುತ್ತಿದ್ದ ಆರೋಪದ ಮೇಲೆ ಟಿಪ್ಪರ್ ಚಾಲಕನನ್ನು ಸ್ಥಳದಲ್ಲೇ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಸದಾಶಿವಗಡದ ಅರ್ಜುನಕೋಟ ಮೂಲದ ಟಿಪ್ಪರ್ ಚಾಲಕ ಕಾರ್ತಿಕ್ ರವಿ ಗೌಡ, ನಗರದ ನಂದನಗದ್ದಾದ ತೇಲಂಗ ರೋಡ್ ನಿವಾಸಿ ಅನೂಪ ಧನವಂತ ಮ್ಹಾಳಸೇಕರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ನೇಹಾಲ ಖಾನ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
