ಗದಗ: ಕಳೆದ ಹಲವಾರು ವರ್ಷಗಳಿಂದ ಗದಗ- ಬೆಟಗೇರಿ ಅವಳಿ ನಗರದಾದ್ಯಂತ ಸ್ಪಾಗಳ ಹೆಸರಿನಲ್ಲಿ ನಡೆಯುತ್ತಿದ್ದ ಅಕ್ರಮಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಗುರುವಾರ ಮಹತ್ವದ ದಾಳಿ ನಡೆಸಿ, ಪರಿಶೀಲನೆ ನಡೆಸಿ, ಮುನ್ನೆಚ್ಚರಿಕಾ ತಪಾಸಣೆ ಕೈಗೊಂಡಿದ್ದು, ಅವಳಿ ನಗರದಾದ್ಯಂತ ಸಂಚಲನಕ್ಕೆ ಕಾರಣವಾಗಿದೆ.

ಒಟ್ಟು 6 ಸ್ಪಾ ಹಾಗೂ ಸಲೂನ್‌ಗಳಲ್ಲಿ ನಡೆಸಿದ ತಪಾಸಣೆ ಸಂದರ್ಭದಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ಪತ್ತೆಯಾಗಿಲ್ಲ. ಆದರೆ ಹಲವು ಸಂಸ್ಥೆಗಳಲ್ಲಿ ಅಗತ್ಯ ದಾಖಲೆಗಳು, ಪರವಾನಗಿಗಳು ಹಾಗೂ ಕಾನೂನುಬದ್ಧ ಅನುಮತಿಗಳು ಸಮರ್ಪಕವಾಗಿ ಲಭ್ಯವಿಲ್ಲದಿರುವುದು ಪರಿಶೀಲನೆಯ ವೇಳೆ ಕಂಡುಬಂದಿದೆ.

ಸುಳಿವು ಸಿಕ್ಕಿತ್ತೇ?: ಗುರುವಾರ ದಾಳಿಯ ಬಗ್ಗೆ ಸ್ಪಾ ನಡೆಸುವ ಮಾಲೀಕರಿಗೆ ಸುಳಿವು ಸಿಕ್ಕಿತ್ತೆ ಎನ್ನುವ ಸಂಶಯ ಬಲವಾಗಿ ಕಾಡುತ್ತಿದೆ. ಸ್ಪಾ ಸೆಂಟರ್‌ಗಳಲ್ಲಿ ಅಕ್ರಮ ನಡೆಯುತ್ತದೆ ಎನ್ನುವ ಚರ್ಚೆ ಅವಳಿ ನಗರಾದ್ಯಂತ ಹಲವಾರು ತಿಂಗಳುಗಳಿಂದಲೇ ಕೇಳಿ ಬರುತ್ತಲೇ ಇತ್ತು. ಆದರೆ ಅಧಿಕಾರಿಗಳು ದಾಳಿ ಮಾಡಿದ ವೇಳೆಯಲ್ಲಿ ಯಾವುದೇ ಅಕ್ರಮ ಕಂಡುಬರದೇ ಇರುವುದು ಕೂಡಾ ಆಶ್ಚರ್ಯಕ್ಕೆ ಕಾರಣವಾಗಿದೆ.

ಸ್ಥಗಿತ: ತಪಾಸಣೆ ವೇಳೆ ವ್ಯಾಪಾರ ಪರವಾನಗಿ, ಅಗ್ನಿ ಸುರಕ್ಷತಾ ಪ್ರಮಾಣಪತ್ರ, ಆರೋಗ್ಯ ಇಲಾಖೆಯ ಅನುಮತಿ, ವಿದ್ಯುತ್ ಸುರಕ್ಷತೆಗೆ ಸಂಬಂಧಿಸಿದ ದಾಖಲೆಗಳು ಸೇರಿದಂತೆ ವಿವಿಧ ದಾಖಲೆಗಳ ಪರಿಶೀಲನೆ ನಡೆಸಲಾಯಿತು. ದಾಖಲೆಗಳಲ್ಲಿ ಕಂಡುಬಂದ ಕೊರತೆಗಳ ಕುರಿತು ಸಮಗ್ರ ವರದಿ ಸಿದ್ಧಪಡಿಸಿ, ಕಾನೂನುಬದ್ಧವಾಗಿ ಸಂಬಂಧಿತ ಸಂಸ್ಥೆಗಳಿಗೆ ದಾಖಲೆಗಳು ಮತ್ತು ಪರವಾನಗಿ ವರದಿಗಳನ್ನು ಸಲ್ಲಿಸಬೇಕು.

ಸ್ಪಾ ಹಾಗೂ ಸಲೂನ್‌ಗಳಿಗೆ ಸಂಬಂಧಿಸಿದ ಪರವಾನಗಿಗಳನ್ನು ನೀಡುವ ಮತ್ತು ಅವುಗಳ ಕಾರ್ಯಾಚರಣೆಯನ್ನು ನಿಯಂತ್ರಿಸುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಅಡಿಯಲ್ಲಿ ಅಗತ್ಯ ಅನುಮತಿಗಳನ್ನು ಪಡೆದಿರುವುದನ್ನೂ ಹಾಗೂ ನಗರಸಭೆ, ಹೆಸ್ಕಾಂ, ಅಗ್ನಿಶಾಮಕ ದಳ ಹಾಗೂ ಆರೋಗ್ಯ ಇಲಾಖೆಗೆ ಪತ್ರ ಬರೆದು ಈ ಸಂಸ್ಥೆಗಳ ಕುರಿತು ಹೆಚ್ಚಿನ ಪರಿಶೀಲನೆ ನಡೆಸಲು ಪೊಲೀಸ್ ಇಲಾಖೆ ಸೂಚಿಸಿದೆ. ಅಕ್ರಮ ಸಾಧ್ಯತೆ


ಸ್ಪಾ ಮತ್ತು ಸಲೂನ್‌ಗಳು ಕಾನೂನುಬದ್ಧವಾಗಿ ಆರೋಗ್ಯ ಹಾಗೂ ಸೌಂದರ್ಯ ಸೇವೆಗಳನ್ನು ನೀಡುವ ಸಂಸ್ಥೆಗಳು ಎಂದು ನೋಂದಾಯಿಸಲಾಗುತ್ತದೆ ಆದರೆ, ಕೆಲವು ಕಡೆ ಪರವಾನಗಿ ಇಲ್ಲದೇ ಕಾರ್ಯನಿರ್ವಹಿಸುವುದು, ಮಾನವ ಕಳ್ಳಸಾಗಣೆ, ಲೈಂಗಿಕ ಚಟುವಟಿಕೆಗಳು, ಅಪ್ರಾಪ್ತರನ್ನು ಕೆಲಸಕ್ಕೆ ಬಳಸುವುದು, ನಕಲಿ ದಾಖಲೆಗಳ ಬಳಕೆ, ಮಾದಕ ವಸ್ತುಗಳ ಅಕ್ರಮ ಬಳಕೆ ಅಥವಾ ಮಾರಾಟ, ಅಗ್ನಿ ಸುರಕ್ಷತೆ ಮತ್ತು ಆರೋಗ್ಯ ನಿಯಮಗಳ ಉಲ್ಲಂಘನೆ ಮೊದಲಾದ ಅಕ್ರಮಗಳು ನಡೆಯುವ ಸಾಧ್ಯತೆ ಇರುತ್ತದೆ.

ದಾಖಲೆ ಸಲ್ಲಿಕೆಗೆ ಸೂಚನೆ: ಅವಳಿ ನಗರದ ವಿವಿಧ ಭಾಗಗಳು ಸೇರಿದಂತೆ ಒಟ್ಟು 6 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ತಪಾಸಣೆ ವೇಳೆ ಯಾವುದೇ ಅಕ್ರಮ ಚಟುವಟಿಕೆಗಳು ಪತ್ತೆಯಾಗಿಲ್ಲ. ಆದರೆ, ಕಾನೂನುಬದ್ಧ ದಾಖಲೆಗಳು ಮತ್ತು ಪರವಾನಗಿಗಳ ಕೊರತೆ ಕಂಡುಬಂದಿರುವ ಹಿನ್ನೆಲೆ ಸಂಬಂಧಿತ ಸಂಸ್ಥೆಗಳಿಗೆ, ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ಪಡೆದಿರುವ ಕುರಿತ ದಾಖಲೆಗ ಪತ್ರಗಳನ್ನು, ಸುರಕ್ಷತಾ ಕ್ರಮಗಳ ಕುರಿತು ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಎಸ್ಪಿ ರೋಹನ್ ಜಗದೀಶ ತಿಳಿಸಿದರು.