ಸಾರಾಂಶ
ಕಾರವಾರ: ಪೊಲೀಸರು ತಮ್ಮ ಹತ್ತಿರ ಬರುವ ಮಕ್ಕಳ ಸಮಸ್ಯೆಗಳನ್ನು ವಿವರವಾಗಿ ಆಲಿಸಿ, ಅವರನ್ನು ಆಪ್ತ ಸಮಾಲೋಚನೆಗೆ ಒಳಪಡಿಸಬೇಕು. ಮಕ್ಕಳ ರಕ್ಷಣೆಯಲ್ಲಿ ಪೊಲೀಸ್ ಇಲಾಖೆಯ ಪಾತ್ರ ಬಹಳ ಪ್ರಾಮುಖ್ಯವಾಗಿದ್ದು, ಪೊಲೀಸರು ಮಕ್ಕಳಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ ತಿಳಿಸಿದರು.ಭಾನುವಾರ ಜಿಲ್ಲಾ ಪೊಲೀಸ್ ಅಧಿಕ್ಷಕರ ಸಭಾಭವನದಲ್ಲಿ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿ ಮತ್ತು ವಿಶೇಷ ಬಾಲಾಪರಾಧಿ ಪೊಲೀಸ್ ಘಟಕಕ್ಕೆ ಸಂವೇದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಮಾಜದಲ್ಲಿ ಪ್ರತಿಯೊಬ್ಬರೂ ಎಲ್ಲ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಕಾಳಜಿ ಮತ್ತು ರಕ್ಷಣೆ ಮಾಡಬೇಕು. ಮಕ್ಕಳ ಮೇಲೆ ಶಾಲೆಗಳಲ್ಲಿ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ನಡವಳಿಕೆ ಮತ್ತು ಅವರ ವರ್ತನೆಯ ಬಗ್ಗೆ ಪೊಲೀಸ್ ಸಿಬ್ಬಂದಿ ಗಮನಹರಿಸಬೇಕು ಎಂದರು.ಶಿಶುಮಂದಿರ, ಬಾಲಮಂದಿರಗಳಲ್ಲಿ ಮಕ್ಕಳನ್ನು ದುರುಪಯೋಗ ಮಾಡಿಕೊಳ್ಳತ್ತಿರುವ ಪ್ರಕರಣಗಳು ಕಂಡುಬರುತ್ತಿದ್ದು, ಅಲ್ಲಿಯೂ ಮಕ್ಕಳ ರಕ್ಷಣಾ ಘಟಕದಿಂದ ಸೂಕ್ತ ಮುನ್ನೆಚ್ಚರಿಕೆ ಹಾಗೂ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಗಣೇಶ ಪಡಿಯಾರ, ಪೊಲೀಸ್ ಅಧಿಕಾರಿಗಳ ಪಾತ್ರ ಮತ್ತು ಜವಾಬ್ದಾರಿಗೆ ಸಂಬಂಧಿಸಿದಂತೆ ಬಾಲಾಪರಾಧಿ ಕಾಯ್ದೆಯ ಅವಲೋಕನ ಬಗ್ಗೆ ಉಪನ್ಯಾಸ ನೀಡಿ, ಮಕ್ಕಳನ್ನುಮಕ್ಕಳಂತೆ ನೋಡುವ ಅಲೋಚನೆ ನಮ್ಮಲ್ಲಿ ಬೆಳೆಸಿಕೊಳ್ಳಬೇಕು. ಮಕ್ಕಳ ಆರೈಕೆ, ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದರು.ಬಾಲಾಪರಾಧಿ ಮಕ್ಕಳಿಗೆ ಅರೈಕೆಯ ಜತೆಗೆ ಅವರಿಗೆ ಮೂಲ ಸೌಕರ್ಯ ಮತ್ತು ಪುನರ್ವಸತಿ ಸೌಕರ್ಯ, ಶಿಕ್ಷಣ, ವೃತ್ತಿಪರ ತರಬೇತಿ, ಸಮಾಲೋಚನೆಗೆ ಅವಕಾಶ ನೀಡಬೇಕು. ಮಕ್ಕಳಿಗೆ ಹಕ್ಕು, ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಅಪರಾಧಕ್ಕೆ ಒಳಗಾದ ಮಗುವಿಗೆ ಸಮಲೋಚನೆ ನಡೆಸುವ ಸಂದರ್ಭದಲ್ಲಿ, ಅವರಿಗೆ ಪ್ರತಿನಿಧಿಸುವ ಹಕ್ಕುಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.ಪ್ರಧಾನ ಸಿವಿಲ್ ನ್ಯಾಯಾಧೀಶ ಧನುರಾಜ ಎಸ್., ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ಬಾಲಕಾರ್ಮಿಕ ಕಾಯ್ದೆಗಳು ಅಡಿಯಲ್ಲಿ ಮಕ್ಕಳ ರಕ್ಷಣೆ ಬಗ್ಗೆ ಹಾಗೂ ವಿಶೇಷ ಸರ್ಕಾರಿ ಅಭಿಯೋಜಕಿ ಶುಭಾ ಗಾಂವಕರ ಪೋಕ್ಸೋ ಕಾಯ್ದೆಯ ನಿಬಂಧನೆಗಳು ಮತ್ತು ಕಾರ್ಯ ವಿಧಾನ ಹಾಗೂ ಅವುಗಳ ಅನುಷ್ಠಾನದಲ್ಲಿ ಪೊಲೀಸ್ ಅಧಿಕಾರಿಗಳ ಪಾತ್ರದ ಬಗ್ಗೆ ಉಪನ್ಯಾಸ ನೀಡಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ ಮತ್ತಿತರರು ಇದ್ದರು.