ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಚರ್ಚ್ ಸ್ಟ್ರೀಟ್‌ನಲ್ಲಿ ತನ್ನ ಗಾಯನದ ಮೂಲಕ ಪಾಪ್ ಸಂಗೀತ ಪ್ರೇಮಿಗಳನ್ನು ಅಚ್ಚರಿಗೊಳಿಸಲು ಹೋದ ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಪಾಪ್ ಗಾಯಕರೊಬ್ಬರಿಗೆ ಭಾನುವಾರ ಪೊಲೀಸರು ನಿರಾಸೆಗೊಳಿಸಿದ್ದಾರೆ. ಒಂದು ಹಂತದಲ್ಲಿ ಶಿರಾನ್ ಅವರಿಂದ ಬಲವಂತವಾಗಿ ಪೊಲೀಸರು ಮೈಕ್ ಕಿತ್ತು ಹಾಕೊಳ್ಳುವ ದೃಶ್ಯಗಳು ವೈರಲ್ ಆಗಿವೆ. ಗಾಯಕರೊಬ್ಬರಿಗೆ ಈ ರೀತಿ ಪೊಲೀಸರು ನಡೆದುಕೊಂಡಿರುವ ಬಗ್ಗೆ ಅನೇಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಇಂಗ್ಲೆಂಡ್ ದೇಶದ ಪ್ರಸಿದ್ಧ ಪಾಪ್ ಗಾಯಕ ಎಡ್ ಶಿರಾನ್ ಅವರು ಪೂರ್ವಾನುಮತಿ ಪಡೆಯದೆ ದಿಢೀರ್ ಗಾಯನಗೋಷ್ಠಿ ನಡೆಸಲು ಮುಂದಾದಾಗ ಅವರನ್ನು ಪೊಲೀಸರು ತಡೆ ಹಾಕಿದ್ದಾರೆ. ಇದರಿಂದ ಪಾಪ ಸಂಗೀತ ಪ್ರೇಮಿಗಳಿಗೂ ಬೇಸರವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ನಡೆ ಬಗ್ಗೆ ಕೆಲವರು ಆಕ್ಷೇಪ ಸಹ ವ್ಯಕ್ತಪಡಿಸಿದ್ದಾರೆ. ಪೊಲೀಸರಿಗೆ ಗಾಯಕ ಯಾರೆಂದು ಗೊತ್ತಿಲ್ಲದೇ ಇರಬಹುದು, ಅನುಮತಿ ತೆಗೆದುಕೊಳ್ಳದೇ ಗಾಯನಗೋಷ್ಠಿ ಮಾಡುವುದು ಕಾನೂನು ಪ್ರಕಾರ ತಪ್ಪಾಗಿದ್ದರೂ ಸಹ ಮೈಕ್ ಕಿತ್ತುಕೊಳ್ಳುವ ಮಟ್ಟಿಗೆ ಪೊಲೀಸರು ಹೋಗಬಾರದಿತ್ತು ಎಂದು ಸಂಗೀತ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏನಿದು ಘಟನೆ:ಬೆಂಗಳೂರು ಹೊರವಲಯದ ಮಾದಾವಾರ ಸಮೀಪ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿ ಪಾಪ್ ಗಾಯಕ ಎಡ್ ಶಿರಾನ್ ಅವರ ಸಂಗೀತ ರಸ ಸಂಜೆ ಕಾರ್ಯಕ್ರಮ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ್ದ ಅವರು, ಎಂ.ಜಿ.ರಸ್ತೆಯ ಚರ್ಚ್ ಸ್ಟ್ರೀಟ್‌ಗೆ ಭಾನುವಾರ ಬೆಳಗ್ಗೆ ದಿಢೀರನೇ ತೆರಳಿ ಸಾರ್ವಜನಿಕವಾಗಿ ಗಾಯನ ಶುರು ಮಾಡಿದ್ದಾರೆ. ಒಮ್ಮೆಗೆ ರಸ್ತೆಯಲ್ಲಿ ಅಡ್ಡಾಡುತ್ತಿದ್ದವರ ಪಾಪ್ ಸಂಗೀತ ಪ್ರೇಮಿಗಳು ಈ ಗಾಯಕನ ಹಾಡು ಕೇಳಿ ಅಚ್ಚರಿಗೊಂಡಿದ್ದಾರೆ. ಕೆಲವರು ಎಡ್ ಶಿರಾನ್ ಅವರನ್ನು ಗುರುತು ಹಿಡಿದು ಜಮಾಯಿಸಲು ಆರಂಭಿಸಿದ್ದಾರೆ. ಅಷ್ಟರಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು, ಕಾನೂನು ಮತ್ತು ಸುವ್ಯವಸ್ಥೆ ಕಾರಣ ನೀಡಿ ಗಾಯನ ಸ್ಥಗಿತಗೊಳಿಸಿದ್ದಾರೆ. ಒಂದು ಹಂತದಲ್ಲಿ ಶಿರಾನ್ ಅವರಿಂದ ಬಲವಂತವಾಗಿ ಪೊಲೀಸರು ಮೈಕ್ ಕಿತ್ತುಕೊಳ್ಳುವ ದೃಶ್ಯಗಳು ವೈರಲ್ ಆಗಿವೆ.
ಪೊಲೀಸರ ಸ್ಪಷ್ಟನೆ:ಚರ್ಚ್ ಸ್ಟ್ರೀಟ್‌ನ ಜನನಿಬಿಡ ಪ್ರದೇಶದಲ್ಲಿ ಪೂರ್ವಾನುಮತಿ ಇಲ್ಲದೆ ಶಿರಾನ್ ಗಾಯನಗೋಷ್ಠಿ ಆರಂಭಿಸಿದ್ದರು. ಇದರಿಂದ ಹೆಚ್ಚಿನ ಜನರು ಸೇರಿದರೆ ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುವ ಕಾರಣಕ್ಕೆ ಅವರ ಗಾಯನಕ್ಕೆ ಸ್ಥಗಿತಗೊಳಿಸಲಾಯಿತು. ಆದರೆ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಸ್ಪಷ್ಟಡಿಸಿದ್ದಾರೆ.