ಚಿಕ್ಕಬಳ್ಳಾಪುರ ನಗರವನ್ನು ಭೀತಿಗೆ ತಳ್ಳಿದ್ದ ಬಾಪೂಜಿ ನಗರದ ವಿವಾಹಿತ ಮಹಿಳೆ ಪುಷ್ಪಲತಾ ಭೀಕರ ಹತ್ಯೆ ಹತ್ತು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು.
ಕಂದವಾರ ಬಾಗಿಲು ಪುಷ್ಪಲತಾ ಕೊಲೆ ಪ್ರಕರಣ । ಆರೋಪಿಗಳ ಬಂಧನ । ನಾದಿನಿಯ ಸಹವರ್ತಿಯಿಂದ ಸೊಸೆ ಕೊಲೆಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರವನ್ನು ಬೆಚ್ಚಿಬೀಳಿಸಿದ್ದ ಕೊಲೆ ಪ್ರಕರಣವನ್ನು ಬೇಧಿಸಿರುವ ಜಿಲ್ಲಾ ಪೊಲೀಸರು 24 ಗಂಟೆಯಲ್ಲೇ ಕೊಲೆಗಾರರ ಹೆಡೆಮುರಿ ಕಟ್ಟಿದ್ದಾರೆ.ಶುಕ್ರವಾರ ಬೆಳ್ಳಂಬೆಳಗ್ಗೆ ಚಿಕ್ಕಬಳ್ಳಾಪುರ ನಗರವನ್ನು ಭೀತಿಗೆ ತಳ್ಳಿದ್ದ ಬಾಪೂಜಿ ನಗರದ ವಿವಾಹಿತ ಮಹಿಳೆ ಪುಷ್ಪಲತಾ ಭೀಕರ ಹತ್ಯೆ ಹತ್ತು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಗಂಡನ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶುಕ್ರವಾರದಿಂದಲೇ ಕಾರ್ಯಾಚರಣೆ ನಡೆಸಿದ್ದು, ಕೊಲೆಗಾರರಿಗೆ ಬಲೆ ಬೀಸಿದ್ದರು. ನಗರದ ಬಾಪೂಜಿ ನಗರದಲ್ಲಿ ಶುಕ್ರವಾರ ಬೆಳ್ಳಂಬೆಳಿಗ್ಗೆ ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ಕೊಲೆಯಾದ ಮನೆಯ ಸುತ್ತ ಜನ ಜಾತ್ರೆಯೇ ನಡೆದಿತ್ತು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದರು.ಜಿಲ್ಲಾ ಎಸ್‌ಪಿ ಮಾಹಿತಿ ನೀಡಿದಂತೆ ಮೃತ ಪುಷ್ಪಲತಾ ಅವರ ನಾದಿನಿ ಭವ್ಯ ಅವರನ್ನು ಹೊಸಕೋಟೆಯ ಸಮೀಪದ ಊರಿಗೆ ಮದುವೆ ಮಾಡಿಕೊಡಲಾಗಿತ್ತು. ಗಂಡನ ಜತೆಗಿದ್ದ ಭವ್ಯ ಕೃಷ್ಣ ಎಂಬ ಕಾರ್ ಡ್ರೈವರ್ ಜೊತೆ ಒಡವೆ ತೆಗೆದುಕೊಂಡು ಓಡಿ ಹೋಗಿದ್ದರು ಎನ್ನಲಾಗಿದೆ. ಆಗ ಗಂಡನ ಮನೆಯವರು ಪತ್ತೆಯಾದರೆ ಮಾನಹೋಗುತ್ತೆ ಎನ್ನುವ ಉದ್ದೇಶದಿಂದ ಆಕೆಯನ್ನು ತವರು ಮನೆಯಾದ ಚಿಕ್ಕಬಳ್ಳಾಪುರಕ್ಕೆ ವಾಪಸ್ಸು ಕಳಿಸಿದ್ದರು. ಆಕೆ ಇಲ್ಲಿಯೇ ತಂದೆತಾಯಿ ಜತೆ ವಾಸವಿದ್ದರು ಎನ್ನಲಾಗಿದೆ.
ಈ ನಡುವೆ ಭವ್ಯ ಓಡಿ ಹೋಗಿದ್ದ ಕಾರ್ ಡ್ರೈವರ್ ಕೃಷ್ಣ ತನ್ನ ಜೊತೆಗಿದ್ದ ಖಾಸಗಿ ವಿಡಿಯೋಗಳನ್ನು ಗುಟ್ಟಾಗಿ ಸಂಗ್ರಹಿಸಿದ್ದು, ಅವುಗಳ ಮೂಲಕ ಬೆದರಿಕೆಯೊಡ್ಡುತ್ತಿದ್ದ ಎನ್ನಲಾಗಿದೆ. ಈ ವಿಚಾರವನ್ನು ತನ್ನ ಸಂಬಂಧಿ ಲೋಹಿತ್ ಕುಮಾರ್ ಅಲಿಯಾಸ್ ಲಲ್ಲು ಎಂಬಾತನಿಗೆ ತಿಳಿಸಿ ತನಗಾಗುತ್ತಿರುವ ಕಿರುಕುಳವನ್ನು ತಪ್ಪಿಸಲು ಮನವಿ ಮಾಡಿದ್ದಳು ಎನ್ನಲಾಗಿದೆ.ನೆರವಿಗೆ ಬರುವುದಾಗಿ ಬಂದಿದ್ದ ಲಲ್ಲುಗೆ ಈಕೆಯೇ ಆ ಎಲ್ಲಾ ವಿಡಿಯೋಗಳನ್ನು ಕಳುಹಿಸಿದ್ದಳು ಎನ್ನಲಾಗಿದೆ. ಲಲ್ಲೂ ಕೂಡ ಕ್ರಮೇಣ ಆಕೆಯನ್ನು ಅದೇ ವಿಡಿಯೋಗಳನ್ನು ತೋರಿಸಿ ಬೆದರಿಸಿ ಹಣ ಪಡೆಯುತ್ತಿದ್ದ ಎನ್ನಲಾಗಿದೆ.
ಹೀಗೆ ಬಾಣಲೆಯಿಂದ ಬೆಂಕಿಗೆ ಬಿದ್ದಂತಹ ಭವ್ಯ ಒಮ್ಮೆ 5 ಲಕ್ಷ ಮತ್ತೊಮ್ಮೆ2 ಲಕ್ಷ ಹಣವನ್ನು ಹೊಂದಿಸಿ ಕೊಟ್ಟಿದ್ದಳು ಎನ್ನಲಾಗಿದೆ. ಆದರೂ ಆತ ತನ್ನ ಚಾಳಿ ಮುಂದುವರಿಸಿದಾಗ ತನ್ನ ಬಳಿ ಹಣವಿಲ್ಲ. ನಾದಿನಿಯ ಬಳಿ ಆಭರಣವಿದೆ. ಆಕೆಯನ್ನು ಕೊಲೆ ಮಾಡಿ ಆಭರಣ ತೆಗೆದುಕೊಂಡು ಹೋಗು ಎಂಬುದಾಗಿ ಹೇಳಿದ್ದಳು ಎನ್ನಲಾಗಿದೆ.ಇದರಂತೆ ಮೇ 28ರ ರಾತ್ರಿ ತನ್ನ ಕುಟುಂಬದವರೆಲ್ಲರೂ ದೇವಾಲಯಕ್ಕೆ ಹೋಗುತ್ತಿದ್ದಾರೆ. ನಾದಿನಿಯನ್ನು ನನ್ನೊಂದಿಗೆ ಇಟ್ಟುಕೊಂಡಿರುತ್ತೇನೆ. ನೀನು ಬಂದು ಆಭರಣ ತೆಗೆದುಕೊಂಡು ಹೋಗು ಎಂದು ಹೇಳಿದ್ದಳು. ಈಕೆಯ ಯೋಜನೆಯಂತೆ ಲಲ್ಲು ತಡರಾತ್ರಿ ಇವರಿದ್ದ ಮನೆಗೆ ಬಂದು ನಿದ್ರೆಗೆ ಜಾರಿದ್ದ ಪುಷ್ಪಲತಾ ಅವರ ಮೇಲೆ ದಾಳಿ ಮಾಡಿ ಉಸಿರುಗಟ್ಟಿಸಿ ಕೊಂದು, ನಂತರ ಕುತ್ತಿಗೆ ಸೀಳಿ ಕೊಲೆಯಂತೆ ಬಿಂಬಿಸಿ ಆಭರಣವನ್ನು ಕದ್ದಿದ್ದರು.
ತಮ್ಮ ಯೋಜನೆಯಂತೆ ಆದ ಘಟನೆಯನ್ನು ಕೊಲೆಯೆಂದು ಬಿಂಬಿಸಲು ಮುಂದಾದ ನಾದಿನಿ ಕಳ್ಳರು ಬಂದು ಈ ಕೃತ್ಯ ಎಸಗಿದ್ದಾರೆ. ನನ್ನ ಮೇಲೆಯೂ ದಾಳಿಯಾಗಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದಳು ಎನ್ನಲಾಗಿದೆ.ವಿಚಾರ ತಿಳಿದ ಪೊಲೀಸರು ಆಸ್ಪತ್ರೆಗೆ ತೆರಳಿ ಆಕೆಯ ಹೇಳಿಕೆ ಪಡೆದಾಗ ಒಂದೊಂದು ಸಮಯಕ್ಕೆ ಒಂದೊಂದು ರೀತಿ ಹೇಳಿಕೆ ನೀಡಿದ್ದಾಳೆ. ಮೇಲಾಗಿ ಮನೆಗೆ ಹಾಕಿಸಿದ್ದ ಸಿಸಿ ಕ್ಯಾಮೆರಾ ಆ ದಿನವೇ ಆಫ್ ಆಗಿತ್ತು. ಇವೆಲ್ಲವುಗಳಿಂದ ಅನುಮಾನಗೊಂಡ ಪೊಲೀಸರು ತಮ್ಮದೇ ಶೈಲಿಯಲ್ಲಿ ತೀವ್ರ ವಿಚಾರಣೆಗೆ ಮುಂದಾದಾಗ ಕೊಲೆಯ ಸತ್ಯಾಂಶ ಹೊರಬಂದಿದೆ ಎಂದು ಎಸ್ಪಿ ತಿಳಿಸಿದರು.
ಮೃತಳ ಪೋಷಕರು ಮಾಡಿರುವ ಆರೋಪದಂತೆ ಅತ್ತೆ ಮಾವ ಗಂಡನೂ ಕೂಡ ಈ ಕೃತ್ಯದಲ್ಲಿ ಶಾಮೀಲಾಗಿರುವ ಬಗ್ಗೆ ಎಲ್ಲಾ ಕೋನಗಳಲ್ಲೂ ತನಿಖೆ ನಡೆಸಲಾಗಿದೆ. ಭವ್ಯ ಲಾಲೂ ಯಾದವ್ ಇಬ್ಬರೇ ಈ ಕೊಲೆಯ ಹಿಂದಿನ ರೂವಾರಿಗಳಾಗಿದ್ದಾರೆ. ಮನೆಯ ಬೇರೆ ಸದಸ್ಯರಿಗೆ ಮಾಹಿತಿಯನ್ನೇ ನೀಡಿಲ್ಲ. ತನಿಖೆ ಇನ್ನೂ ಮುಂದುವರೆದಿದೆ. ಈ ಕೊಲೆ ಹಿಂದೆ ಇರುವ ಯಾರನ್ನೂ ಬಿಡುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು.ಈ ಸಂಬಂಧ ಹೊಸಕೋಟೆಯಲ್ಲಿ ತಲೆಮರಿಸಿಕೊಂಡಿದ್ದ ಲಾಲು ಯಾದವ್ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭವ್ಯ ಅವರನ್ನು ವಶಕ್ಕೆ ಪಡೆದು ಜೈಲಿಗೆ ತಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಸಿಕೆಬಿ-6 ನಾದಿನಿ ಕೊಲೆಗೆ ಕಾರಣವಾದ ಭವ್ಯ
ಸಿಕೆಬಿ-7 ಕೊಲೆ ಮಾಡಿರುವ ಆರೋಪಿ ಲೋಹಿತ್ ಕುಮಾರ್ ಅಲಿಯಾಸ್ ಲಲ್ಲು