ಸಂಕಷ್ಟದಲ್ಲಿರುವ ಹಿರಿಯ ನಾಗರಿಕರ ನೆರವಿಗೆ ರಾಜ್ಯ ಪೊಲೀಸ್‌ ಇಲಾಖೆ ರೂಪಿಸಿರುವ ನೂತನ ಕಾರ್ಯಕ್ರಮ ‘ಆಸರೆ’ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಂಕಷ್ಟದಲ್ಲಿರುವ ಹಿರಿಯ ನಾಗರಿಕರ ನೆರವಿಗೆ ರಾಜ್ಯ ಪೊಲೀಸ್‌ ಇಲಾಖೆ ರೂಪಿಸಿರುವ ನೂತನ ಕಾರ್ಯಕ್ರಮ ‘ಆಸರೆ’ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಚಾಲನೆ ನೀಡಿದರು.

ಜನರ ಅಹವಾಲು ಆಲಿಕೆಗೆ ಮನೆ-ಮನೆ ಪೊಲೀಸ್ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾದ ಬೆನ್ನಲ್ಲೇ ರಾಜ್ಯ ಪೊಲೀಸ್ ಇಲಾಖೆ, ಈಗ ನೊಂದಿರುವ ಹಿರಿಯ ನಾಗರಿಕರಿಗೆ ‘ಆಸರೆ’ಯಾಗಲು ಪೊಲೀಸರು ಮುಂದಾಗಿದ್ದಾರೆ.

ಪ್ರತಿ ಠಾಣಾ ವ್ಯಾಪ್ತಿಯಲ್ಲಿ ಹಿರಿಯ ನಾಗರಿಕರ ದಂಪತಿ ಹಾಗೂ ಏಕಾಂಗಿಯಾಗಿರುವ ಹಿರಿಯ ನಾಗರಿಕರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತದೆ. ಬಳಿಕ ವೃದ್ಧರ ಸಂಕಷ್ಟಗಳಿಗೆ ಸ್ಪಂದನೆ ಹಾಗೂ ಸಮಯೋಚಿತ ನೆರವು ಒದಗಿಸುವ ಉದ್ದೇಶವಿದೆ. ಹಿರಿಯ ನಾಗರಿಕರ ಜತೆ ನಿರಂತರವಾಗಿ ಪೊಲೀಸರು ಸಂಪರ್ಕದಲ್ಲಿರುತ್ತಾರೆ. ಹಿರಿಯ ನಾಗರಿಕರ ಮೇಲೆ ಅಪರಾಧ ಮತ್ತು ದೌರ್ಜನ್ಯಗಳು ಘಟಿಸದಂತೆ ನಿಗಾವಹಿಸಲಾಗುತ್ತದೆ. ಹಿರಿಯ ನಾಗರಿಕರ ದೈಹಿಕ, ಭಾವನಾತ್ಮಕ, ಡಿಜಿಟಲ್ ಮತ್ತು ಆರ್ಥಿಕ ಸುರಕ್ಷತೆ ಹೆಚ್ಚಿಸಲಾಗುತ್ತದೆ. ಪ್ರತಿ ಠಾಣಾ ಮಟ್ಟದಲ್ಲಿ ಸಮುದಾಯ ಪೊಲೀಸ್ ಅಧಿಕಾರಿ ನೇಮಿಸಲಾಗುತ್ತದೆ. ಹಿರಿಯ ನಾಗರಿಕರ ಮನೆಗಳಿಗೆ ವಾರಕ್ಕೆ ಒಂದು ಬಾರಿಯಾದರು ಸಿಪಿಓಗಳು ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಬೇಕು ಎಂದು ಡಿಜಿಪಿ ಸಲೀಂ ಹೇಳಿದ್ದಾರೆ.