ಸಾರಾಂಶ
ಹುಬ್ಬಳ್ಳಿ: ಹು-ಧಾ ಮಹಾನಗರದಲ್ಲಿ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ರಂಗಪಂಚಮಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಸೂಕ್ತ ಬಿಗಿ ಭದ್ರತೆ ವಹಿಸಿದೆ. ಹೋಮ್ ಗಾರ್ಡ್ಸ್, ಕೆಎಸ್‌ಆರ್‌ಪಿ ಸೇರಿದಂತೆ 2500ಕ್ಕೂ ಅಧಿಕ ಸಿಬ್ಬಂದಿ ನಿಯೋಜಿಸಿ, ಸಿಸಿ ಕ್ಯಾಮೆರಾಗಳ ಕಣ್ಗಾವಲಿರಿಸಿದೆ.
ಮಾ. 15ರಂದು ಧಾರವಾಡದಲ್ಲಿ ಹಾಗೂ ಮಾ. 18ರಂದು ಹುಬ್ಬಳ್ಳಿಯಲ್ಲಿ ರಂಗಪಂಚಮಿ ಹಬ್ಬ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ಸಂಭ್ರಮದಲ್ಲಿ ಹು-ಧಾ ಮಹಾನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು, ಬೇರೆ ಬೇರೆ ಜಿಲ್ಲೆಗಳಿಂದಲೂ ಜನರು ಆಗಮಿಸಿ ಬಣ್ಣದೋಕುಳಿಯಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಈ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.ಎಲ್ಲೆಡೆ ಸೌಹಾರ್ದ ಸಭೆಈಗಾಗಲೇ ಮಹಾನಗರದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಮಾಜದ ಮುಖಂಡರ ಜತೆ ಸೌಹಾರ್ದ ಸಭೆ ಹಾಗೂ ಬುಧವಾರ ನಗರದಲ್ಲಿ ಸರ್ವಸಮಾಜ ಬಾಂಧವರ ನೇತೃತ್ವದಲ್ಲಿ ಸೌಹಾರ್ದ ಸಭೆ ನಡೆಸಿ ಶಾಂತಿಯುತ ಹಬ್ಬದ ಆಚರಣೆ ಮಾಡುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಕೈಗೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿದ್ದಾರೆ.
480ಕ್ಕೂ ಹೆಚ್ಚು ಪ್ರತಿಷ್ಠಾಪನೆಮಹಾನಗರದ ವಿವಿಧೆಡೆ 480ಕ್ಕೂ ಹೆಚ್ಚು ರತಿ-ಮನ್ಮಥರ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಹಳೇ ಹುಬ್ಬಳ್ಳಿ ಮತ್ತು ಕಮರಿಪೇಟೆ ಪ್ರದೇಶದಲ್ಲಿ ಅದ್ಧೂರಿಯಾಗಿ ನಡೆಯುವುದರಿಂದ ಈ ಪ್ರದೇಶದಲ್ಲಿ ಹತ್ತಕ್ಕೂ ಹೆಚ್ಚು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಈಗಾಗಲೇ ಈ ಪ್ರದೇಶಗಳಲ್ಲಿ ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಮುಂಜಾಗ್ರತೆ ವಹಿಸಲಾಗಿದೆ. ರೇನ್ ಡಾನ್ಸ್ ನಡೆಯುವ ಹಾಗೂ ಮೆರವಣಿಗೆ ಸಾಗುವ ಹಳೇಹುಬ್ಬಳ್ಳಿ ಚನ್ನಪೇಟೆ, ದುರ್ಗದಬೈಲ್, ಇಂಡಿಪಂಪ್ ಮಾರ್ಗದ ಅಕ್ಕಪಕ್ಕ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಇರಿಸಲಾಗಿದೆ. ಮಾ. 15 ಹಾಗೂ 18ರಂದು ನಡೆಯುವ ಅದ್ಧೂರಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ನಿಗದಿಪಡಿಸಿದ ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ನಡೆಯುವ ಚಟುವಟಿಕೆ ಗಮನಿಸುವುದಕ್ಕಾಗಿಯೇ 50ಕ್ಕೂ ಹೆಚ್ಚು ಸಿಬ್ಬಂದಿ ಮಪ್ತಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಸುಳ್ಳು ಸುದ್ದಿಗಳ ಮೇಲೂ ನಿಗಾಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ನಿಗಾ ಇಡಲು ಪೊಲೀಸ್ ಆಯುಕ್ತಾಲಯದ ಕಚೇರಿಯಲ್ಲಿರುವ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಸನ್ನದ್ಧವಾಗಿದೆ. ಮೂರು ಪಾಳಿಗಳಲ್ಲಿ ತಲಾ 5 ತಂತ್ರಜ್ಞ ಸಿಬ್ಬಂದಿ ದಿನದ 24 ಗಂಟೆಯೂ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಿ ಪರಿಶೀಲನೆ ನಡೆಸಲಿದ್ದಾರೆ.
2500ಕ್ಕೂ ಹೆಚ್ಚು ಸಿಬ್ಬಂದಿಈ ಕುರಿತು ಬುಧವಾರ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಎಲ್ಲ ಧರ್ಮಗುರುಗಳ ಹಾಗೂ ಮುಖಂಡರನ್ನು ಸೇರಿಸಿ ಬುಧವಾರ ಸೌಹಾರ್ದ ಸಭೆ ನಡೆಸಲಾಗಿದೆ. ಎಲ್ಲರೂ ಶಾಂತಿಯುತವಾಗಿ ಆಚರಿಸುವ ಭರವಸೆ ನೀಡಿದ್ದಾರೆ. ಶಾಂತಿಯುತವಾಗಿ ಹೋಳಿ ಹಬ್ಬ ಆಚರಣೆಗೆ ಬೇಕಾದ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬಂದೋಬಸ್ತಿಗಾಗಿ 2500ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ. ಯಾರೇ ಆಗಲಿ ಶಾಂತಿ ಕದಡುವ ಕಾರ್ಯಕ್ಕೆ ಮುಂದಾಗುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.