ಸಾರಾಂಶ
ಹುಣಸೂರು ತಾಲೂಕು ಗೆರೆಸನಹಳ್ಳಿ ಗ್ರಾಮದ ದರ್ಶಿತ (20) ಎಂಬಾಕೆಯು ತನ್ನ ಸಂಬಂಧಿಯೂ ಆದ ಸಿದ್ದರಾಜುವಿನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.
ಕನ್ನಡಪ್ರಭ ವಾರ್ತೆ ಸಾಲಿಗ್ರಾಮ
ಸಾಲಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಹಿಳೆ ಸೇರಿ ಇಬ್ಬರು ಹತ್ಯೆಯಾಗಿದ್ದಾರೆ.ತಾಲೂಕಿನ ಭೇರ್ಯ ಗ್ರಾಮದ ವಸತಿಗೃಹವೊಂದರಲ್ಲಿ ಪ್ರಿಯತಮ ಗೃಹಿಣಿಯನ್ನು ಹತ್ಯೆ ಮಾಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬೆಟ್ಟದಪುರ ಗ್ರಾಮದ ಸಿದ್ದರಾಜು ಬಂಧಿತ.
ಹುಣಸೂರು ತಾಲೂಕು ಗೆರೆಸನಹಳ್ಳಿ ಗ್ರಾಮದ ದರ್ಶಿತ (20) ಎಂಬಾಕೆಯು ತನ್ನ ಸಂಬಂಧಿಯೂ ಆದ ಸಿದ್ದರಾಜುವಿನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈಕೆ ಕೇರಳ ಮೂಲದ ವ್ಯಕ್ತಿಯನ್ನು ಮದುವೆಯಾಗಿದ್ದು, ಎರಡು ವರ್ಷದ ಮಗಳಿದ್ದಾಳೆ. ಈಕೆಯ ಗಂಡ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.ಸಿದ್ದರಾಜು ಈಕೆಯನ್ನು ಶನಿವಾರ ದೇವಾಲಯಕ್ಕೆ ಹೋಗೋಣ ಎಂದು ಕರೆತಂದು ಭೇರ್ಯ ಗ್ರಾಮದ ಎಸ್.ಜಿ.ಆರ್ ವಸತಿಗೃಹದಲ್ಲಿ ಕೊಠಡಿ ಬಾಡಿಗೆಗೆ ಪಡೆದು ಹತ್ಯೆ ಮಾಡಿದ್ದಾನೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸಿದ್ದರಾಜುನನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಘಟನೆ ಸಂಬಂಧ ಲಾಡ್ಜ್ ಸಿಬ್ಬಂದಿ ಮನು ಎಂಬವರು ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್, ಸಾಲಿಗ್ರಾಮ ಇನ್‌ಸ್ಪೆಕ್ಟರ್‌ಶಶಿಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.ಮತ್ತೊಂದು ಪ್ರಕರಣದಲ್ಲಿ ತಾಲೂಕಿನ ಕೆಡಗ ಗ್ರಾಮದಲ್ಲಿ ಸೊಸೆಯೇ ತನ್ನ ಮಾವನನ್ನು ಕೊಲೆ ಮಾಡಿರುವುದು ವರದಿಯಾಗಿದೆ.
ಕೆಡಗ ಗ್ರಾಮದ ನಾಗರಾಜು (70) ಹತ್ಯೆಯಾದವರು. ಮೈಸೂರು ನಗರದಲ್ಲಿ ಪೊಲೀಸ್ ಆಗಿರುವ ಮೃತ ನಾಗರಾಜ ಅವರ ಮಗ ಪಂಚಾಕ್ಷರಿ ಅವರ ಪತ್ನಿ ಡಿ. ಲಕ್ಷ್ಮೀ ದೊಣ್ಣೆಯಿಂದ ಹಲ್ಲೆ ಮಾಡಿದ್ದು, ಗಾಯಗೊಂಡ ನಾಗರಾಜು ಮೃತಪಟ್ಟಿದ್ದಾರೆ. ಸೊಸೆ ನನ್ನ ಗಂಡನಿಗೆ ಹಲ್ಲೆ ಮಾಡುತ್ತಿದ್ದರೂ ಮಗ ನೋಡುತ್ತಾ ನಿಂತಿದ್ದ. ಗಾಯಗೊಂಡ ನನ್ನ ಗಂಡನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ನನ್ನ ಮಗ ಬರಲಿಲ್ಲ. ನನ್ನ ಗಂಡನ ಸಾವಿಗೆ ಕಾರಣರಾದ ಮಗ ಹಾಗೂ ಸೊಸೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೃತ ನಾಗರಾಜು ಅವರ ಪತ್ನಿ ಗೌರಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.