ಸಹಕಾರ ಕ್ಷೇತ್ರದಲ್ಲಿ ನೀತಿ, ನಿಯತ್ತು ಮುಖ್ಯ: ಹಿರಿಯ ಪತ್ರಕರ್ತ ಜಿ.ಯು. ಭಟ್ಟ

| Published : Feb 10 2025, 01:50 AM IST

ಸಾರಾಂಶ

ಸಹಕಾರಿ ಕ್ಷೇತ್ರ ಬದಲಾಗಿದೆ. ಕಾನೂನು ಬದಲಾಗಿದೆ. ಸಹಕಾರಿ ಕ್ಷೇತ್ರದ ಬಗ್ಗೆ ಬೀದಿಯಲ್ಲಿ ಮಾತನಾಡಿಕೊಳ್ಳುವಂತಾಗಿದೆ. ಸಹಕಾರಿ ತತ್ವದಲ್ಲಿ ಯಾವುದೇ ದೋಷಗಳಿಲ್ಲ. ನಮ್ಮದೇ ದೋಷಗಳಿಂದ ಸಮಸ್ಯೆ ಉಂಟಾಗಿದೆ. ಮಧ್ಯವರ್ತಿಗಳ ಶೋಷಣೆ ತಪ್ಪಿಸಲು ಸಹಕಾರಿ ಅಗತ್ಯವಿದೆ.

ಹೊನ್ನಾವರ: ಬದುಕಿನ ಎಲ್ಲ ಸಾಧ್ಯತೆಗಳನ್ನು ಪೂರೈಸುವ ಸಾಧ್ಯತೆಗಳನ್ನು ಸಹಕಾರಿ ತತ್ವದಲ್ಲಿ ಅಳವಸಿಕೊಂಡಿದೆ. ಸಹಕಾರ ಕ್ಷೇತ್ರದಲ್ಲಿ ನೀತಿ, ನಿಯತ್ತು, ಪ್ರೀತಿ ಇದೆ ಎಂಬುದು ಮುಖ್ಯವಾಗುತ್ತದೆ ಎಂದು ಹಿರಿಯ ಪತ್ರಕರ್ತ ಜಿ.ಯು. ಭಟ್ಟ ತಿಳಿಸಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯುನಿಯನ್, ಸಹಕಾರ ಇಲಾಖೆ, ಪಟ್ಟಣ ಸಹಕಾರ ಬ್ಯಾಂಕ್‌ಗಳ ಆಶ್ರಯದಲ್ಲಿ ಜಿಲ್ಲೆಯ ಪಟ್ಟಣ ಸಹಕಾರ ಬ್ಯಾಂಕ್‌ಗಳ ಅಧ್ಯಕ್ಷ, ಉಪಾಧ್ಯಕ್ಷ, ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಸಿಬ್ಬಂದಿಗೆ ಒಂದು ದಿನದ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಪಟ್ಟಣದ ಅರ್ಬನ್ ಬ್ಯಾಂಕ್ ಸಭಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.ಸಹಕಾರಿ ಕ್ಷೇತ್ರ ಬದಲಾಗಿದೆ. ಕಾನೂನು ಬದಲಾಗಿದೆ. ಸಹಕಾರಿ ಕ್ಷೇತ್ರದ ಬಗ್ಗೆ ಬೀದಿಯಲ್ಲಿ ಮಾತನಾಡಿಕೊಳ್ಳುವಂತಾಗಿದೆ. ಸಹಕಾರಿ ತತ್ವದಲ್ಲಿ ಯಾವುದೇ ದೋಷಗಳಿಲ್ಲ. ನಮ್ಮದೇ ದೋಷಗಳಿಂದ ಸಮಸ್ಯೆ ಉಂಟಾಗಿದೆ. ಮಧ್ಯವರ್ತಿಗಳ ಶೋಷಣೆ ತಪ್ಪಿಸಲು ಸಹಕಾರಿ ಅಗತ್ಯವಿದೆ ಎಂದರು.ಹೊನ್ನಾವರ ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಘವ ಬಾಳೇರಿ ಮಾತನಾಡಿ, ಸಹಕಾರಿ ರಂಗದ ಪಿತಾಮಹ ಸಿದ್ದನಗೌಡ ಪಾಟೀಲ ಅವರು 120 ವರ್ಷಗಳ ಹಿಂದೆ ದೇಶದಲ್ಲಿ ಸಹಕಾರಿ ಕ್ಷೇತ್ರ ಆರಂಭಿಸಿದ ಫಲವಾಗಿ ನಾವೆಲ್ಲರೂ ಸೇರುವಂತಾಗಿದೆ. ಕರ್ನಾಟಕದಲ್ಲಿ ಸಹಕಾರಿ ಕ್ಷೇತ್ರ ಆರಂಭವಾಗಿ ಎಲ್ಲೆಡೆ ಹೆಮ್ಮರವಾಗಿ ಬೆಳೆದಿದೆ. ವಿ.ಎನ್. ಭಟ್ ಅಳ್ಳಂಕಿ ಅವರ ಸಾರಥ್ಯದಲ್ಲಿ ಯುನಿಯನ್ ವಿಶೇಷ ಕಾರ್ಯ ಮಾಡುತ್ತಿದೆ. ಇದು ಹೆಮ್ಮೆಯ ವಿಚಾರ ಎಂದರು.ಹಿರಿಯ ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಮಾತನಾಡಿ, ಪ್ರತಿಯೊಬ್ಬರೂ ಮರದ ಟೊಂಗೆಯಂತೆ ವಿಸ್ತರಿಸಿಕೊಳ್ಳಲು ಸಹಕಾರಿ ವೃಕ್ಷದಲ್ಲಿ ಎಲ್ಲರೂ ಕೂಡಿ ಬದುಕಲು ಸಾಧ್ಯವಾಗುತ್ತದೆ. ನಾವು, ನಮಗೆ ಎನ್ನುವದಕ್ಕಿಂತ ಸಹಕಾರಿಯಾಗಬೇಕು ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ ವಿ.ಎನ್. ಭಟ್ಟ ಅಳ್ಳಂಕಿ ಮಾತನಾಡಿ, ಯುನಿಯನ್ ಇತಿಮಿತಿಯಲ್ಲಿ ಸಹಕಾರಿ ಕ್ಷೇತ್ರದ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ. ಸಹಕಾರಿ ಕ್ಷೇತ್ರದಲ್ಲಿ ಚುನಾವಣಾ ಆಯೋಗ ಎಂಬುದು ಇತ್ತು. ಆದರೆ ಇದನ್ನು ಸರ್ಕಾರ ಸಹಕಾರಿ ಪ್ರಾಧಿಕಾರ ಎಂದು ಮಾರ್ಪಡಿಸಿದೆ. ಸಹಕಾರಿ ಸಂಘದ ಚುನಾವಣೆ ಕಂದಾಯ ಇಲಾಖೆಯ ಹಿರಿಯ ಅಧಿಕಾರಿ ಅಥವಾ ಜಿಲ್ಲಾಧಿಕಾರಿಗಳು ನಡೆಸುತ್ತಿದ್ದರು. ಈಗ ಸಹಕಾರಿ ಇಲಾಖೆಯವರು ಮಾಡುತ್ತಿರುವುದು ಲೋಪದೋಷ ಆಗುವ ಸಾಧ್ಯತೆ ಇದೆ ಎಂದರು.

ಜಿಲ್ಲಾ ಸಹಕಾರ ಯುನಿಯನ್ ನಿರ್ದೇಶಕ ರಾಜು ನಾಯ್ಕ, ಸತೀಶ ಭಟ್ಟ, ಕೆ. ಗಣೇಶ, ಸರಿತಾ ಬೇತಾಳಕರ್ ಇದ್ದರು. ಗೋಪಾಲ ಸ್ವಾಗತಿಸಿದರು. ಅರ್ಬನ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ರಾಮಚಂದ್ರ ಭಾಗ್ವತ ವಂದಿಸಿದರು.