ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಬೇಕು

ಕುಷ್ಟಗಿ: ಭಾರತ ಪೋಲಿಯೋ ಮುಕ್ತ ದೇಶವಾಗಿದ್ದು , ಎರಡು ಹನಿ ಪೋಲಿಯೋ ಲಸಿಕೆ ಮಕ್ಕಳ ಅಂಗವೈಕಲ್ಯತೆ ತಪ್ಪಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ ಹೇಳಿದರು.

ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ನಡೆದ ರಾಷ್ಟ್ರೀಯ ಪಲ್ಸ್‌ ಫೊಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ತಿಳಿಸಿದರು.

ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯ ಡಾ. ಆನಂದ ಮಾತನಾಡಿ, ದೇಶದ ಮಕ್ಕಳ ಹಿತಾಸಕ್ತಿಗಾಗಿ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಉಚಿತವಾಗಿ ಪೋಲಿಯೋ ಲಸಿಕೆ ಹಾಕಿಸಲಾಗುತ್ತಿದ್ದು, ಈ ಲಸಿಕೆಯಿಂದ ಅಂಗವೈಕಲ್ಯ ತಡೆಯಬಹುದಾಗಿದ್ದು , ಹತ್ತಿರದ ಪಲ್ಸ್ ಪೋಲಿಯೋ ಅಭಿಯಾನದಲ್ಲಿ ತಪ್ಪದೇ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲು ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ಮೇಲ್ವಿಚಾರಕ ರವೀಂದ್ರ ನಂದಿಹಾಳ, ರಾಜ್ಯಯುವ ಪ್ರಶಸ್ತಿ ವಿಜೇತ ಶ್ರೀನಿವಾಸ ಕಂಟ್ಲಿ, ಅಂಗನವಾಡಿ ಕಾರ್ಯಕರ್ತೆಯರಾದ ಸವಿತಾ ಗುಗ್ಗರಿ, ತಾರಾಬಿ ಯಲಬುರ್ಗಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಇದ್ದರು.