ಮುಂದಿನ ಜೂನ್‌ನಲ್ಲಿ ರಾಜಕೀಯ ಕಾಲೇಜು ಆರಂಭ: ಬಸವರಾಜ ಹೊರಟ್ಟಿ

| N/A | Published : Oct 17 2025, 01:03 AM IST

ಮುಂದಿನ ಜೂನ್‌ನಲ್ಲಿ ರಾಜಕೀಯ ಕಾಲೇಜು ಆರಂಭ: ಬಸವರಾಜ ಹೊರಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ವಿಧಾನಮಂಡಲ ನೇತೃತ್ವದಲ್ಲಿ ರಾಜಕೀಯ ಕಾಲೇಜು ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಜೂನ್‌ನಲ್ಲಿ ಬೆಂಗಳೂರಿನಲ್ಲಿ ಈ ಕಾಲೇಜು ಆರಂಭವಾಗಲಿದೆ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಮಂಗಳೂರು: ರಾಜಕೀಯಕ್ಕೆ ಆಗಮಿಸುವ ಹೊಸ ರಾಜಕಾರಣಿಗಳನ್ನು ತಯಾರುಗೊಳಿಸುವ ನಿಟ್ಟಿನಲ್ಲಿ ರಾಜ್ಯ ವಿಧಾನಮಂಡಲ ನೇತೃತ್ವದಲ್ಲಿ ರಾಜಕೀಯ ಕಾಲೇಜು ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಜೂನ್‌ನಲ್ಲಿ ಬೆಂಗಳೂರಿನಲ್ಲಿ ಈ ಕಾಲೇಜು ಆರಂಭವಾಗಲಿದೆ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌ ಹಾಗೂ ನಾನು ಸೇರಿಕೊಂಡು ಕಾಲೇಜು ಪ್ರಾರಂಭಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮುಂದುವರಿಸಿದ್ದೇವೆ. ಮುಂದಿನ ಒಂದು ತಿಂಗಳೊಳಗೆ ಈ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ ಎಂದರು. ರಾಜಕೀಯ ಯಾವ ರೀತಿಯಲ್ಲಿ ಮಾಡಬೇಕು ಎಂಬುದನ್ನು ಕಲಿಸುವ ಕಾರ್ಯ ಈ ಕಾಲೇಜಿನಲ್ಲಿ ನಡೆಯಲಿದೆ. ಮೂರು ವರ್ಷದ ಪದವಿ ಕೋರ್ಸ್‌ ಆರಂಭಿಸಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲ ತಯಾರಿಗಳು ನಡೆಯುತ್ತಿವೆ. ಈ ಬಗ್ಗೆ ಈಗಾಗಲೇ ತಜ್ಞರನ್ನು ಸಂಪರ್ಕಿಸಿ ಮಾಹಿತಿ ಪಡೆದು ಕಾರ್ಯೋನ್ಮುಖರಾಗಿದ್ದೇವೆ ಎಂದು ಹೊರಟ್ಟಿ ತಿಳಿಸಿದರು.

ಜನಪರ ರಾಜಕೀಯ ಮರಳಲಿ: ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಜನಪರ ರಾಜಕೀಯ ದೂರವಾಗುತ್ತಿದ್ದು, ಸ್ವಂತಕ್ಕಾಗಿ ರಾಜಕೀಯ ಮಾಡಲಾಗುತ್ತಿದೆ. ಈ ವ್ಯವಸ್ಥೆಯನ್ನು ಕಂಡಾಗ ತುಂಬ ನೋವಾಗುತ್ತದೆ. ಸದನದಲ್ಲಿ ಜನಪರ, ಅಗತ್ಯ ವಿಷಯ ಚರ್ಚಿಸುವ ಬದಲು ಅನಗತ್ಯ ವಿಚಾರಗಳನ್ನು ಚರ್ಚಿಸಲಾಗುತ್ತಿದೆ. ರಾಜ್ಯದಲ್ಲಿ ರೈತರ ಸಮಸ್ಯೆ, ಮಳೆ, ಬೆಳೆ ಇತ್ಯಾದಿಗಳ ಬದಲು ಹನಿಟ್ರ್ಯಾಪ್‌ ಬಗ್ಗೆ ಅನಗತ್ಯ ಚರ್ಚಿಸಿ ಕಾಲಹರಣ ಮಾಡಲಾಗುತ್ತಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಜನಪರ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ. ರಾಜಕೀಯದಿಂದ ದೂರವಾದರೆ ಸುಧಾರಣೆ ಮಾಡುವವರು ಯಾರು ಎಂದು ಪ್ರಶ್ನಿಸಿದರು.

ನಿಯಮ ಮೀರುವ ಶಾಲೆಗಳ ವಿರುದ್ಧ ಕ್ರಮ: ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಕೇವಲ ಶಿಕ್ಷಣ ಸಚಿವರಿಂದ ಸಾಧ್ಯ ಎನ್ನಲಾಗದು. ಸಚಿವ ಸಂಪುಟ, ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಆಸಕ್ತಿ ವಹಿಸಿ ಮಾಡಬೇಕು. ಸಿಎಂ ಅವರಿಗೆ ಕನ್ನಡ ಅತ್ಯುತ್ತಮವಾಗಿ ತಿಳಿದಿದೆ. ಆದರೆ ಅವರೂ ಕ್ರಮ ವಹಿಸುತ್ತಿಲ್ಲ. ಕನ್ನಡ ಶಾಲೆಗಳಿಗೆ ಅನುಮತಿ ಪಡೆದು ಆಂಗ್ಲ ಮಾಧ್ಯಮ ನಡೆಸುತ್ತಿದ್ದ 417 ಶಾಲೆಗಳನ್ನು ನಾನು ಬಂದ್‌ ಮಾಡಿಸಿದ್ದೆ. 

17 ಶಾಸಕರು ನನ್ನ ವಿರುದ್ಧ ನಿಂತಿದ್ದರು. ಆದರೆ ಅನೇಕ ಶಾಲೆಗಳು ಇಂದಿಗೂ ನಿಯಮ ಮೀರುತ್ತಿವೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದಕ್ಕೆ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶಿಕ್ಷಣ ವ್ಯವಸ್ಥೆ ಪಾರದರ್ಶಕಗೊಳಿಸಲು ಸಾಕಷ್ಟು ಶ್ರಮಿಸುತ್ತಿದ್ದಾರೆ. ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ. ನನ್ನಿಂದಲೂ ಸಲಹೆ- ಸೂಚನೆ ಪಡೆಯುತ್ತಿದ್ದಾರೆ. ಹಗಲು- ರಾತ್ರಿ ಪ್ರಯತ್ನಿಸುತ್ತಿದ್ದಾರೆ ನಿಜ. ಆದರೆ, ಅನುಭವ ಇನ್ನೂ ಬೇಕಿದೆ. ಅವರಿಗೆ ಯುವ ಸಬಲೀಕರಣ ಖಾತೆ ನೀಡಿದ್ದರೆ ಉತ್ತಮವಾಗಿ ನಿಭಾಯಿಸುತ್ತಿದ್ದರು ಎಂದು ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

Read more Articles on