ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸದೃಢ ಸಮಾಜ ನಿರ್ಮಾಣವಾಗಲು ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಜ್ಞೆ ಬಹಳ ಮುಖ್ಯ ಎಂದು ಮುಖ್ಯ ಶಿಕ್ಷಕ ಮಹಾದೇವಸ್ವಾಮಿ ಹೇಳಿದರು.ತಾಲೂಕಿನ ಗ್ರಾಮನಹಳ್ಳಿ ಜ್ಞಾನಭಾರತಿ ಪ್ರೌಢಶಾಲೆ ನಡೆದ ಶಾಲಾ ಯುವ ಸಂಸತ್ ರಚನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪ್ರಜಾಪ್ರಭುತ್ವದ ಬುನಾದಿ ರಾಜಕೀಯ ಪ್ರಜ್ಞೆ, ಪ್ರಜಾಪ್ರಭುತ್ವದ ಬಗ್ಗೆ ವಿದ್ಯಾರ್ಥಿ ದೆಸೆಯಿಂದಲೇ ಅರಿವು ಮೂಡಿಸಿದರೆ ಭವಿಷ್ಯದಲ್ಲಿ ಉತ್ತಮ ಸಮಾಜ ಹಾಗೂ ಭ್ರಷ್ಟರಹಿತ ಸಮಾಜ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ ಎಂದರು.
ಶಾಲೆ ಯುವ ಸಂಸತ್ ಚುನಾವಣೆಯಲ್ಲಿ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಮತ ಚಲಾಯಿಸಿದರು. ಪ್ರಧಾನ ಮಂತ್ರಿಯಾಗಿ 10ನೇ ತರಗತಿ ವಿದ್ಯಾರ್ಥಿ ಶಶಾಂಕ, ಉಪ ಪ್ರಧಾನಿಯಾಗಿ ಮೇಘನ, ಸ್ಪೀಕರ್ ಆಗಿ ನಾಗೇಶ್ ಹಾಗೂ ರಾಷ್ಟ್ರಪತಿಯಾಗಿ 9ನೇ ತರಗತಿ ವಿದ್ಯಾರ್ಥಿನಿ ಆಯ್ಕೆಯಾದರು.ಇನ್ನುಳಿದಂತೆ ಮಂತ್ರಿಗಳನ್ನು ಪ್ರಧಾನಮಂತ್ರಿ ಹಾಗೂ ಉಪ ಪ್ರಧಾನಿಗಳು ಸೇರಿ ಆಯ್ಕೆ ಮಾಡಿದರು. ಚುನಾವಣೆ ಪ್ರಕ್ರಿಯೆಯಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಭಾಗವಹಿಸಿ ಯಶಸ್ವಿಗೊಳಿಸಿದರು ಎಂದು ಅವರು ತಿಳಿಸಿದರು.
ಆಷಾಢ ಶುಕ್ರವಾರ ಶಕ್ತಿ ದೇವಿಗೆ ವಿಶೇಷ ಪೂಜೆಕಿಕ್ಕೇರಿ:ಹೋಬಳಿಯಾದ್ಯಂತ ಆಷಾಢ ಮಾಸದ ಕೊನೆ ಶುಕ್ರವಾರ ಗ್ರಾಮದ ಶಕ್ತಿ ದೇವಿಗೆ ವಿಜೃಂಭಣೆಯಿಂದ ಭಕ್ತರು ಪೂಜೆ ಸಲ್ಲಿಸಿದರು.
ಕಿಕ್ಕೇರಮ್ಮನವರಿಗೆ ವಿಶೇಷವಾಗಿ ನಿಂಬೆಹಣ್ಣು, ವಿಳ್ಳೆದೆಲೆ, ಪರಿಮಳ ಪುಷ್ಪಗಳ ಅಲಂಕಾರ ಮಾಡಲಾಗಿತ್ತು. ಸುತ್ತಮುತ್ತಲ ಗ್ರಾಮಗಳಿಂದ ಅಧಿಕವಾಗಿ ಭಕ್ತರು ದೇವಿಯ ದೇಗುಲಕ್ಕೆ ಆಗಮಿಸಿ ಭಕ್ತಿಯ ಪೂಜೆಗೈದರು.ಹೆಜ್ಜೆ ನಮಸ್ಕಾರ, ನಿಂಬೆಹಣ್ಣು ಆರತಿಯನ್ನು ಸರತಿಯಲ್ಲಿ ಮಾಡಿದರು. ಈ ಬಾರಿ ಸಮೃದ್ಧ ಮಳೆ, ಉತ್ತಮ ಬೆಳೆ ಲಭಿಸಲಿ ಎಂದು ಪ್ರಾರ್ಥಿಸಿದರು. ಹಲವರು ಉಪವಾಸವ್ರತದೊಂದಿಗೆ ತಮ್ಮಇಷ್ಟಾರ್ಥ ಸಿದ್ಧಿಗಾಗಿ ದೇವಿಯಲ್ಲಿ ಪೂಜಿಸಿ ಹರಸಿಕೊಂಡರು.ಹಲವರು ಮನೆಯಲ್ಲಿ ಪಾರ್ವತಿ ದೇವಿಯ ಕಳಶವನ್ನು ಇಟ್ಟು ಪೂಜಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.ಬ್ರಹ್ಮೇಶ್ವರ ದೇಗುಲದ ಪಾರ್ವತಿದೇವಿ, ಕೋಟೆ ಮಾರಮ್ಮದೇವಿ, ಬೇವಿನಹಳ್ಳಿ ಚಾಮುಂಡೇಶ್ವರಿ ದೇಗುಲ, ವಡಕಹಳ್ಳಿ ವಡಕಳಮ್ಮ ದೇವಿ, ಐಕನಹಳ್ಳಿಯ ಲಕ್ಷ್ಮೀದೇವಿ, ಚಿಕ್ಕತರಹಳ್ಳಿ ಕೋಡಿಮಾರಮ್ಮ, ಸಾಸಲು ಕುದುರೆಮಂಡಮ್ಮ, ಆನೆಗೊಳ, ಬೋಳಮಾರನಹಳ್ಳಿಯ ಲಕ್ಷ್ಮೀದೇವಿ ದೇಗುಲಗಳಲ್ಲಿ ದೇವಿಗೆ ವಿಶೇಷ ಅಲಂಕಾರ, ಪೂಜೆಗಳು ಶ್ರದ್ಧಾಭಕ್ತಿಯಿಂದ ನೆರವೇರಿತು. ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.