ಸಾರಾಂಶ
ನರಗುಂದ: ಪ್ರಸಕ್ತ ವರ್ಷ ಮಳೆ ಮತ್ತು ಪ್ರವಾಹ ವಿಪರೀತವಾಗಿದೆ. ಆದರಿಂದ ತಾಲೂಕು ಮಟ್ಟದ ಅಧಿಕಾರಿಗಳು ಮಳೆ ಹಾಗೂ ಪ್ರವಾಹವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶನಿವಾರ ತಾಲೂಕಿನ ಮಲಪ್ರಭಾ ನದಿ ಪಕ್ಕದ ಗ್ರಾಮಗಳಾದ ಲಖಮಾಪುರ, ಬೆಳ್ಳೇರಿ, ವಾಸನ, ಕೊಣ್ಣೂರ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ವೀಕ್ಷಣೆ ಮಾಡಿ ಮಾತನಾಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಮಲಪ್ರಭಾ ನದಿ ಉಗಮ ಸ್ಥಾನ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿ ಗ್ರಾಮದ ಮೇಲ್ಭಾಗದ ಪಶ್ಚಿಮಘಟ್ಟ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ವಿಪರೀತ ಮಳೆ ಸುರಿಯುತ್ತಿರುವುದರಿಂದ ಈಗಾಗಲೇ ಮಲಪ್ರಭಾ ಜಲಾಶಯ ಬಹುತೇಕ ಭರ್ತಿಯಾಗಿ ಕಳೆದ ಹಲವು ದಿನಗಳಿಂದ ಮಲಪ್ರಭೆ ನದಿಗೆ 1 0ರಿಂದ 15ಸಾವಿರ ಕ್ಯುಸೆಕ್ ನೀರು ಬಿಟ್ಟಿದ್ದಾರೆ ಎಂದರು.ಬಲದಂಡ ಹಾಗೂ ಎಡದಂಡೆ ಕಾಲುವೆಗಳಿಗೂ ಸಹ ನೀರು ಬಿಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಮಳೆ ಆಗಬಹುದು, ಆದ್ದರಿಂದ ಅಧಿಕಾರಿಗಳು ನಮ್ಮ ತಾಲೂಕಿನಲ್ಲಿ ಮಳೆ ಕಡಿಮೆಯಿದೆ ಎಂದು ನಿರ್ಲಕ್ಷ್ಯ ಮಾಡಬೇಡಿ ಎಕೆಂದರೆ ಮಲಪ್ರಭಾ ನದಿ ಹಾಗೂ ಬೆಣ್ಣಿ ಹಳ್ಳದ ಮೇಲ್ಭಾಗದಲ್ಲಿ ಹೆಚ್ಚು ಮಳೆ ಸುರಿದರೆ ತಾಲೂಕಿನಲ್ಲಿ ಪ್ರವಾಹದ ಪರಿಸ್ಥಿತಿ ಉದ್ಭವವಾಗುತ್ತದೆ. ಆದ್ದರಿಂದ ತಾಲೂಕಿನ ಅಧಿಕಾರಿಗಳು ಈಗಿನಿಂದಲೇ ಮಳೆ ಮತ್ತು ಪ್ರವಾಹ ಎದುರಿಸಲು ಸಜ್ಜಾಗಬೇಕು ಎಂದರು.
ಲಖಮಾಪುರ ಗ್ರಾಮದ ನಾಲ್ಕು ಮನೆಗಳಿಗೆ ನೀರು ನುಗ್ಗಿದ್ದು, ಆ ಕುಟುಂಬಗಳಿಗೆ ತಹಸೀಲ್ದಾರ್ ತಾತ್ಕಾಲಿಕ ಪರಿಹಾರ ನೀಡಬೇಕು. ಅದೇ ರೀತಿ ಕೊಣ್ಣೂರ ಗ್ರಾಮದ ಎಪಿಎಂಸಿಯಲ್ಲಿ ನಿರ್ಮಾಣ ಮಾಡಲಾದ ತಾತ್ಕಾಲಿಕ ಶೆಡ್‌ಗಳಿಗೆ ನಾಳೆ ಒಳಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮಲಪ್ರಭಾ ನದಿ ಹೂಳು ಎತ್ತುವುದು ಮತ್ತು ಅಗಲೀಕರಣ ಮಾಡಲು ಸರ್ಕಾರ ಮಟ್ಟದಲ್ಲಿ ಚಿಂತನೆ ಮಾಡಲಾಗುವುದು, ನೀರಾವರಿ ಇಲಾಖೆ ಅಧಿಕಾರಿಗಳು ಲಖಮಾಪೂರದಿಂದ ಶಿರೋಳವರಗೆ ನದಿ ಅಗಲೀಕರಣ ಮಾಡುವ ನಕ್ಷೆ ತಯಾರಿಸಬೇಕು ಎಂದರು.ನದಿ ಹಾಗೂ ಬೆಣ್ಣಿ ಹಳ್ಳದ ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳಲ್ಲಿ ಕಾಳಜಿ ಕೇಂದ್ರ ಗುರ್ತಿಸಿ ಅವುಗಳಿಗೆ ಬೇಕಾದ ಸಿದ್ಧತೆಗಳನ್ನು ಈಗಿನಿಂದಲೇ ಮಾಡಿಕೊಳ್ಳಬೇಕು, ಪ್ರವಾಹಕ್ಕೆ ತುತ್ತಾಗುವ ಕೆಲವು ಗ್ರಾಮಗಳಲ್ಲಿ ಅಗ್ನಿ ಶಾಮಕ ಸಿಬ್ಬಂದಿ ನೇಮಿಸಬೇಕು. ಪ್ರವಾಹಕ್ಕೆ ತುತ್ತಾಗುವ ತಾಲೂಕುಗಳಿಗಾಗಿ ತಹಸೀಲ್ದಾರ್ ಖಾತೆಯಲ್ಲಿ ₹ 61ಲಕ್ಷ, ಉಪವಿಭಾಗಧಿಕಾರಿಗಳ ಖಾತೆಯಲ್ಲಿ ₹ 9 ಕೋಟಿ ಮೀಸಲಿರಿಸಲಾಗಿದೆ ಎಂದರು.
ಮಲಪ್ರಭಾ ಪ್ರವಾಹ ಕಡಿಮೆಯಾದ ತಕ್ಷಣ ನದಿ ಪಕ್ಕದ ಜಮೀನುಗಳಿಗೆ ನದಿ ನೀರು ನುಗ್ಗಿ ಬೆಳೆ ಹಾನಿಯಾದ ಬಗ್ಗೆ ಸಮೀಕ್ಷೆ ನಡೆಸಿ ಸರ್ಕಾರದಿಂದ ಪರಿಹಾರ ನೀಡಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗೋವಿಂದರಡ್ಡಿ, ಎಸ್ಪಿ ಬಿ.ಎಸ್. ನೇಮಗೌಡ್ರ, ಉಪವಿಭಾಗಾಧಿಕಾರಿ ಗಂಗಪ್ಪ, ತಹಸೀಲ್ದಾರ್ ಶ್ರೀಶೈಲ ತಳವಾರ, ಹುಲಗಣ್ಣವರ, ರಾಜುಗೌಡ ಕೆಂಚನಗೌಡ್ರ, ಸಿದ್ದು ಪಾಟೀಲ, ಉಮೇಶಗೌಡ ಪಾಟೀಲ, ವಿಠಲ ತಿಮ್ಮರಡ್ಡಿ, ಅಜ್ಜಪ್ಪ ಹುಡೇದ, ಚಂದ್ರಶೇಖರ ದಂಡಿನ, ಉಮೇಶ ಯಳ್ಳೂರ, ವಿ.ಎನ್. ಕೊಳ್ಳಿವರ, ಬಸಪ್ಪ ನರಗುಂದ, ಸಂತೋಷ ಹಂಚಿನಾಳ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.