ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಸುಮಾರು 30 ಸಾವಿರ ಶಿಕ್ಷಕರ ಕೊರತೆ ಇದೆ. ಅದರಲ್ಲೂ ಇಂಗ್ಲಿಷ್ ಮತ್ತು ಗಣಿತ ವಿಷಯ ಬೋಧಿಸುವ ಸುಮಾರು 10 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇವೆ
ಕುಷ್ಟಗಿ: ಕಲ್ಯಾಣ ಕರ್ನಾಟಕದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮವಾಗಿದೆ ಎಂಬ ಅಂಕಿ-ಅಂಶ ಮುಂದಿಟ್ಟುಕೊಂಡು ಈ ಭಾಗ ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಿದೆ ಎಂದು ಬಿಂಬಿಸುವ ರಾಜಕೀಯ ಹುನ್ನಾರ ನಡೆಯುತ್ತಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಆರೋಪಿಸಿದರು.
ತಾಲೂಕಿನ ತಾವರಗೇರಾ ಪಟ್ಟಣದ ಸಿಂಧನೂರು ರಸ್ತೆಯಲ್ಲಿರುವ ಜಾರಕಿಹೊಳಿ ಫೌಂಡೇಶನ್ ಬುದ್ಧ ವಿಹಾರದಲ್ಲಿ ಶನಿವಾರ ಆರಂಭಗೊಂಡ 371(ಜೆ) ಕಲಂ ಹಾಗೂ ಕೆಕೆಆರ್‌ಡಿಬಿ ಅಧ್ಯಯನ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಸುಮಾರು 30 ಸಾವಿರ ಶಿಕ್ಷಕರ ಕೊರತೆ ಇದೆ. ಅದರಲ್ಲೂ ಇಂಗ್ಲಿಷ್ ಮತ್ತು ಗಣಿತ ವಿಷಯ ಬೋಧಿಸುವ ಸುಮಾರು 10 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇವೆ.ಇಷ್ಟೊಂದು ಪ್ರಮಾಣದಲ್ಲಿ ಶಿಕ್ಷಕರ ಕೊರತೆ ಇರುವಾಗ ಕೇವಲ ಪರೀಕ್ಷಾ ಫಲಿತಾಂಶದ ಅಂಕಿ-ಅಂಶ ಮುಂದಿಟ್ಟುಕೊಂಡು ಶೈಕ್ಷಣಿಕ ಅಭಿವೃದ್ಧಿಯಾಗಿದೆ ಎಂದು ಹೇಳುವುದು ವಾಸ್ತವ ಮರೆಮಾಚುವ ಪ್ರಯತ್ನವಾಗಿದೆ ಎಂದು ಟೀಕಿಸಿದರು.
ಶಿಕ್ಷಕರ ಹುದ್ದೆ ಭರ್ತಿ ಮಾಡಿ ಸರ್ಕಾರಿ ಶಾಲೆ ಬಲಪಡಿಸಿದರೆ ಬಡವರು, ದಲಿತರು ಹಾಗೂ ಅಲ್ಪಸಂಖ್ಯಾತರ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗಲಿದೆ. ಆದರೆ ಈ ಮೂಲಭೂತ ಸಮಸ್ಯೆ ಪರಿಹರಿಸುವ ಬದಲು ಸರ್ಕಾರಗಳು ಅಂಕಿ-ಅಂಶಗಳ ಮೂಲಕ ಅಭಿವೃದ್ಧಿಯ ಚಿತ್ರಣ ನೀಡಲು ಮುಂದಾಗುತ್ತಿವೆ ಎಂದು ದೂರಿದರು.ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಬಿಡುಗಡೆಯಾಗುವ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಏಳು ಜಿಲ್ಲೆಗಳ ಸಚಿವರು, ಸಂಸದರು ಹಾಗೂ ಶಾಸಕರು ಪಕ್ಷಾತೀತವಾಗಿ ಈ ಭಾಗದ ಅಭಿವೃದ್ಧಿಗೆ ಧ್ವನಿ ಎತ್ತುವಲ್ಲಿ ವಿಫಲರಾಗಿದ್ದಾರೆ. 371(ಜೆ) ಕಲಂ ಸಮರ್ಪಕವಾಗಿ ಜಾರಿಯಾಗದೆ ಕೇವಲ ಕಾಗದದಲ್ಲೇ ಉಳಿದಿರುವುದು ಈ ಭಾಗದ ಜನರಿಗೆ ಆಗುತ್ತಿರುವ ದೊಡ್ಡ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಎಲ್ಲ ಅನ್ಯಾಯ ಖಂಡಿಸಿ ಸೆ.17ರಂದು ಕಲಬುರಗಿಯ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು. ಏಳು ಜಿಲ್ಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು, ಯುವಕರು, ಹೋರಾಟಗಾರರು ಹಾಗೂ ಪ್ರಗತಿಪರ ಚಿಂತಕರು ಪಾಲ್ಗೊಂಡು ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಬೇಕು ಎಂದು ಕರೆ ನೀಡಿದರು.ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಹಲವು ಸವಾಲುಗಳಿವೆ. ರೈತರು, ವ್ಯಾಪಾರಸ್ಥರು ಹಾಗೂ ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾದ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಹೋರಾಟಗಾರ್ತಿ ಮೀನಾಕ್ಷಿ ಮಾತನಾಡಿ, ಪ್ರಾದೇಶಿಕ ಅಸಮಾನತೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ದೊಡ್ಡ ಹಿನ್ನಡೆಯಾಗಿದೆ. ಸಾವಿರಾರು ಕೋಟಿ ಅನುದಾನ ಬಿಡುಗಡೆಯಾಗಿದ್ದರೂ ಸಮರ್ಪಕ ಶಿಕ್ಷಣ, ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಇನ್ನೂ ಮುಂದುವರಿದಿದೆ. 371(ಜೆ) ಜಾರಿಯಾದ ಬಳಿಕವೂ ತಾಂತ್ರಿಕ ತೊಂದರೆ ಮುಂದುವರಿದಿದ್ದು, ಕಾಯ್ದೆಯ ನೈಜ ಪ್ರಯೋಜನ ಜನರಿಗೆ ತಲುಪುತ್ತಿಲ್ಲ ಎಂದು ಹೇಳಿದರು.ಹೈದರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಸೆ.17ರಂದು ಕಲಬುರಗಿಯಲ್ಲಿ ನಡೆಯುವ ಹೋರಾಟದಲ್ಲಿ ಏಳು ಜಿಲ್ಲೆಗಳ ಜನರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಹಕ್ಕುಗಳಿಗಾಗಿ ಒಗ್ಗಟ್ಟಿನ ಶಕ್ತಿ ಪ್ರದರ್ಶಿಸಬೇಕು ಎಂದರು.
ಈ ಸಂದರ್ಭದಲ್ಲಿ ಪನ್ನರಾಜ ಬಳ್ಳಾರಿ, ವಿದ್ಯಾ ಪಾಟೀಲ, ಕೆ.ನೀಲಾ, ಲಕ್ಷ್ಮಣ ಗಸ್ತಿ, ಪಂಡಿತರಾವ್ ಚಿದ್ರಿ, ಡಾ. ರಜಾಕ ಉಸ್ತಾದ್, ಡಾ. ಶಾರದಾ ಹುಲಿನಾಯಕ, ಬಿ. ಬಸವರಾಜ ರಾಯಚೂರು, ಆರ್.ಕೆ.ದೇಸಾಯಿ, ಸಂತೋಷ ದೇಶಪಾಂಡೆ, ಮಂಜುನಾಥ ಗೊಂಡಬಾಳ, ಮಾಧವ ರೆಡ್ಡಿ, ಶಿವಕುಮಾರ್, ಜೆ.ವೀರಸಂಗಯ್ಯ, ನಜೀರಸಾಬ್ ಮೂಲಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಹಲವರು ಅಧ್ಯಯನ ಶಿಬಿರದಲ್ಲಿ ಭಾಗವಹಿಸಿದ್ದರು.