ರಾಜಕೀಯ ಪಕ್ಷಗಳಿಂದ ಶಿಕ್ಷಣದ ಸಮಸ್ಯೆ ಮರೆಮಾಚುತ್ತಿವೆ: ಮಂಜುನಾಥ

| Published : Apr 19 2024, 01:08 AM IST

ರಾಜಕೀಯ ಪಕ್ಷಗಳಿಂದ ಶಿಕ್ಷಣದ ಸಮಸ್ಯೆ ಮರೆಮಾಚುತ್ತಿವೆ: ಮಂಜುನಾಥ
Share this Article
  • FB
  • TW
  • Linkdin
  • Email

ಸಾರಾಂಶ

ಅಪ್ರಜಾತಾಂತ್ರಿಕವಾಗಿ ಹೇರಿರುವ ಎನ್ಇಪಿಯನ್ನು ಹಿಂಪಡೆಯಬೇಕು ಎಐಡಿಎಸ್‌ಓ ಆಗ್ರಹಪಡಿಸಿದೆ. ನಗರದ ವಿಜ್ಞಾನ ಕಾಲೇಜಿನ ಆವರಣದಲ್ಲಿ ಜಿಲ್ಲಾ ಮುಖಂಡ ಕೆ.ಈರಣ್ಣ ಪ್ರಣಾಳಿಕೆ ಬಿಡುಗಡೆ ಮಾಡಿದರು.

ಚಿತ್ರದುರ್ಗ: ಅಪ್ರಜಾತಾಂತ್ರಿಕವಾಗಿ ಹೇರಿರುವ ಎನ್ಇಪಿಯನ್ನು ಹಿಂಪಡೆಯಬೇಕು ಎಐಡಿಎಸ್‌ಓ ಆಗ್ರಹಪಡಿಸಿದೆ. ನಗರದ ವಿಜ್ಞಾನ ಕಾಲೇಜಿನ ಆವರಣದಲ್ಲಿ ಜಿಲ್ಲಾ ಮುಖಂಡ ಕೆ.ಈರಣ್ಣ ಪ್ರಣಾಳಿಕೆ ಬಿಡುಗಡೆ ಮಾಡಿದರು.

ಎಐಡಿಎಸ್‌ಓ ರಾಜ್ಯ ಸೆಕ್ರೆಟರಿಯೇಟ್ ಸದಸ್ಯರಾದ ಕೆ.ಮಂಜುನಾಥ ಮಾತನಾಡಿ, ಎಲ್ಲಾ ಸರ್ಕಾರಗಳು ದೇಶದ ನೈಜ ಸಮಸ್ಯೆಗಳನ್ನು ಮರೆಮಾಚುತ್ತಿವೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜಾತಿ, ಧರ್ಮದ ವಿಷಯಗಳನ್ನು ಮುನ್ನೆಲೆಗೆ ತರಲು ಯತ್ನಿಸುತ್ತಿವೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪ್ರಜ್ಞೆವಂತಿಕೆಯಿಂದ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಂಸತ್‌ನಲ್ಲಿ ಚರ್ಚೆ ಮಾಡುವ ರೀತಿ ಧ್ವನಿಯೆತ್ತಬೇಕಿದೆ ಎಂದರು.

ದೇಶದ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್ ಹಾಗೂ ನೇತಾಜಿಯವರ ಉತ್ತರಾಧಿಕಾರಿಗಳಾಗಿ ಅನ್ಯಾಯ ಮತ್ತು ಅಸತ್ಯದ ವಿರುದ್ಧ ಹೋರಾಡುವ ಉದಾತ್ತ ರಾಜಕೀಯವನ್ನು ನಡೆಸಬೇಕಿದೆ. ಪ್ರತಿಯೊಬ್ಬರಿಗೂ ಪ್ರಜಾತಾಂತ್ರಿಕ, ವೈಜ್ಞಾನಿಕ ಧರ್ಮ ನಿರಪೇಕ್ಷ ಶಿಕ್ಷಣವು ಖಾತ್ರಿ ಪಡಿಸುವಂತೆ ನಮ್ಮನ್ನಾಳುವ ಸರ್ಕಾರಗಳನ್ನು ಒತ್ತಾಯಿಸಬೇಕಿದೆ. ಈ‌ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಮುನ್ನುಗ್ಗಬೇಕಿದೆ ಎಂದು ಕರೆ ನೀಡಿದರು.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಘಟಕವು ಹಲವು ಬೇಡಿಕೆಗಳನ್ನು ಮುಂದಿಡುತ್ತಿದೆ. ಅವುಗಳಲ್ಲಿ ಕೆಲವು ರಾಜ್ಯದಲ್ಲಿ ಅಪ್ರಜಾತಾಂತ್ರಿಕವಾಗಿ ಹೇರಿರುವ ಎನ್ಇಪಿಯನ್ನು ಹಿಂದಕ್ಕೆ ಪಡೆದು, ಜನಪರ ಶಿಕ್ಷಣ ನೀತಿ ರೂಪಿಸಬೇಕು. ಶಿಕ್ಷಣಕ್ಕಾಗಿ ಕೇಂದ್ರ ಬಜೆಟ್‌ನಿಂದ ಶೇ.10ರಷ್ಟು ಮತ್ತು ರಾಜ್ಯ ಬಜೆಟ್‌ನಿಂದ ಶೇ.30ರಷ್ಟು ಮೀಸಲಿಟ್ಟು, ಸರ್ವರಿಗೂ ವೈಜ್ಞಾನಿಕ, ಧರ್ಮ ನಿರಪೇಕ್ಷ, ಪ್ರಜಾಸತ್ತಾತ್ಮಕ ಮತ್ತು ಉಚಿತ ಶಿಕ್ಷಣವನ್ನು ಖಾತ್ರಿಪಡಿಸಬೇಕು ಎಂದರು.

ವಿಲೀನದ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ನಿಲ್ಲಿಸಬೇಕು. ಎಲ್ಲಾ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಸುಧಾರಿಸಲು ಹಣವನ್ನು ಬಿಡುಗಡೆ ಮಾಡಿ ಮತ್ತು ಹೆಚ್ಚಿನ ಸರ್ಕಾರಿ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಬೇಕು ಎಂದರು.