ಸಾರಾಂಶ
ಚನ್ನಪಟ್ಟಣ: ಪ್ರತಿಷ್ಠಿತ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಪ್ರಮುಖ ರಾಜಕೀಯ ಪಕ್ಷಗಳು ಜಾತಿ ಲೆಕ್ಕಾಚಾರದಲ್ಲಿ ತೊಡಗಿವೆ.
ಈ ಹಿಂದೆ ತಮ್ಮೊಂದಿಗೆ ನಿಂತ ಸಮುದಾಯ ಪ್ರಸ್ತುತ ಜೆಡಿಎಸ್-ಬಿಜೆಪಿ ಮೈತ್ರಿಯಿಂದಾಗಿ ಆಗಿರುವ ಹೊಸ ಸಮೀಕರಣದ ಹಿನ್ನೆಲೆಯಲ್ಲಿ ಜಾತಿವಾರು ಮತದಾರರ ಮಾಹಿತಿ ಹಿಡಿದು ಸೋಲು-ಗೆಲುವಿಗೆ ಲೆಕ್ಕಾಚಾರ ಆರಂಭಿಸಿವೆ. ಪ್ರಸ್ತತ ತಮ್ಮ ಪಕ್ಷದ ಪರ ನಿಂತ ಜಾತಿಯ ಮತಗಳನ್ನು ಇನ್ನಷ್ಟು ಭದ್ರಪಡಿಸಿಕೊಳ್ಳುವ ಜತೆಗೆ ಇತರೆ ಜಾತಿಯ ಮತಗಳನ್ನು ಸೆಳೆಯಲು ಕೈಗೊಳ್ಳಬೇಕಾದ ಮಾರ್ಗಗಳ ಕುರಿತು ಚಿಂತನೆ ನಡೆಸಿವೆ.ಒಕ್ಕಲಿಗರ ಶಕ್ತಿಕೇಂದ್ರ:
ಚನ್ನಪಟ್ಟಣ ಒಕ್ಕಲಿಗರ ಶಕ್ತಿಕೇಂದ್ರವೆಂದೇ ಬಿಂಬಿತವಾಗಿದೆ. ಕ್ಷೇತ್ರದಲ್ಲಿ ಪ್ರಸ್ತುತ ೨.೩೨ ಲಕ್ಷ ಮತದಾರರಿದ್ದಾರೆ. ಇದರಲ್ಲಿ ಒಕ್ಕಲಿಗ ಸಮುದಾಯದ ಸುಮಾರು ೧.೦೫ ಲಕ್ಷ ಮತಗಳಿವೆ. ದಲಿತ ಮತಗಳು ೪೦ ಸಾವಿರ, ೩೦ ಸಾವಿರ ಮುಸ್ಲಿಂ ಮತದಾರರಿದ್ದಾರೆ. ಜತೆಗೆ ಹಿಂದುಳಿದ ಸಮುದಾಯಗಳಾದ ಕುರುಬರು ೭ ಸಾವಿರ, ಬೆಸ್ತರು ಮತ್ತು ತಿಗಳರು ತಲಾ ೧೦ ಸಾವಿರ, ಇತರೆ ಹಿಂದುಳಿದ ವರ್ಗಗಳು ೨೫ ಸಾವಿರದಷ್ಟಿದ್ದರೆ, ಲಿಂಗಾಯತರು, ಬ್ರಾಹ್ಮಣರು ಹಾಗೂ ಇನ್ನಿತರ ಮುಂದುವರಿದ ಸಮುದಾಯಗಳ ೫ ಸಾವಿರ ಮತಗಳಿವೆ.ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯ ಪ್ರಬಲವಾಗಿದೆಯಾದರೂ, ಆ ಸಮುದಾಯದ ಮತಗಳು ಮೂರೂ ಪಕ್ಷಗಳಲ್ಲೂ ಹಂಚಿಹೋಗಿದ್ದು, ಅಹಿಂದ ಮತಗಳು ನಿರ್ಣಾಯಕವೆನಿಸಿದೆ. ಒಕ್ಕಲಿಗ ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ಜತೆಗೆ ಇನ್ನಿತರ ಸಮುದಾಯದ ಮತಗಳನ್ನು ಸೆಳೆಯುವುದು ಹೇಗೆಂಬ ನಿಟ್ಟಿನಲ್ಲಿ ಮೂರೂ ಪ್ರಮುಖ ಪಕ್ಷಗಳು ಲೆಕ್ಕಾಚಾರದಲ್ಲಿ ತೊಡಗಿವೆ.
ಬದಲಾದ ಸಮೀಕರಣ:೨೦೧೮ ಹಾಗೂ ೨೦೨೩ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಜತೆಗೆ ಅಹಿಂದ ವರ್ಗದ ಬಹುಪಾಲು ಮತಗಳು ಜೆಡಿಎಸ್ ಪರ ಚಲಾವಣೆಗೊಂಡ ಹಿನ್ನೆಲೆಯಲ್ಲಿ ಪ್ರಸ್ತುತ ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಎರಡು ಬಾರಿಯೂ ಕ್ಷೇತ್ರದಲ್ಲಿ ನಿರಾಯಾಸವಾಗಿ ಗೆಲುವು ಸಾಧಿಸಿದ್ದರು. ಆದರೆ, ೨೦೨೪ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಜತೆಗೆ ಬಹುಪಾಲು ಅಹಿಂದ ವರ್ಗ ಸಹ ಕಾಂಗ್ರೆಸ್ ಬೆಂಬಲಕ್ಕೆ ನಿಂತಿತ್ತು.
೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಸುಮಾರು ೧೬ ಸಾವಿರ ಮತ ಪಡೆದಿದ್ದ ಕಾಂಗ್ರೆಸ್ ಅಹಿಂದ ವರ್ಗ ದೊಡ್ಡ ಪ್ರಮಾಣದಲ್ಲಿ ತನ್ನ ಪರ ನಿಂತ ಹಿನ್ನೆಲೆಯಲ್ಲಿ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ೮೬ ಸಾವಿರ ಮತಗಳನ್ನು ಪಡೆದುಕೊಂಡಿತ್ತು. ಇದು ಹೊಸ ಜಾತಿ ಸಮೀಕರಣಕ್ಕೆ ನಾಂದಿ ಹಾಡಿದ್ದು, ತಾವು ಕಳೆದುಕೊಂಡ ಮತಗಳೆಷ್ಟು ಉಳಿಸಿಕೊಂಡ ಮತಗಳೆಷ್ಟು ಎಂಬುದು ಜೆಡಿಎಸ್-ಬಿಜೆಪಿ ಪಾಲಿಗೆ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.ಅಹಿಂದ ಮತಗಳ ಮೇಲೆ ಜೆಡಿಎಸ್ ಕಣ್ಣು:
ಒಕ್ಕಲಿಗ ಮತದಾರರೇ ಜೆಡಿಎಸ್ ಶಕ್ತಿಯಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಶೇ.೬೦ರಷ್ಟು ಮತಗಳನ್ನು ಸೆಳೆಯುವ ಜತೆಗೆ ಶೇ.೩೦ರಿಂದ ೪೦ರಷ್ಟು ಅಹಿಂದ ಮತಗಳನ್ನು ಪಡೆದಲ್ಲಿ ಕ್ಷೇತ್ರದಲ್ಲಿ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರದಲ್ಲಿ ದಳಪತಿ ಕುಮಾರಸ್ವಾಮಿ ಇದ್ದಾರೆ. ತಮ್ಮ ಪಕ್ಷದ ಮುಖಂಡರಿಗೂ ತಮ್ಮ ಲೆಕ್ಕಾಚಾರವನ್ನು ವಿವರಿಸಿದ್ದು, ಈ ನಿಟ್ಟಿನಲ್ಲಿ ಕಾರ್ಯತಂತ್ರ ಅನುಸರಿಸುವಂತೆ ಸೂಚಿಸಿದ್ದಾರೆ.ಅಹಿಂದ ಮತ ಉಳಿಸಿಕೊಳ್ಳಲು ಕೈಕಸರತ್ತು:
ಕಳೆದ ಲೋಕಸಭಾ ಚುನಾವಣೆಯಲ್ಲಿ ಕೈಹಿಡಿದ್ದ ಅಹಿಂದ ಮತಗಳ ಜತೆಗೆ ಒಕ್ಕಲಿಗ ಸಮುದಾಯ ಹಾಗೂ ಇನ್ನಿತರ ಸಮುದಾಯಗಳ ಮತ ಸೆಳೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಮಗ್ನವಾಗಿದೆ. ಪಕ್ಷದ ಮತ ಬ್ಯಾಂಕ್ ಆದ ಮುಸ್ಲಿಂ ಹಾಗೂ ದಲಿತ ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಂಡು ಪ್ರಬಲ ಸಮಯದಾಯವಾಗಿರುವ ಒಕ್ಕಲಿಗರು ಹಾಗೂ ಹಿಂದುಳಿದ ಸಮುದಾಯದ ಮತಗಳನ್ನು ಸೆಳೆದದ್ದೇ ಆದಲ್ಲಿ ಕ್ಷೇತ್ರದಲ್ಲಿ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ಸಿನದ್ದಾಗಿದೆ.ಸೈನಿಕನ ಲೆಕ್ಕಾಚಾರ:
ಕ್ಷೇತ್ರದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಐದು ಬಾರಿ ಗೆಲುವು ಸಾಧಿಸಿದ್ದು, ಈ ಚುನಾವಣೆಗಳಲ್ಲಿ ಅಹಿಂದ ಸಮುದಾಯ ಅವರ ಪರ ನಿಂತಿದ್ದದ್ದೇ ಕಾರಣ. ೨೦೦೪ರ ಚುನಾವಣೆಯನ್ನು ಹೊರತುಪಡಿಸಿದರೆ ಬಹುತೇಕ ಚುನಾವಣೆಗಳಲ್ಲಿ ಮುಸ್ಲಿಂ ಮತದಾರರು ಯೋಗೇಶ್ವರ್ ಕೈ ಹಿಡಿದಿಲ್ಲ. ಆದರೆ, ೨೦೧೩ರಲ್ಲಿ ಸಮಾಜವಾದಿ ಪಕ್ಷದ ಚಿಹ್ನೆಯಡಿ ಸ್ಪರ್ಧೆ ಮಾಡಿದ್ದ ಯೋಗೇಶ್ವರ್‌ಗೆ ಕಾಂಗ್ರೆಸ್‌ನ ಸಾದತ್ ಅಲಿಖಾನ್‌ಗಿಂತ ಹೆಚ್ಚು ಮುಲ್ಸಿಂ ಮತಗಳು ಲಭಿಸಿದ್ದವು.ಬಿಜೆಪಿ ಸೇರಿದ ಮೇಲೆ ಮುಸ್ಲಿಂ ಹಾಗೂ ದಲಿತ ಮತಗಳು ಅವರಿಂದ ದೂರಾಗಿವೆ. ತಿಗಳರು ಮತ್ತು ಬೆಸ್ತ ಸಮುದಾಯದ ಮತಗಳು ಸೇರಿದಂತೆ ಸಣ್ಣ ಪುಟ್ಟ ಹಿಂದುಳಿದ ಸಮುದಾಯಗಳ ಜತೆಗೆ ಒಕ್ಕಲಿಗ ಸಮುದಾಯದ ಮತಗಳನ್ನು ಪಡೆದಲ್ಲಿ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ.
ಇನ್ನು ಎನ್‌ಡಿಎ ಟಿಕೆಟ್ ದೊರೆತಲ್ಲಿ ಅಥವಾ ಕೈತಪ್ಪಿದಲ್ಲಿ ಯಾವ ರೀತಿಯ ಜಾತಿ ಸಮೀಕರಣ ತಮ್ಮ ಪರ ಕೆಲಸ ಮಾಡಲಿದೆ ಎಂಬುದರ ಕುರಿತು ಅವರು ಲೆಕ್ಕಾಚಾರದಲ್ಲೂ ತೊಡಗಿದ್ದಾರೆ.ಬಾಕ್ಸ್.............
ಚನ್ನಪಟ್ಟಣ ಮತಗಳ ವಿವರಪುರುಷ ಮತದಾರರು೧,೧೨,೨೭೧
ಮಹಿಳಾ ಮತದಾರರು೧,೨೦,೫೫೭ಇತರೆ ಮತದಾರರು೦೮
ಒಟ್ಟು ಮತದಾರರು೨,೩೨,೮೩೬ಬಾಕ್ಸ್.............
ಜಾತಿವಾರು ಮತಗಳುಒಕ್ಕಲಿಗರು೧.೦೫ ಲಕ್ಷ
ದಲಿತರು೪೦ ಸಾವಿರಮುಸ್ಲಿಂ೩೦ ಸಾವಿರ
ತಿಗಳರು೧೦ ಸಾವಿರಬೆಸ್ತರು೧೦ ಸಾವಿರ
ಕುರುಬರು೮ ಸಾವಿರಇತರೆ ಹಿಂದುಳಿದ ವರ್ಗ೨೦ ಸಾವಿರ
ಲಿಂಗಾಯತರು, ಬ್ರಾಹ್ಮಣರು೫ ಸಾವಿರ