ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಚದುರಿ ಹೋಗಿರುವ ರೈತ ಸಂಘಟನೆಗಳಿಂದ ರಾಜಕೀಯ ಪಕ್ಷಗಳು ಲಾಭ ಪಡೆದುಕೊಳ್ಳುತ್ತಿವೆ. ಸಂಘಟನೆಗಳು ಬಲಿಷ್ಠವಾದಾಗ ಮಾತ್ರ ಕೃಷಿಕರು ಮತ್ತು ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ರಾಜ್ಯ ರೈತ ಸಂಘದ ಏಕೀಕರಣ ಸಂಘಟನೆಯ ವರಿಷ್ಠ ಪಚ್ಚೆ ನಂಜುಂಡಸ್ವಾಮಿ ಬುಧವಾರ ಹೇಳಿದರು.ಪಟ್ಟಣದ ಮಳವಳ್ಳಿ ರಸ್ತೆಯ ದಿ.ಪ್ರೊ.ಎಂ.ಡಿ.ನಂಜುಡಸ್ವಾಮಿ ಅವರ 90ನೇ ವರ್ಷದ ಜಯಂತಿ ನಿಮಿತ್ತ ರೈತ ಕಾರ್ಯಕರ್ತರೊಂದಿಗೆ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮದ್ದೂರು ತಾಲೂಕು ರೈತ ಸಂಘದ ಏಕೀಕರಣ ಸಮಿತಿಗೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದಲ್ಲಿ ರೈತ ಸಂಘಗಳು ಚದುರಿ ಹಂಚಿಹೋಗಿರುವುದರಿಂದ ರಾಜಕೀಯ ಪಕ್ಷಗಳು ಇದರ ಲಾಭ ಪಡೆದುಕೊಳ್ಳುತ್ತಿವೆ. ಸಂಘಟನೆಗಳು ಇನ್ನಾದರೂ ಎಚ್ಚೆತ್ತುಕೊಂಡು ರಾಜಕೀಯ ಬದಿಗೊತ್ತಿ ರೈತರ ಉಳಿವಿಗಾಗಿ ಸಂಘಟನೆಗಳನ್ನು ಬಲಿಷ್ಠ ಗೊಳಿಸಿಕೊಳ್ಳಬೇಕು ಎಂದರು.ಇತ್ತೀಚಿನ ದಿನಗಳಲ್ಲಿ ರೈತ ಸಂಘದ ನಾಯಕರು ಹೋರಾಟದ ಹೆಸರಿನಲ್ಲಿ ಇಬ್ಬಾಗವಾಗಿದ್ದಾರೆ. ಹೋರಾಟದ ಸಂಕೇತವಾದ ಹಸಿರು ಟವಲ್‌ಗಳನ್ನು ರಾಜಕೀಯ ಪಕ್ಷಗಳ ನಾಯಕರಲ್ಲಿ ಒತ್ತೆ ಇಡುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಕೆಲವು ರೈತ ನಾಯಕರ ಇಂತಹ ಕೆಲಸಗಳಿಗೆ ಕಡಿವಾಣ ಹಾಕಬೇಕಾದರೆ ರೈತ ಶಕ್ತಿ ಒಗ್ಗೂಡಬೇಕು, ತಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಪಡೆಯಲು ಹೋರಾಟ ನಡೆಸಬೇಕು. ರಾಜ್ಯದಲ್ಲಿ ರೈತ ಸಂಘಗಳನ್ನು ಏಕೀಕರಣ ಗೊಳಿಸಿದ ಪರಿಣಾಮ ಈ ಹಿಂದೆ ತೊಗರಿ ಬೆಳೆಗೆ ಪ್ರತಿ ಕ್ವಿಂಟಲ್‌ಗೆ 7400 ದರ ಇತ್ತು. ಈಗ ಎಂಟು ಸಾವಿರ ಬೆಲೆ ದೊರಕುತ್ತಿದೆ. ಆ ನಂತರ ಪ್ರತಿ ಟನ್ ಕಬ್ಬಿಗೆ 4,400 ಬೆಲೆ ನೀಡಲು ಸಕ್ಕರೆ ಕಾರ್ಖಾನೆಗಳು ಸಮ್ಮತಿಸಿವೆ. ಇದು ರೈತ ಸಂಘದ ಏಕೀಕರಣ ಹೋರಾಟದಿಂದ ಮಾತ್ರ ಸಾಧ್ಯವಾಗಿದೆ ಎಂದರು.
ಸಭೆಯಲ್ಲಿ ರೈತ ಸಂಘದ ಏಕೀಕರಣ ಸಮಿತಿ ಜಿಲ್ಲಾಧ್ಯಕ್ಷ ಇಂಡವಾಳು ಚಂದ್ರಶೇಖರ್, ಮೈಸೂರು ಜಿಲ್ಲಾ ಸಂಘಟನೆ ಪ್ರಧಾನ ಕಾರ್ಯದರ್ಶಿ ರಘು, ಯರಗನಹಳ್ಳಿ ರಾಮಕೃಷ್ಣಯ್ಯ, ಅಣ್ಣೂರು ಮಹೇಂದ್ರ, ಕೀಳಘಟ್ಟ ನಂಜುಂಡಯ್ಯ, ಸೋಶಿ ಪ್ರಕಾಶ್, ನಲಿಕೃಷ್ಣ, ಕುದುರಗುಂಡಿ ನಾಗರಾಜು, ಸುಬ್ಬನಹಳ್ಳಿ ಸುರೇಶ್, ಬೋರಲಿಂಗಯ್ಯ, ಪ್ರಭುಲಿಂಗ, ರಾಮಲಿಂಗೇಗೌಡ, ರಮೇಶ್ ಸೇರಿದಂತೆ ಹಲವು ರೈತ ಮುಖಂಡರು ಭಾಗವಹಿಸಿದ್ದರು.