ಸಾರಾಂಶ
ಹರಪನಹಳ್ಳಿ: ಗೆದ್ದವರು ಆಯಾ ಪಕ್ಷದಲ್ಲಿ ಕಡ್ಡಾಯವಾಗಿ ಐದು ವರ್ಷ ಇರುವ ಹಾಗೆ ಕಾನೂನು ತರಬೇಕು ಎಂದು ತರಳಬಾಳು ಜ.ಶಿವಮೂರ್ತಿ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ತಾಲೂಕಿನ ಮೈದೂರು ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಊರಮ್ಮದೇವಿ ದೇವಸ್ಥಾನದ ನೂತನ ಕಟ್ಟಡ ಗೋಪುರದ ಕಳಸಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಯಾವ ಜನಪ್ರತಿನಿಧಿಗಳು ನಮ್ಮ ಪಕ್ಷದಲ್ಲಿ ಇದ್ದಾರೆ ಎಂಬ ಬಗ್ಗೆ ಆಯಾ ಪಕ್ಷದವರು ಚುನಾವಣಾ ಆಯೋಗದಲ್ಲಿ ನೋಂದಾಯಿಸಬೇಕು. ಐದು ವರ್ಷ ಗೆದ್ದ ಪಾರ್ಟಿಯಲ್ಲಿರಬೇಕು. ಇಲ್ಲದಿದ್ದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಯಾವ ರಾಜಕಾರಣಿಗಳು ಇನ್ನೊಬ್ಬ ರಾಜಕಾರಣಿಯನ್ನು ವೈಯಕ್ತಿಕ ನಿಂದನೆ ಮಾಡಬಾರದು, ತಪ್ಪುಗಳಿದ್ದರೆ ಎತ್ತಿ ಹೇಳಬೇಕು. ನಿನ್ನೆ ಬಯ್ಯುತ್ತಾರೆ, ಇಂದು ಅವರನ್ನು ಬರಮಾಡಿಕೊಳ್ಳುತ್ತಾರೆ. ಪ್ರಸಕ್ತ ರಾಜಕೀಯ ವ್ಯವಸ್ಥೆ ಬೇಸರ ತರಿಸಿದೆ. ಅಲ್ಲಿ ಟಿಕೆಟ್ ಇಲ್ಲ ಅಂದರೆ ಇಲ್ಲಿಗೆ, ಇಲ್ಲಿ ಟಿಕೆಟ್ ಇಲ್ಲ ಅಂದರೆ ಅಲ್ಲಿಗೆ ಹೋಗುತ್ತಿದ್ದಾರೆ. ಚುನಾವಣೆ ಎಂಬುದು ಮಂಗನಾಟವಾಗಿದೆ. ಸ್ವಾಭಿಮಾನ ಇಲ್ಲವಾಗಿದೆ ಎಂದರು.ರಾಜಕಾರಣಿಗಳನ್ನು ಕೆಡಿಸಿದವರು ನೀವೇ, ನೀವು ಸರಿಯಾಗಿ ಮತ ಹಾಕಿದರೆ ಹೀಗಾಗಲ್ಲ ಎಂದು ಜನರಿಗೆ ಹೇಳಿದರು. ಯುವಕರಿಗೆ ಸರಿಯಾದ ಮಾರ್ಗದರ್ಶನದ ಅಗತ್ಯವಿದೆ, ಪ್ರಜಾಪ್ರಭುತ್ವವನ್ನು ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕಿದೆ ಎಂದು ಅವರು ತಿಳಿಸಿದರು.ಹರಿಹರ ವೀರಶೈವ ಲಿಂಗಾಯುತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ, ಚುನಾವಣೆ ಹೋಳಿ ಹುಣ್ಣಿಮೆಯಂತೆ ಅವರ ಮೇಲೆ ಇವರು ಇವರ ಮೇಲೆ ಅವರು ಬಣ್ಣ ಎರಚುವುದು, ಪಕ್ಷಗಳು ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು, ಚುನಾವಣೆ ಮುಗಿದ ಮೇಲೆ ತಲೆಸ್ನಾನ ಮಾಡಿ ಊರಮ್ಮದೇವಿಯ ದರ್ಶನ ಪಡೆಯಿರಿ ಎಂದು ಹೇಳಿದರು.ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಮಾತನಾಡಿದರು.
ಜಿಪಂ ಮಾಜಿ ಸದಸ್ಯ ಪಿ.ಮಹಾಬಲೇಶ್ವರಗೌಡ ಮಾತನಾಡಿ, ಈ ಭಾಗದಲ್ಲಿ ಹರಿದಿರುವ ಹಗರಿಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಾಣಕ್ಕೆ ಇಬ್ಬರು ಶ್ರೀಗಳು ಬೆಂಬಲಿಸಬೇಕು. ಅನ್ನದ ಕೊರತೆಗಿಂತ ಜ್ಞಾನದ ಕೊರತೆ ಇದೆ, ಗುರುಗಳ ಮಾರ್ಗದರ್ಶನದಲ್ಲಿ ನಾವು ನೀವು ನಡೆದುಕೊಳ್ಳೋಣ ಎಂದು ಅವರು ತಿಳಿಸಿದರು.ಮೈದೂರುಊರಮ್ಮ ದೇವಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಂಕಾಳ ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು.
ಸಹಕಾರ ಸೌಹಾರ್ದ ಬ್ಯಾಂಕಿನ ರಾಜ್ಯಾಧ್ಯಕ್ಷ ಜಿ.ನಂಜನಗೌಡ, ತಾಪಂ ಮಾಡಿ ಅಧ್ಯಕ್ಷ ಕೆ.ಕುಬೇರಪ್ಪ, ಡಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಬಿ.ಕೆ. ಪ್ರಕಾಶ, ಮುಖಂಡರಾದ ಕಟ್ಟಿರಂಗನಾಥ, ಬಂದೋಳ ಮಂಜುನಾಥ, ವಕೀಲ ಬಾವಿಹಳ್ಳಿ ಬಸವರಾಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ತಾಪಂ ಮಾಜಿ ಸದಸ್ಯ ಮೈದೂರು ರಾಮಣ್ಣ, ಸಚ್ಚಿದಾನಂದಪ್ಪ, ಕೆ.ಮಲ್ಲಿಕಾರ್ಜುನ, ಕೆ.ರಾಮರಾವ್, ಮುಖ್ಯ ಶಿಕ್ಷಕ ದೇವೇಂದ್ರಗೌಡ, ಬಾಗಳೆಪ್ಪ, ಎಂ.ಕರಿಬಸಯ್ಯ, ಚೆನ್ನಬಸಯ್ಯ, ಸಣ್ಣಮಾರಪ್ಪ, ಸಣ್ಣಕ್ಕಿ ಗೋಣೆಬಸಪ್ಪ, ಮರುಳಸಿದ್ದಾಚಾರ, ಬೋವಿ ತಿಪ್ಪಣ್ಣ, ಜ್ಯೋತಿ ಜಗದಪ್ಪ, ಗೊಂಗಡಿ ನಾಗರಾಜ, ಲಾಟಿ ದಾದಾಪೀರ, ಮಡ್ಡಿ ಚಿಕ್ಕಪ್ಪ, ರಹಿಮಾನಸಾಬ್ ಇದ್ದರು.