ಸಾರಾಂಶ
ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕನೆಂದು ನಿರ್ಣಯ ಮಾಡಿದ್ದಕ್ಕೆ ಸರಕಾರದ ನಿರ್ಣಯಕ್ಕೆ ಜನರು ಅಭಿಮಾನಪಟ್ಟಿದ್ದಾರೆ ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಹುಬ್ಬಳ್ಳಿ: ಬಸವೇಶ್ವರ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರಕಾರ ಘೋಷಿಸಿರುವುದನ್ನು ರಾಜಕೀಯ ಎಂದು ಆರೋಪಿಸುವವರು ಕ್ಷುಲ್ಲಕ ಮನಸ್ಥಿತಿಯವರು ಎಂದು ಸಚಿವ ಎಚ್.ಕೆ. ಪಾಟೀಲ್ ಟೀಕಿಸಿದರು.
ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಬಸವಣ್ಣನವರು ಮಾನವ ಕುಲಕ್ಕೆ ಪ್ರಜಾಪ್ರಭುತ್ವದ ಕಲ್ಪನೆ ಕೊಟ್ಟವರು. ಅವರ ವಿಷಯದಲ್ಲಿ ರಾಜಕಾರಣ ಬೆರೆಸುವವರ ತಲೆಯಲ್ಲಿ ಕೇವಲ ರಾಜಕಾರಣ ಇದೆ. ಟೀಕಿಸುವವರು ಏನೂ ಮಾಡಲಿಲ್ಲ. ಅದಕ್ಕೆ ಇಲ್ಲ ಸಲ್ಲದ ಆರೋಪ ಮಾಡುತ್ತಾರೆ. ಇದು ಸರಿಯಲ್ಲ’ಎಂದರು.ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕನೆಂದು ನಿರ್ಣಯ ಮಾಡಿದ್ದಕ್ಕೆ ಸರಕಾರದ ನಿರ್ಣಯಕ್ಕೆ ಜನರು ಅಭಿಮಾನಪಟ್ಡಿದ್ದಾರೆ. ಮಠಾಧೀಶರು ಸೇರಿದಂತೆ ಎಲ್ಲ ಸಮುದಾಯಗಳ ಮುಖಂಡು ಅಭಿನಂದಿಸಿದ್ದಾರೆ ಎಂದರು.
ಹಾನಗಲ್ ಯುವತಿ ರೇಪ್ ಪ್ರಕರಣ ಖಂಡಿಸಿ ಎಸ್‌ಐಟಿ ತನಿಖೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರಿಗೆ ಪ್ರತಿಭಟನೆ ಮಾಡುವ ಹಕ್ಕು ಇದೆ. ಆದರೆ, ಸರಕಾರ ಎಲ್ಲ ಗಮನಿಸಿ ಹೆಜ್ಜೆ ಇಡುತ್ತಿದೆ. ಪ್ರಕರಣ ನಿರ್ವಹಿಸುವಲ್ಲಿ ಸರಕಾರ ವಿಫಲವಾಗಿಲ್ಲ ಎಂದರು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂಡಿಯಾ ಒಕ್ಕೂಟದ ಮುಖ್ಯಸ್ಥ ಸ್ಥಾನಕ್ಕೆ ಬಂದಿರುವ ಪ್ರಸ್ತಾವನೆ ಕರ್ನಾಟಕದ ಜನರು ಹೆಮ್ಮೆ ಪಡುವ ವಿಚಾರ. ನ್ಯಾ. ಸದಾಶಿವ ಆಯೋಗದ ವರದಿ ಅನ್ವಯ ಒಳ ಮೀಸಲಾತಿಗೆ ಸಂವಿಧಾನ ತಿದ್ದುಪಡಿ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು.