ಕಾರ್ಖಾನೆ ಮಾಲಿನ್ಯ ವಿಚಾರದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಮೌನ ವಹಿಸಿರುವುದು ಸರಿಯಲ್ಲ
ಕೊಪ್ಪಳ: ಬಲ್ಡೋಟ್ ಕಂಪನಿ ವಿರುದ್ಧ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ, ಪರಿಸರ ಹಿತರಕ್ಷಣಾ ವೇದಿಕೆ ಹಾಗೂ ರಾಜ್ಯ ರೈತ ಸಂಘ ನಡೆಸುತ್ತಿರುವ ಧರಣಿ ಮಂಗಳವಾರ 271ನೇ ದಿನಕ್ಕೆ ಕಾಲಿಟ್ಟಿತು.
ಧರಣಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಸೇನ ಕಲಕೇರಿ, ಜು. 21ರಂದು ಬಸಾಪುರ ಕೆರೆಯ ಸಾರ್ವಜನಿಕ ರಸ್ತೆಗೆ ಅಡ್ಡವಾಗಿ ನಿರ್ಮಿಸಿದ್ದ ಕಾಂಪೌಂಡ್ ಅನ್ನು ರೈತರು ತೆರವುಗೊಳಿಸಿದ್ದರು. ಬಳಿಕ ಪೊಲೀಸ್ ಅಧಿಕಾರಿಗಳ ಭರವಸೆಯ ನಡುವೆಯೂ ಮರುದಿನ ಪೊಲೀಸ್ ಭದ್ರತೆ ನೀಡಿ ಮತ್ತೆ ಕಾಂಪೌಂಡ್ ನಿರ್ಮಿಸಿರುವುದು ಖಂಡನೀಯ. ಸಾರ್ವಜನಿಕ ಕೆರೆಗೆ ಪೊಲೀಸ್ ಕಾವಲು ನೀಡುತ್ತಿರುವುದು ಯಾವ ಕಾನೂನಿನಡಿ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.ಧರಣಿ ಹೋರಾಟಗಾರ ಮಹಾದೇವಪ್ಪ ಮಾವಿನಮಡು ಮಾತನಾಡಿ, ಕಾರ್ಖಾನೆ ಮಾಲಿನ್ಯ ವಿಚಾರದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಮೌನ ವಹಿಸಿರುವುದು ಸರಿಯಲ್ಲ. ಜನರ ಆರೋಗ್ಯ ಮತ್ತು ಪರಿಸರದ ಹಿತದೃಷ್ಟಿಯಿಂದ ಮಾಲಿನ್ಯ ತಡೆಗೆ ರಾಜಕಾರಣಿಗಳು ಮುಂದಾಗಬೇಕು. ಇಲ್ಲವಾದರೆ ಜನರು ಚುನಾವಣೆಗೆ ಕಾಯದೆ ಪ್ರಶ್ನಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.
ಧರಣಿಯಲ್ಲಿ ನಿವೃತ್ತ ಪ್ರಾಚಾರ್ಯ ಬಿ.ಜಿ.ಕರಿಗಾರ, ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ, ಶಿವಾನಂದಯ್ಯ ಬೀಳಗಿಮಠ, ರಾಜಶೇಖರ ಏಳುಭಾವಿ, ರವಿ ಕಾಂತನವರ, ಜಾನಪದ ಹಾಡುಗಾರ್ತಿ ಈರಮ್ಮ ಉಂಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.