ಧರ್ಮದ ಹೆಸರಲ್ಲಿ ರಾಜಕೀಯ, ಗುಂಪುಗಾರಿಕೆ ಸರಿಯಲ್ಲ

| Published : Aug 07 2024, 01:00 AM IST

ಸಾರಾಂಶ

ವೀರಶೈವ ಸಮಾಜದ ಬಂಧುಗಳು, ಮುಖಂಡರು, ಮಠ ಹಾಗೂ ಮಠಾಧಿಪತಿಗಳನ್ನು ಉತ್ತಮ ಸದ್ವಿಚಾರಗಳಿಗೆ, ಸಮಾಜದ ಮಕ್ಕಳ ಶೈಕ್ಷಣಿಕ ಅಭ್ಯುದಯಗಳಿಗೆ ಬಳಕೆ ಮಾಡಿಕೊಳ್ಳಬೇಕೆ ವಿನಃ ನಿಮ್ಮ ಆಂತರಿಕ ಕಲಹಳಿಗೆ ಬಳಕೆ ಮಾಡಿಕೊಳ್ಳಬಾರದು ಎಂದು ಸಾಲೂರು ಮಠಾಧ್ಯಕ್ಷ ಶಾಂತಮಲ್ಲಿಕಾರ್ಜುನ ಸ್ವಾಮಿಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ವೀರಶೈವ ಸಮಾಜದ ಬಂಧುಗಳು, ಮುಖಂಡರು, ಮಠ ಹಾಗೂ ಮಠಾಧಿಪತಿಗಳನ್ನು ಉತ್ತಮ ಸದ್ವಿಚಾರಗಳಿಗೆ, ಸಮಾಜದ ಮಕ್ಕಳ ಶೈಕ್ಷಣಿಕ ಅಭ್ಯುದಯಗಳಿಗೆ ಬಳಕೆ ಮಾಡಿಕೊಳ್ಳಬೇಕೆ ವಿನಃ ನಿಮ್ಮ ಆಂತರಿಕ ಕಲಹಳಿಗೆ ಬಳಕೆ ಮಾಡಿಕೊಳ್ಳಬಾರದು ಎಂದು ಸಾಲೂರು ಮಠಾಧ್ಯಕ್ಷ ಶಾಂತಮಲ್ಲಿಕಾರ್ಜುನ ಸ್ವಾಮಿಜಿ ಹೇಳಿದರು.

ನಂದೀಶ್ ಗೆಳೆಯರ ಬಳಗ ವೆಂಕಟೇಶ್ವರ ಮಹಲ್‌ನಲ್ಲಿ ಆಯೋಜಿಸಿದ್ದ ಚಾ.ನಗರ ಜಿಲ್ಲಾ ವೀರಶೈವ ಲಿಂಗಾಯಿತ ಮಹಾಸಭೆಯಲ್ಲಿ ಚುನಾಯಿತರಾದವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದ ಸಾನ್ನಿದ್ಯ ವಹಿಸಿ ಮಾತನಾಡಿದರು. ಹಾನಗಲ್ ಕುಮಾರಸ್ವಾಮಿ ಅವರು ಸ್ಥಾಪಿಸಿದ ವೀರಶೈವ ಲಿಂಗಾಯಿತ ಮಹಾಸಭೆಯ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಾವು ಸಾಗಬೇಕಿದೆ. ಕಳೆದ ತಿಂಗಳು ವೀರಶೈವ ಮಹಾಸಭೆ ಚುನಾವಣೆ ನಡೆದ ಪರಿ ನೋಡಿದರೆ ಈ ಸಮಾಜ ದೊಡ್ಡದಾಗಿ ವಿಜೃಂಭಿಸಲಿದೆ ಎಂಬ ಭಾವನೆ ಮೂಡಿತ್ತು. ಆದರೆ ಅದಾಗಲಿಲ್ಲ, ಈ ಚುನಾವಣೆಯಲ್ಲಿ ನಿಜಕ್ಕೂ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಮೇಲುಗೈ ಸಾಧಿಸಿದ್ದು ಮಹಿಳಾ ನಿರ್ದೇಶಕರು ಮಾತ್ರ, ಆದರೆ ಪುರುಷರೆಲ್ಲಾ ನಮ್ಮ ಸಮಾಜದಲ್ಲಿ ನೂರೆಂಟು ಪಂಗಡ, ವರ್ಗಗಳಿವೆ ಎಂಬುದನ್ನ ತೋರಿಸಿದರು. ಈಗ ಚುನಾವಣೆ ಮುಗಿದಿದೆ, ಚುನಾವಣೆ ವೇಳೆ ಆದ ಅನೇಕ ಒಡಕುಗಳನ್ನು ಸರಿಪಡಿಸಬೇಕಿದೆ. ಈ ಕೆಲಸವನ್ನು ಚುನಾಯಿತ ಪ್ರತಿನಿಧಿಗಳು ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಸಮಾಜದ ಬಂಧುಗಳು ಒಟ್ಟಾಗಿ ಬಂದು ಒಗ್ಗಟ್ಟು ತೋರಿಸಿ ಎಂದು ಸಲಹೆ ನೀಡಿದರು. ಧರ್ಮದ ಹೆಸರಲ್ಲಿ ರಾಜಕೀಯ ಸರಿಯಲ್ಲ: ಧರ್ಮ ಎಂಬುದು ಸೂಕ್ಷ್ಮವಾದುದು, ಅಂತಹ ಧರ್ಮದ ಹೆಸರಲ್ಲಿ ರಾಜಕೀಯ ಮಾಡುವುದು, ಪಂಗಡಗಳಾಗಿ ವಿಭಜನೆಯಾಗುವುದು, ಜಾತಿ, ಜಾತಿಗಳ ನಡುವೆಯೇ ವೈಷಮ್ಯ ಹರಡುವುದು ಸರಿಯಲ್ಲ, ಧಯವೇ ಧರ್ಮದ ಮೂಲ ಎಂಬುದನ್ನು ಜಗಜ್ಯೋತಿ ಬಸವೇಶ್ವರರು ಸಾರಿದ್ದಾರೆ, ಅದರಂತೆ ಧರ್ಮದಲ್ಲಿ ದಯೆ ಇರಬೇಕು, ಧರ್ಮದ ಹೆಸರಲ್ಲಿ ತಾತ್ಸಾರವೂ ಸರಿಯಲ್ಲ, ಇವೆಲ್ಲವೂ ಸಮಾಜದ ಬೆಳವಣಿಗೆ ಮೇಲೆ ಅಗಾಧ ಪರಿಣಾಮ ಬೀರಲಿದೆ ಎಂಬುದನ್ನ ಸಮಾಜದ ಬಂಧುಗಳ ಮನಗಾಣಬೇಕಿದೆ ಎಂದರು. ಸಮಾಜದ ಬಡತನದಲ್ಲಿರುವ ವಿದ್ಯಾಥಿಗಳ ಶೈಕ್ಷಣಿಕ ಪ್ರಗತಿಗೆ ಮುಂದಾಗಬೇಕಿದೆ. ವೈದ್ಯಾಧಿಕಾರಿ ಡಾ.ಪ್ರವೀಣ್ ಕುಮಾರ್ ಅವರು ಮತ್ತು ತಂಡ ಮುಡಿಗುಂಡ ಕೊಂಗವೀರಗೌಡರ ವಿದ್ಯಾರ್ಥಿ ನಿಲಯದಲ್ಲಿರುವ ಹೆಣ್ಣು ಮಕ್ಕಳ ಸಬಲಿಕರಣಕ್ಕೆ ಶ್ರಮಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು. ಕೊಂಗವಿರೇಗೌಡರ ವಿದ್ಯಾರ್ಥಿ ನಿಲಯದಲ್ಲಿರುವ ಹೆಣ್ಣು ಮಕ್ಕಳಿಗೆ ವಿದ್ಯಾರ್ಥೀ ಭವನ ನಿರ್ಮಾಣಕ್ಕೆ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕಿದೆ ಎಂದರು.

ನಂದೀಶ್‌ಗೆ ಅಭೂತಪೂರ್ವ ಸನ್ಮಾನ: ಸಮಾರಂಭದಲ್ಲಿ ಜಿಲ್ಲಾಧ್ಯಕ್ಷರಾಗಿ ಎಡರನೆ ಅವಧಿಗೆ ಚುನಾಯಿತರಾದ ನಂದೀಶ್ ಅವರನ್ನು ಅದ್ಧೂರಿಯಾಗಿ ಗೌರವಿಸಲಾಯಿತು. ಜಿಲ್ಲಾ ಘಟಕದ ಮುಳ್ಳೂರು ಇಂದ್ರೇಶ್, ಉಷಾರಾಣಿ, ತಾಲೂಕು ಘಟಕದ ಬಸವರಾಜಪ್ಪ, ಮಹದೇವಸ್ವಾಮಿ, ತಿಮ್ಮರಾಜಿಪುರ ಮಹದೇವಸ್ವಾಮಿ, ಬೂದಿತಿಟ್ಟು ಶಿವಕುಮಾರ್, ಹನೂರು ಘಟಕದ ಸೋಮಶೇಖರ್, ವಿನೋದ್, ನಾಗೇಂದ್ರ, ಕೆಂಪನಪಾಳ್ಯ ಮಹೇಶ್ ಸೇರಿದಂತೆ ಅನೇಕ ಚುನಾಯಿತರಿಗೆ ಗೌರವ ಸಲ್ಲಿಸಲಾಯಿತು.

ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿದ ಜಿಲ್ಲಾಧ್ಯಕ್ಷ ಮುಡ್ಲೂಪುರ ನಂದೀಶ್ ಮಾತನಾಡಿ, ಯಾವುದೆ ಲೋಪಬರದಂತೆ ಸಮಾಜದ ಕೆಲಸ ಮಾಡುತ್ತೇನೆ, ತಾಲೂಕು ಹಾಗೂ ಜಿಲ್ಲಾ ಪದಾಧಿಕಾರಿಗಳ ಜೊತೆಗೂಡಿ ಸಮಾಜದ ಬಂಧುಗಳಿಗೆ ಯಾವುದೆ ರೀತಿ ತೊಂದರೆಯಾದರೂ ಅಲ್ಲಿ ನಿಂತು ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸ್ಪಂದಿಸುವೆ. ಸಮಾಜದ ಬಂಧುಗಳೆಲ್ಲರೂ ನನ್ನ ಕೆಲಸಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.

ಈ ವೇಳೆ ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಜನನಿ ಆಸ್ಪತ್ರೆ ಹಾಗೂ ಮುಡಿಗುಂಡ ಗುಬ್ಬಿ ತೋಟದಪ್ಪ ಮಹಿಳಾ ಹಾಸ್ಟೆಲ್ ಅಧ್ಯಕ್ಷೆ ಡಾ.ಪ್ರವೀಣ್ ಕುಮಾರ್, ವೀರಭದ್ರಸ್ವಾಮಿ, ಪ್ರದೀಪ್ ಕುಮಾರ್, ಅಭಾವೀಲಿಂ ಮಹಾಸಭೆ ಜಿಲ್ಲಾಧ್ಯಕ್ಷ ಮೂಡ್ಲೂಪುರ ನಂದೀಶ್, ಮಾಜಿ ಅಧ್ಯಕ್ಷ ಕೊಡಸೋಗೆ ಶಿವಬಸಪ್ಪ, ಡಾ.ಶ್ವೇತಾ, ಯುವ ಮುಖಂಡರು ಭೃಂಗೇಶ್, ರಾಜೇಶ್, ತಿಮ್ಮರಾಜೀಪುರ ರಾಜು, ಮಂಜುನಾಥ್, ಕಾಮಗೆರೆ ಮಧು, ಉತ್ತಂಬಳ್ಳಿ ಗಣೇಶ್, ಪಾನಿಪುರಿ ಜಗ್ಗ ಇದ್ದರು. ವೀರಶೈವ ಸಮಾಜದಲ್ಲಿ ಒಗ್ಗಟ್ಟಿನ ಕೊರತೆ ಇದೆ: ಮಾಜಿ ಶಾಸಕಿವೀರಶೈವ ಸಮಾಜ ಶ್ರೀಮಂತ ಪರಂಪರೆಯಿಂದ ಕೂಡಿದ್ದು ಇಲ್ಲಿ ಎಲ್ಲವೂ ಇದೆ. ಆದರೆ ಒಗ್ಗಟ್ಟಿಲ್ಲ, ಒಗ್ಗಟ್ಟಿನ ಕೊರತೆಯಿಂದಾಗಿ ನಾಲ್ಕೈದು ಜಿಲ್ಲೆಗಳಲ್ಲಿ ಐದಕ್ಕೂ ಅಧಿಕವಿದ್ದ ವೀರಶೈವ ಶಾಸಕರ ಸಂಖ್ಯೆ ಈಗ 1ಕ್ಕೆ ಕುಸಿತ ಕಂಡಿದೆ ಎಂದು ಮಾಜಿ ಶಾಸಕಿ ಪರಿಮಳ ನಾಗಪ್ಪ ವಿಷಾದಿಸಿದರು.

ವೆಂಕಟೇಶ್ವರ ಮಹಲ್‌ನಲ್ಲಿ ನಂದೀಶ್ ಅಭಿಮಾನಿ ಬಳಗ ವೀರಶೈವ ಲಿಂಗಾಯಿತ ಮಹಾಸಭೆಯಿಂದ ಚುನಾಯಿತರಾದ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳಿಗೆ ಅಬಿನಂದನಾ ಸಮಾರಂಭದಲ್ಲಿ ಮಾತನಾಡಿ, ಗುಂಡ್ಲುಪೇಟೆಯಲ್ಲಿ ತಮ್ಮ ಜನಪರ ಕೆಲಸಗಳಿಂದಾಗಿ ಗಣೇಶ್ ಪ್ರಸಾದ್ ಗೆಲುವು ಕಂಡಿದ್ದಾರೆ, ಅವರ ತಂದೆ ಮಹದೇವಪ್ರಸಾದ್ ಅವರು ಅವಿರತವಾಗಿ ಗೆಲುವು ಸಾಧಿಸುತ್ತಿದ್ದರು, ಅವರಂತೆ ನಮ್ಮ ನಾಲ್ಕೈದು ಜಿಲ್ಲೆಗಳಲ್ಲಿ ಸಮಾಜದ ಶಾಸಕರ ಸಂಖ್ಯೆ ಐದಕ್ಕಿಂತಲೂ ಹೆಚ್ಚಿತ್ತು, ಆದರೆ ಈಗ ಒಗ್ಗಟ್ಟಿನ ಕೊರತೆಯಿಂದ ಕುಂಠಿತವಾಗಿದೆ ಎಂದರು.

ಕೋವಿಡ್ ವೇಳೆ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ನಂದೀಶ್ ಅವರು ಮಾಡಿದ ಸತ್ಕಾರ್ಯ ಬಣ್ಣಿಸಲಾಗದ್ದು, ನೂತನ ಜಿಲ್ಲಾಧ್ಯಕ್ಷರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಜಿಲ್ಲೆಯಲ್ಲಿ ಆಗಬೇಕಾದ ಕೆಲಸ, ಕಾರ್ಯಗಳನ್ನು ಸಮಾಜದ ಬಂಧುಗಳೆಲ್ಲರೂ ನಿಂತು ಶ್ರಮಿಸೋಣ ಎಂದರು.ಸಂಘಟನೆಯಿಂದ ಸಮಾಜ ಬೆಳೆಯಬೇಕು, ಒಬ್ಬರಿಂದ ಸಮಾಜದ ಬೆಳವಣಿಗೆ ಅಸಾಧ್ಯ, ಒಗ್ಗಟ್ಟಿನಿಂದ ಮಾತ್ರ ಸಮಾಜದ ಉನ್ನತಿ ಸಾಧ್ಯ ಎಂದು ಹೇಳಿದರು.