ರಾಜಕಾರಣ ನಿಂತ ನೀರಲ್ಲ, ಧೃತಿಗೆಡದೆ ಪಕ್ಷ ಸಂಘಟಿಸಿ

| Published : Jun 30 2024, 12:49 AM IST

ರಾಜಕಾರಣ ನಿಂತ ನೀರಲ್ಲ, ಧೃತಿಗೆಡದೆ ಪಕ್ಷ ಸಂಘಟಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಇದೀಗ ಕಾಂಗ್ರೆಸ್ ಸಂಕಷ್ಟ ಸ್ಥಿತಿಯಲ್ಲಿದೆ. ನಮ್ಮ ಪಕ್ಷದಲ್ಲಿ ನ್ಯೂನತೆಗಳಿವೆ. ಮೊದಲು ಅವು ಸರಿಯಾಗಬೇಕು. ಚುನಾವಣೆ ಒಳ್ಳೆತನದಿಂದ ನಡೆಯುತ್ತಿಲ್ಲ, ಆದರೆ ಸತ್ಯ ಒಂದು ದಿನ ಗೆದ್ದೆ ಗೆಲ್ಲುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಂದೂರು

ರಾಜಕಾರಣ ಯಾರ ಮನೆಯ ಆಸ್ತಿ ಅಲ್ಲ, ಅದು ನಿಂತ ನೀರಲ್ಲ. ಸೋಲಿನಿಂದ ಧೃತಿಗೆಡದೆ ಪಕ್ಷ ಸಂಘಟಿಸಿ, ಮುಂದೆ ಒಳ್ಳೆಯ ದಿನಗಳು ಬರಲಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಅವರು ಶನಿವಾರ ಬೈಂದೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಒಂದು ಕಾಲದಲ್ಲಿ ಮಂಗಳೂರು, ಉಡುಪಿ ಜಿಲ್ಲೆಗಳು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದವು. ಇದೀಗ ಕಾಂಗ್ರೆಸ್ ಸಂಕಷ್ಟ ಸ್ಥಿತಿಯಲ್ಲಿದೆ. ನಮ್ಮ ಪಕ್ಷದಲ್ಲಿ ನ್ಯೂನತೆಗಳಿವೆ. ಮೊದಲು ಅವು ಸರಿಯಾಗಬೇಕು. ಚುನಾವಣೆ ಒಳ್ಳೆತನದಿಂದ ನಡೆಯುತ್ತಿಲ್ಲ, ಆದರೆ ಸತ್ಯ ಒಂದು ದಿನ ಗೆದ್ದೆ ಗೆಲ್ಲುತ್ತದೆ ಎಂದು ಹೇಳಿದರು.

ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಯಲ್ಲಿತ್ತು. ಈಗ ಅಲ್ಲಿ ಆರು ಕಾಂಗ್ರೆಸ್ ಸಂಸದರು ಆಯ್ಕೆಯಾಗಿದ್ದಾರೆ. ಕಳೆದ ಬಾರಿ 4.50 ಲಕ್ಷ ಮತಗಳ ಲೀಡ್ ನಿಂದ ಗೆದ್ದಿದ್ದ ಮೋದಿ ಈ ಬಾರಿ ಕೇವಲ 1.45 ಲಕ್ಷದಿಂದ ಗೆದ್ದರು. ಇದರರ್ಥ ದೇಶದಲ್ಲಿ ಕಾಂಗ್ರೆಸ್ ಬಲಿಷ್ಠವಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬಿಜೆಪಿ‌ ಸರ್ಕಾರದ ಬಳಿ ಕಾರ್ಯಕ್ರಮಗಳಿಲ್ಲ. ಕೇವಲ ಪ್ರಚಾರವಷ್ಟೇ ಅವರ ಕೆಲಸ.‌ ರಾಹುಲ್ ಗಾಂಧಿ ಇವತ್ತು ವಿರೋಧ ಪಕ್ಷದ ನಾಯಕರಾಗಿದ್ದಾರೆ. ಇದಕ್ಕೆ ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರವರಗೆ ಭಾರತ್ ಜೋಡೋ ಯಾತ್ರೆ ನಡೆಸಿದ್ದೆ ಕಾರಣ. ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿ ಅವರ ನಾಯಕತ್ವ ರಾಷ್ಟ್ರಕ್ಕೆ ಸಿಗಲಿದೆ ಎಂದರು.

ಮಾಜಿ ಶಾಸಕ ಗೋಪಾಲ ಪೂಜಾರಿ ಕಳೆದ ಬಾರಿ ಗೆದ್ದಿದ್ದರೆ ಅವರೇ ಸಚಿವರಾಗುತ್ತಿದ್ದರು. ಎಲ್ಲರೂ ಮತ್ತೆ ಸಂಘಟನೆ ಮಾಡೋಣ. ಧೈರ್ಯದಿಂದ ಮುನ್ನಡೆಯಬೇಕು. ಮುಂದಿನ ಚುನಾವಣೆಗೆ ಈಗಲೇ ಸಿದ್ಧತೆ ಮಾಡೋಣ ಎಂದರು.

ಈ ವೇಳೆ ಮಾಜಿ ಶಾಸಕ ಗೋಪಾಲ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ್ ಪೂಜಾರಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಮದನ್ ಕುಮಾರ್, ಮುಖಂಡರಾದ ಕಿಶನ್ ಹೆಗ್ಡೆ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.