ಕಾಂಗ್ರೆಸ್‌ನಿಂದ ಸುಳ್ಳಿನ ರಾಜಕೀಯ: ಮಹೇಶ್‌ ಜೈನಿ

| Published : Dec 05 2023, 01:30 AM IST

ಕಾಂಗ್ರೆಸ್‌ನಿಂದ ಸುಳ್ಳಿನ ರಾಜಕೀಯ: ಮಹೇಶ್‌ ಜೈನಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಡವ ಜನಾಂಗದ ಶ್ರೇಯೋಭಿವೃದ್ಧಿಗೆ 10 ಕೋಟಿ ರು. ನೀಡಲಾಗಿದೆ. ಆದರೆ ಸುಳ್ಳು ಮಾಹಿತಿ ನೀಡುವ ಮೂಲಕ ಕಾಂಗ್ರೆಸ್ ಇದನ್ನು ಮರೆಮಾಚುವ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಡವ ಜನಾಂಗದ ಶ್ರೇಯೋಭಿವೃದ್ಧಿಗೆ 10 ಕೋಟಿ ರು. ನೀಡಲಾಗಿದೆ. ಆದರೆ ಸುಳ್ಳು ಮಾಹಿತಿ ನೀಡುವ ಮೂಲಕ ಕಾಂಗ್ರೆಸ್ ಇದನ್ನು ಮರೆಮಾಚುವ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣಾ ಹತ್ತಿರವಾಗಿರುವುದರಿಂದ ಸಂಸದ ಪ್ರತಾಪಸಿಂಹ ಅವರನ್ನು ಜಿಲ್ಲೆಯ ಕಾಂಗ್ರೆಸ್ ನಾಯಕರು ಎಲ್ಲ ಹಂತದಲ್ಲಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಡವ ಸಮುದಾಯದವರ ಸರ್ವತೋಮುಖ ಅಭಿವೃದ್ಧಿಗೆ ಕೊಡವ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಆದೇಶಿಸಿದೆ. ಇದಕ್ಕೆ ಪೂರಕವಾಗಿ ಕೊಡವ ಸಮುದಾಯದವರ ಅಭಿವೃದ್ಧಿಗೆ 10 ಕೋಟಿ ರು. ಅನುದಾನ ನೀಡಿ ಅದಕ್ಕೆ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿ ಆದೇಶಿಸಲಾಗಿದೆ ಎಂದು ತಿಳಿಸಿದರು.ಬಿಜೆಪಿ ಸರ್ಕಾರದಲ್ಲಿ ಕೊಡವರ ಶ್ರೇಯೋಭಿವೃದ್ಧಿಗೆ 10 ಕೋಟಿ ರು. ಬಿಡುಗಡೆ ಮಾಡಿದೆಯೋ ಇಲ್ಲವೋ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಉತ್ತರಿಸುವಂತೆ ಆಗ್ರಹಿಸಿದರು.ಸಂಸದ ಪ್ರತಾಪ ಸಿಂಹ ಅವರು ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈ ಹಿಂದಿನ ಕಾಂಗ್ರೆಸ್ ಲೋಕಸಭಾ ಸದಸ್ಯರನ್ನು ನಾವು ಕಂಡಿದ್ದೇವೆ. ಅವರು ಎಷ್ಟು ಬಾರಿ ಕೊಡಗಿಗೆ ಭೇಟಿ‌ ನೀಡಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ ಎಂದರು.ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜು ಬೊಮ್ಮಾಯಿ ಅವರು ಕೊಡಗು ರಸ್ತೆಗಳ ಅಭಿವೃದ್ಧಿ 100 ಕೋಟಿ ರು. ಘೊಷಣೆ ಮಾಡಿದ್ದಾರೆ. ಮಲೆನಾಡಿನ 5 ಜಿಲ್ಲೆಗಳಲ್ಲಿ 500 ಕಾಲು ಸೇತುವೆಗಳ ನಿರ್ಮಾಣಕ್ಕೆ 250 ಕೋಟಿ ರು. ಘೋಷಣೆ ಮಾಡಲಾಗಿತ್ತು. ಕಾಡಾನೆ ಹಾವಳಿ ನಿಯಂತ್ರಣಕ್ಕೆ 150 ಕೋಟಿ ರು. ಘೋಷಣೆ ಮಾಡಲಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕೊಡಗಿಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ ಯಾಕೆ ಎಂದು ಪ್ರಶ್ನಿಸಿದರು.

ಪ್ರತಾಪ್ ಸಿಂಹ ಅವರ ಪ್ರಯತ್ನ ಫಲವಾಗಿ ಮಡಿಕೇರಿ ಹಾಗೂ ವಿರಾಜಪೇಟೆ ಪ್ರಥಮ ದರ್ಜೆ ಕಾಲೇಜಿಗೆ ತಲಾ 5 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ 63 ಬಿಎಸ್‌ಎನ್‌ಎಲ್ ಟವರ್ ಕಾಮಗಾರಿ ನಡೆಯುತ್ತಿದೆ. ಅನಾವಶ್ಯಕವಾಗಿ ಸಂಸದರನ್ನು ಆರೋಪ ಮಾಡುವ ಬದಲು ನಿಮ್ಮ ಸರ್ಕಾರ ಬಂದು ಆರು ತಿಂಗಳಲ್ಲಿ ಒಂದು ರುಪಾಯಿ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದರು.ದಿಶಾ ಸಮಿತಿ ಯಮುನಾ ಚಂಗಪ್ಪ ಮಾತನಾಡಿ, ಕೊಡಗಿಗೆ ಸಂಸದರು ಆಗಮಿಸುತ್ತಿಲ್ಲ ಎಂದು ಕಾಂಗ್ರೆಸಿಗರು ಆರೋಪಿಸುತ್ತಿದ್ದಾರೆ. ಪ್ರತಿ ಮೂರು ತಿಂಗಳು ನಡೆಯುವ ದಿಶಾ ಸಭೆಗೆ ಆಗಮಿಸುತ್ತಿದ್ದಾರೆ. ಅಲ್ಲದೆ ಹಲವು ಅಭಿವೃದ್ಧಿ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸುಳ್ಳು ಹೇಳುವ ಮೂಲಕ ರಾಜಕಾರಣ ಮಾಡುತ್ತಿದ್ದಾರೆ ಎಂದರು.

ಬಿಜೆಪಿ ಸರ್ಕಾರದಲ್ಲಿ ಪ್ರತಿ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ ಎಂದು ಆರೋಪ ಮಾಡಿದ್ದರು. ಆದರೆ ಈಗ ಕಾಂಗ್ರೆಸ್ ಮಾಡುತ್ತಿರುವುದು ಏನು? ಅಧಿಕಾರ ಬಂದ ನಂತರ ಹಲವು ವಸ್ತುಗಳ ದರಗಳು ಏರಿಕೆಯಾಗಿದೆ. ಒಂದು ಕಡೆ ಗ್ಯಾರಂಟಿಯನ್ನು ಜಾರಿಗೆ ತಂದು ಮತ್ತೊಂದು ಕಡೆಯಲ್ಲಿ ಬೆಲೆ ಏರಿಕೆ ಮಾಡಿದ್ದಾರೆಂದು ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ನಗರ ಬಿಜೆಪಿ ಅಧ್ಯಕ್ಷ ಮುನು ಮಂಜುನಾಥ್, ಅರುಣ್ ಹಾಜರಿದ್ದರು.