ತಿಕೋಟಾದಲ್ಲಿ ನಡೆದ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಸಣ್ಣಪುಟ್ಟ ಸಮಸ್ಯೆಗಳಾಗಿದ್ದು, ಅದನ್ನೇ ದೊಡ್ಡದು ಮಾಡಿ ವಿರೋಧ ಪಕ್ಷದವರು ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರ ರಾಜೀನಾಮೆಗೆ ಆಗ್ರಹಿಸುತ್ತಿರುವುದು ಖಂಡನೀಯವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ತಿಕೋಟಾದಲ್ಲಿ ನಡೆದ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಸಣ್ಣಪುಟ್ಟ ಸಮಸ್ಯೆಗಳಾಗಿದ್ದು, ಅದನ್ನೇ ದೊಡ್ಡದು ಮಾಡಿ ವಿರೋಧ ಪಕ್ಷದವರು ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರ ರಾಜೀನಾಮೆಗೆ ಆಗ್ರಹಿಸುತ್ತಿರುವುದು ಖಂಡನೀಯವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಕಿಡಿಕಾರಿದರು.

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾನುವಾರ ತಿಕೋಟಾದ ಶಾರದಾಂಬ ಕಾಲೇಜಿನಲ್ಲಿ ನಡೆದ ಪರೀಕ್ಷೆಯ ವೇಳೆ ಪ್ರಶ್ನೆಪತ್ರಿಕೆ ಹಾಗೂ ಒಎಂಆರ್‌ ಪತ್ರಿಕೆಯ ನಂಬರ್‌ಗಳು ಹೊಂದಾಣಿಕೆಯಾಗಿಲ್ಲವೆಂದು ಹಾಗೂ ಪರೀಕ್ಷೆಯನ್ನು ತಡವಾಗಿ ಆರಂಭಿಸಲಾಗಿದೆ ಎಂದು ಅಭ್ಯರ್ಥಿಗಳು ಪ್ರತಿಭಟಿಸಿದ್ದರು. ಅದು ಆಡಳಿತಾತ್ಮಕ ವಿಚಾರವಾಗಿದ್ದರಿಂದ ಜಿಲ್ಲಾಡಳಿತ ಅದನ್ನು ನಿರ್ವಹಿಸಿ ಪರೀಕ್ಷೆ ಬರೆಯುವಂತೆ ಹೆಚ್ಚಿನ ಕಾಲಾವಕಾಶ ನೀಡಿ ಸಮಸ್ಯೆ ಬಗೆಹರಿಸಿದ್ದಾರೆ. ಆದರೆ ಅದನ್ನೇ ಮುಂದಿಟ್ಟುಕೊಂಡು ವೈಯಕ್ತಿಕ ಹೊಣೆಗಾರಿಕೆ ಹೊತ್ತು ಉಸ್ತುವಾರಿ ಸಚಿವರು, ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿರುವುದು ಸರಿಯಲ್ಲ. ಈ ಸಣ್ಣ ವಿಚಾರವನ್ನು ದೊಡ್ಡದು ಮಾಡಿ ರಾಜೀನಾಮೆ ಕೇಳುವುದರ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ. ಪರೀಕ್ಷೆಯ ದಿನ ಸ್ಥಳಕ್ಕೆ ತೆರಳಿದ ಬಿಜೆಪಿ ನಾಯಕರು ಅಲ್ಲಿನ ಸಮಸ್ಯೆ ಬಗೆಹರಿಸುವ ಬದಲಾಗಿ ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿ, ರಾಜಕೀಯಗೊಳಿಸಲು ಹೋಗಿದ್ದಾರೆ. ಪೊಲೀಸ್ ಪರೀಕ್ಷೆಯ ನೆಪವಿಟ್ಟುಕೊಂಡು ವಿನಾಕಾರಣ ರಾಜಕೀಯ ಬೆರೆಸಲಾಗುತ್ತಿದೆ ಎಂದು ಟೀಕಿಸಿದರು.

ಸಚಿವ ಸ್ಥಾನದ ವಿಚಾರವಾಗಿ ಮಾತನಾಡಿ, ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಯಾರಿಗೂ ಅವಕಾಶ ಸಿಕ್ಕಿಲ್ಲ. ಪಕ್ಷ ಎಲ್ಲ ಸಮಾಜಗಳಿಗೆ ಅವಕಾಶ ಕೊಟ್ಟಿದ್ದರಿಂದ ನಮ್ಮ ಜಿಲ್ಲೆಗೆ ಇನ್ನೊಂದು ಅವಕಾಶ ಸಿಕ್ಕಿಲ್ಲ. ಇಂಡಿ ಶಾಸಕರು ರಾಜೀನಾಮೆ ನೀಡಿದ್ದು, ಇಂಡಿ ಕ್ಷೇತ್ರಕ್ಕೆ ಇದುವರೆಗೂ ಮಂತ್ರಿಸ್ಥಾನ ಸಿಕ್ಕಿಲ್ಲ. ಯಶವಂತರಾಯಗೌಡ ಪಾಟೀಲರು ಮೂರು ಬಾರಿ ಶಾಸಕರಾಗಿದ್ದು, ಅವರಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಕಟ್ಟಾ ಕಾಂಗ್ರೆಸ್ಸಿಗರಾಗಿರುವ ಅವರು ಆವೇಶದಲ್ಲಿ ರಾಜೀನಾಮೆ ನೀಡಿರುವುದು ಸರಿಯಲ್ಲ. ಪಕ್ಷ ದೊಡ್ಡದು ಎಂಬುದನ್ನರಿತು, ರಾಜೀನಾಮೆ ವಾಪಸ್‌ ಪಡೆಯಬೇಕು ಎಂದು ಮನವಿ ಮಾಡಿದ ಅವರು, ಮುದ್ದೇಬಿಹಾಳ ಶಾಸಕರಿಗೂ ಮಂತ್ರಿಮಂಡಲದಲ್ಲಿ ಅವಕಾಶ ಸಿಗುತ್ತದೆ ಎಂಬ ನಿರೀಕ್ಷೆಯಿತ್ತು, ಆದರೆ ಸಿಗದಿದ್ದರಿಂದ ಅವರೂ ಅಸಮಾಧಾನಗೊಂಡಿದ್ದಾರೆ. ನಮ್ಮ ಪಕ್ಷದ ನಾಯಕರು, ಹೈಕಮಾಂಡ್ ಅವರನ್ನು ಕರೆದು ಮನವೊಲಿಸಿ, ಎಲ್ಲವನ್ನೂ ಸರಿಪಡಿಸುತ್ತಾರೆ. ಇದರಲ್ಲಿ ಉಸ್ತುವಾರಿ ಸಚಿವರ ಕೈವಾಡವಿಲ್ಲ, ಇದು ರಾಷ್ಟ್ರೀಯ ನಾಯಕರು ತೆಗೆದುಕೊಂಡ ನಿರ್ಧಾರವಾಗಿದೆ. ಸಣ್ಣಪುಟ್ಟ ಮನಸ್ತಾಪಗಳು ಇರುತ್ತವೆ, ಅವೆಲ್ಲವನ್ನೂ ಸರಿಪಡಿಸಿಕೊಂಡು ಜಿಲ್ಲೆಯ ಎಲ್ಲ ನಾಯಕರು ಒಗ್ಗಟ್ಟಾಗಿ 2028ಕ್ಕೆ ಚುನಾವಣೆ ಎದುರಿಸಲಿದ್ದಾರೆ. ತಮ್ಮ ಸಮಾಜದ ಲಕ್ಷ್ಮಣ ಸವದಿ ಅವರಿಗೆ ಸಂಪುಟದಲ್ಲಿ ಅವಕಾಶ ಕೊಟ್ಟಿರುವ ಕಾಂಗ್ರೆಸ್ ನಾಯಕರು, ಹೈಕಮಾಂಡ್ ಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಡಿಎ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಮುಖಂಡ ಅಬ್ದುಲಹಮೀದ ಮುಶರೀಫ, ಜಿಲ್ಲಾ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಸಂತ ಹೊನಮೊಡೆ ಇದ್ದರು.