ಸಾರಾಂಶ
ಮಾಧ್ಯಮ ಕ್ಷೇತ್ರವಿಂದು ತೀರಾ ಕಲುಷಿತಗೊಂಡಿದೆ. ಇದನ್ನು ಹಿಂದಿನಂತೆ ಸರಿದಾರಿಗೆ ತರುವುದು ಕಷ್ಟಸಾಧ್ಯ. ಸಂಕೀರ್ಣತೆಯಲ್ಲಿ ಹುದುಗಿರುವ ನಮಗೆ ಜಗತ್ತಿನ ಎಲ್ಲ ಘಟನೆಗಳೂ ಪರಿಣಾಮ ಬೀರುತ್ತವೆಯಾದರೂ, ನಮ್ಮ ಪರಿಧಿಯಲ್ಲಿ ನಿಷ್ಠೆಗೆ ದಕ್ಕೆ ಬಾರದಂತೆ ಕಾರ್ಯ ನಿರ್ವಹಿಸಬೇಕು.
ಯಲ್ಲಾಪುರ:
ಮಾಧ್ಯಮ ಕ್ಷೇತ್ರವಿಂದು ತೀರಾ ಕಲುಷಿತಗೊಂಡಿದೆ. ಇದನ್ನು ಹಿಂದಿನಂತೆ ಸರಿದಾರಿಗೆ ತರುವುದು ಕಷ್ಟಸಾಧ್ಯ. ಸಂಕೀರ್ಣತೆಯಲ್ಲಿ ಹುದುಗಿರುವ ನಮಗೆ ಜಗತ್ತಿನ ಎಲ್ಲ ಘಟನೆಗಳೂ ಪರಿಣಾಮ ಬೀರುತ್ತವೆಯಾದರೂ, ನಮ್ಮ ಪರಿಧಿಯಲ್ಲಿ ನಿಷ್ಠೆಗೆ ದಕ್ಕೆ ಬಾರದಂತೆ ಕಾರ್ಯ ನಿರ್ವಹಿಸಬೇಕು ಎಂದು ಪ್ರಾಚಾರ್ಯ ನಾಗರಾಜ ಇಳೇಗುಂಡಿ ಹೇಳಿದರು.ತಾಲೂಕಿನ ತೇಲಂಗಾರಿನ ಮೈತ್ರಿಕಲಾ ಬಳಗ ಹಮ್ಮಿಕೊಂಡಿದ್ದ ೩ ದಿನಗಳ ಮೈತ್ರಿ ಬೆಳ್ಳಿಹಬ್ಬದ ಸಮಾರೋಪದಲ್ಲಿ ಕನ್ನಡ ಸುದ್ದಿ ಮಾಧ್ಯಮಗಳು ಮತ್ತು ಸವಾಲುಗಳು ಎಂಬ ವಿಷಯದ ಕುರಿತ ವೈಚಾರಿಕ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಾಧ್ಯಮ ಕ್ಷೇತ್ರದ ವರದಿಗಾರಿಕೆಗೆ ಹಲವು ರೀತಿಯ ಹೊಣೆಗಾರಿಕೆ ಇರುತ್ತದೆ. ಅದರಲ್ಲೂ ಇಂದು ಪತ್ರಿಕೆ, ದೂರದರ್ಶನ, ಡಿಜಿಟಲ್ ಮಾಧ್ಯಮ ಇವುಗಳಲ್ಲಿ ಕಾರ್ಯ ನಿರ್ವಹಿಸುವ ಬದಲಾದ ಸನ್ನಿವೇಶ ಬಂದೊದಗಿದೆ. ಮಾಧ್ಯಮದಲ್ಲಿ ವರದಿಗಾರನ ಕೆಲಸ ಒಂದು ರೀತಿಯಾದರೆ, ಸಂಪಾದಕ ಮಂಡಳಿಯಲ್ಲಿ ಕಾರ್ಯನಿರ್ವಹಿಸುವ ವಿಧಾನವೇ ಬೇರೆ. ಈ ಎಲ್ಲ ವಿಭಾಗಗಳಲ್ಲಿಯೂ ಪ್ರತಿ ಹಂತದಲ್ಲಿ ಕೆಲಸ ಮಾಡುವಾಗ ಸವಾಲು, ಒತ್ತಡ ಇದ್ದೇ ಇದೆ. ಆದರೆ, ಗ್ರಾಮೀಣ ವರದಿಗಾರಿಕೆಗೆ ಒತ್ತಡ ತುಸು ಕಡಿಮೆ ಎಂದ ಅವರು, ಮಾಧ್ಯಮ ಕ್ಷೇತ್ರ ಅನಿವಾರ್ಯವಾಗಿ ಜಾಹಿರಾತು ಅವಲಂಬಿಸಲೇಬೇಕು. ಅಲ್ಲದೇ ಉದ್ಯಮ ಕ್ಷೇತ್ರ, ರಾಜಕೀಯ ಕ್ಷೇತ್ರದ ಸಹಕಾರವೂ ತೀರಾ ಅಗತ್ಯ. ಈ ನಡುವೆ ನಮ್ಮತನವನ್ನು ಮುನ್ನಡೆಸಿಕೊಂಡು ಹೋಗಬೇಕು ಎಂದರು.ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಚಾಲಕ ಶಂಕರ ಭಟ್ಟ ತಾರೀಮಕ್ಕಿ ಮಾತನಾಡಿ, ಎಲ್ಲ ಕ್ಷೇತ್ರಗಳೂ ನೈತಿಕತೆ ಕಳೆದುಕೊಂಡ ಇಂದಿನ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರವೂ ಹೊರತಾಗಿಲ್ಲ. ಕಳೆದ ೨೫ ವರ್ಷಗಳ ಹಿಂದಿನ ಸಂದರ್ಭವನ್ನು ಮೆಲುಕು ಹಾಕಿದರೆ, ನಾವು ಮಾಡಿದ ವರದಿಗೆ ಅನೇಕರು ಅಮಾನತುಗೊಂಡಿದ್ದಾರೆ. ಸರ್ಕಾರ, ಜನಪ್ರತಿನಿಧಿಗಳು ವರದಿ ವೀಕ್ಷಿಸಿ, ತಲೆಬಾಗುತ್ತಿದ್ದರು. ಆದರಿಂದು ಏನೇ ಬರೆದರೂ ವ್ಯರ್ಥವಾಗುತ್ತಿದೆ. ಅಂದರೆ ಎಲ್ಲ ವ್ಯವಸ್ಥೆಗಳು ಎಷ್ಟೊಂದು ಹದಗೆಟ್ಟಿವೆ ಎಂದು ವಿಷಾದವೆನಿಸುತ್ತದೆ ಎಂದು ಹೇಳಿದರು.ನಿವೃತ್ತ ಪ್ರಾಚಾರ್ಯ ಬೀರಣ್ಣ ನಾಯಕ ಮೊಗಟಾ ಮಾತನಾಡಿ, ಪತ್ರಕರ್ತರಾದವರು ಜನರಿಂದ ಬೈಸಿಕೊಳ್ಳುತ್ತಾರೆಂದರೆ ಆತ ಉತ್ತಮ ವರದಿಗಾರ ಎನ್ನಬಹುದು. ಆತ ತನ್ನ ಕಾರ್ಯ ನಿರ್ವಹಿಸುವಲ್ಲಿ ತಾಳ್ಮೆ, ಧೈರ್ಯ, ಬದ್ಧತೆ ಉಳಿಸಿಕೊಳ್ಳದಿದ್ದರೆ, ಉತ್ತಮ ವರದಿಗಾರನಾಗಲು ಸಾಧ್ಯವಿಲ್ಲ ಎಂದರು.ವರದಿಗಾರರಾದ ಕೆ.ಎಸ್. ಭಟ್ಟ, ನರಸಿಂಹ ಸಾತೊಡ್ಡಿ, ಸುಬ್ರಾಯ ಬಿದ್ರೇಮನೆ, ಜಿ.ಎನ್. ಭಟ್ಟ ತಟ್ಟೀಗದ್ದೆ, ವಿ.ಜಿ. ಗಾಂವ್ಕರ, ದತ್ತಾತ್ರೇಯ ಕಣ್ಣೀಪಾಲ, ಶ್ರೀಧರ ಅಣಲಗಾರ, ಸುಮಾ ಕಂಚೀಪಾಲ, ಕೇಬಲ್ ನಾಗೇಶ ಮಾತನಾಡಿದರು.ಪ್ರದೀಪ ಗುಡೇಪಾಲ ಸ್ವಾಗತಿಸಿದರು. ಸುಮಾ ಕಂಚೀಪಾಲ ನಿರ್ವಹಿಸಿದರು. ಗೋಪಾಲ ಭಟ್ಟ ತೋಟ್ಮನೆ ವಂದಿಸಿದರು.