ಕಾಂಗ್ರೆಸ್ ಕಚೇರಿಯಲ್ಲಿ ಹುತಾತ್ಮರ ದಿನ ಆಚರಣೆ

| Published : Jan 31 2024, 02:15 AM IST

ಸಾರಾಂಶ

ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಮೂವರು ಮಹಾನ್ ನಾಯಕರ ಜೀವನ, ಸಾಧನೆ ಮತ್ತು ತತ್ವಾದರ್ಶಗಳನ್ನು ನೆನದು ಹುತಾತ್ಮರಿಗೆ ಗೌರವ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ, ಇಂದಿರಾ ಗಾಂಧಿ ಹಾಗೂ ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡರ ಅಧ್ಯಕ್ಷತೆಯಲ್ಲಿ ಹುತ್ಮಾತರ ದಿನವಾಗಿ ಆಚರಿಸಲಾಯಿತು.

ರಾಷ್ಟ್ರಪಿತ ಮಹಾತ್ಮಗಾಂಧಿ, ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್‌ ಗಾಂಧಿಯವರ ಭಾವಚಿತ್ರಗಳಿಗೆ ಪುಪ್ಪನಮನ ಸಲ್ಲಿಸುವ ಮೂಲಕ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಮೂವರು ಮಹಾನ್ ನಾಯಕರ ಜೀವನ, ಸಾಧನೆ ಮತ್ತು ತತ್ವಾದರ್ಶಗಳನ್ನು ನೆನದು ಹುತಾತ್ಮರಿಗೆ ಗೌರವ ಸಲ್ಲಿಸಿದರು.

ಮಾಜಿ ಟೂಡಾ ಅಧ್ಯಕ್ಷ ರೆಡ್ಡಿ ಚಿನ್ನಯಲ್ಲಪ್ಪ ಮಾತನಾಡಿ, ಸ್ವಾತಂತ್ರವೆಂಬುದು ಭಾರತಕ್ಕೆ ಸುಲಭವಾಗಿ ಸಿಗಲಿಲ್ಲ. ಲಕ್ಷಾಂತರ ಜನರ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಅಂದು ಬ್ರಿಟಷರ ಜೊತೆ ಶಾಮೀಲಾಗಿ ಸ್ವಾತಂತ್ರ ಹೋರಾಟದ ದಿಕ್ಕು ತಪ್ಪಿಸಲು ಹೊರಟವರು, ಇಂದು ಅಧಿಕಾರದ ಗದ್ದುಗೆ ಹಿಡಿದು, ದೇಶದ ಜನರನ್ನು ಧರ್ಮ, ದೇವರ ಹೆಸರಿನಲ್ಲಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸರಿಯಾಗಿ ಕೌಂಟರ್ ಕೊಡುವಂತೆ ಕಾಂಗ್ರೆಸ್ ಕಾರ್ಯಕರ್ತರು ಸಿದ್ಧವಾಗಬೇಕಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಒಗ್ಗಟ್ಟು ಕಾಯ್ದುಕೊಂಡಂತೆ, ಲೋಕಸಭಾ ಚುನಾವಣೆಯಲ್ಲಿಯೂ ಒಗ್ಗೂಡಿದರೆ ರಾಜ್ಯದ ೨೮ ಕ್ಷೇತ್ರಗಳಲ್ಲಿ ೨೦ರಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಖಚಿತ ಎಂದರು.

ತುಮಕೂರು ನಗರಸಭೆಯ ಮಾಜಿ ಸದಸ್ಯ ನರಸೀಯಪ್ಪ ಮಾತನಾಡಿ, ಕಾಯಕವನ್ನೇ ಜಾತಿಯನ್ನಾಗಿಸಿದ ವರ್ಣಾಶ್ರಮ ವ್ಯವಸ್ಥೆಯಿಂದ ಭಾರತ ಇಂದು ನಲುಗಿ ಹೋಗುತ್ತಿದ್ದು,ಇದರಿಂದ ಹೊರಬೇಕೆಂದರೆ ಅಂಬೇಡ್ಕರ್ ರವರ ಸಮಪಾಲು, ಸಮಬಾಳು ಎಂಬ ಸಂವಿಧಾನವೊಂದೇ ದಾರಿಯಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಚಿಂತಿಸಬೇಕಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಒಂದು ಸಿದ್ದಾಂತವಿದೆ. ಅದು ಎಂದಿಗೂ ಕೂಡ ತನ್ನ ಜಾತ್ಯಾತೀತ ತತ್ವದಲ್ಲಿ ರಾಜೀ ಮಾಡಿಕೊಳ್ಳದು. ಹಾಗಾಗಿ ಶ್ರೀಲಂಕಾಕ್ಕೆ ಶಾಂತಿ ಪಾಲನಾ ಪಡೆಯನ್ನು ಕಳುಹಿಸಿ ಏಷಿಯಾದಲ್ಲಿ ಶಾಂತಿ ನೆಲೆಸುವಂತೆ ಮಾಡಿದ ರಾಜೀವಗಾಂಧಿ ಎಲ್.ಟಿಟಿಇಗಳ ಗುಂಡಿಗೆ ಬಲಿಯಾಗಬೇಕಾಯಿತು. ಖಲಿಸ್ಥಾನಗಳ ಅಟ್ಟಹಾಸಕ್ಕೆ ಅಸ್ಪದ ಕೊಡದೆ, ಅಮೃತ್‌ಸರ್‌ನ ಗೋಲ್ಡನ್ ಟೆಂಪಲ್‌ನಲ್ಲಿ ಅಡಗಿದ್ದ ಉಗ್ರರನ್ನು ಮಟ್ಟ ಹಾಕಿದ ಕಾರಣಕ್ಕೆ ತನ್ನ ಅಂಗರಕ್ಷಕರಿಂದಲೇ ಇಂದಿರಾಗಾಂಧಿ ಮರಣ ಹೊಂದಿದರು. ದೇಶದ ಸ್ವಾತಂತ್ರ ಹೋರಾಟದ ನಾಯಕತ್ವ ತೆಗೆದುಕೊಂಡು ಬ್ರಿಟಿಷರ ದಾಸ್ಯದಿಂದ ಭಾರತೀಯರನ್ನು ಬಿಡಿಸಿದ ಮಹಾತ್ಮಗಾಂಧಿ ಗೋಡ್ಸೆ ಬಂದೂಕಿಗೆ ಬಲಿಯಾದರು. ಕಾಂಗ್ರೆಸ್‌ಗೆ ತನ್ನದೇ ಆದ ಇತಿಹಾಸ, ಪರಂಪರೆಯಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆಂಚಮಾರಯ್ಯ, ಅಲ್ಪಸಂಖ್ಯಾತರ ಘಟಕದ ಸಂಜೀವ ಕುಮಾರ್ ಮಾತನಾಡಿದರು. ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ವಹಿಸಿದ್ದರು.

ಮುಖಂಡರಾದ ರೇವಣ್ಣ ಸಿದ್ದಯ್ಯ,ನಟರಾಜ ಶೆಟ್ಟಿ,ಷಣ್ಮುಖಪ್ಪ, ಸುಜಾತ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಫಯಾಜ್, ನರಸಿಂಹಮೂರ್ತಿ,ಕೆಂಪಣ್ಣ, ಸುಲ್ತಾನ್ ಮೊಹಮದ್,ಶಿವಾಜಿ, ಕೈದಾಳ ರಮೇಶ್, ಅಸ್ಲಾಂಪಾಷ, ನ್ಯಾತೇಗೌಡ, ಕವಿತಾ, ಮಂಗಳ, ಕುತ್ಬುದ್ದೀನ್,ರಘು,ಭಾಗ್ಯ ವಸುಂದರ ಮತ್ತಿತರರಿದ್ದರು.