ಬೀಡುಬಿಟ್ಟಿರುವ ಅಧಿಕಾರಿ,ಸಿಬ್ಬಂದಿಯ ಎತ್ತಂಗಡಿ: ಡೀಸಿ

| Published : Jan 31 2024, 02:15 AM IST

ಸಾರಾಂಶ

ನಾಗರಿಕರು ಕೆಲವು ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಹಲವಾರು ವರ್ಷಗಳಿಂದ ಇಲ್ಲೇ ಬೀಡು ಬಿಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಅವರು ಸ್ಥಳೀಯರೇ ಆಗಿರುವುದರಿಂದ ಸಾರ್ವಜನಿಕರಿಗೆ ಸೂಕ್ತ ಸೇವೆ ನೀಡುತ್ತಿಲ್ಲ ಎಂದೂ ಕೇಳಿಬಂದಿತು. ಹಾಗಾಗಿ ಹಲವು ವರ್ಷಗಳಿಂದ ಕಚೇರಿಗಳಲ್ಲಿರುವವರ ಕುರಿತು ಮಾಹಿತಿ ಸಂಗ್ರಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಕನ್ನಡಪ್ರಭವಾರ್ತೆ ತುರುವೇಕೆರೆ

ತಾಲೂಕು ಕಚೇರಿಗಳು ಸೇರಿ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಹಲವು ವರ್ಷಗಳಿಂದ ಬೀಡುಬಿಟ್ಟಿರುವ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಎತ್ತಂಗಡಿ ಮಾಡಿ ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ಸಲ್ಲಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹೇಳಿದರು.

ತಾಲೂಕಿನ ಹಲವು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದ ಅವರು, ತಾವು ತಾಲೂಕಿನ ಮಾಯಸಂದ್ರದ ನಾಡಕಚೇರಿಗೆ ಮತ್ತು ತಾಲೂಕಿನ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ನಾಗರಿಕರು ಕೆಲವು ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಹಲವಾರು ವರ್ಷಗಳಿಂದ ಇಲ್ಲೇ ಬೀಡು ಬಿಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಅವರು ಸ್ಥಳೀಯರೇ ಆಗಿರುವುದರಿಂದ ಸಾರ್ವಜನಿಕರಿಗೆ ಸೂಕ್ತ ಸೇವೆ ನೀಡುತ್ತಿಲ್ಲ ಎಂದೂ ಕೇಳಿಬಂದಿತು. ಹಾಗಾಗಿ ಹಲವು ವರ್ಷಗಳಿಂದ ಕಚೇರಿಗಳಲ್ಲಿರುವವರ ಕುರಿತು ಮಾಹಿತಿ ಸಂಗ್ರಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಡೀಸಿ ಶುಭ ಕಲ್ಯಾಣ್ ಹೇಳಿದರು.

ತಾವು ಜಿಲ್ಲೆಯಾದ್ಯಂತ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡುತ್ತಿರುವುದಾಗಿ ಹೇಳಿದ ಅವರು, ಸಾರ್ವಜನಿಕರ ದೂರುಗಳಿಗೆ ಅಧಿಕಾರಿಗಳು ಸಕಾಲದಲ್ಲಿ ದೊರೆಯುತ್ತಿಲ್ಲ.ತಾಲೂಕು ಮಟ್ಟದಲ್ಲಿ ಕೆಲಸ, ಕಾರ್ಯಗಳು ಆಗುತ್ತಿಲ್ಲವೆಂದು ದೂರಿ ತಮ್ಮನ್ನು ಭೇಟಿ ಮಾಡಲು ಜನರು ಬರುತ್ತಿದ್ದಾರೆ. ಇದನ್ನು ತಪ್ಪಿಸಲು ತಾವು ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ, ಜನರಿಗೆ ನೆರವಾಗುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜನರ ಸಮಸ್ಯೆಗೆ ಸ್ಪಂದಿಸದಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಎಚ್ಚರಿಸಿದರು.

ನಂತರ ಅವರು ತಾಲೂಕು ಕಚೇರಿಗೆ ಬಂದಿದ್ದ ಸಾರ್ವಜನಿಕರ ಅಹವಾಲು ಆಲಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಿಂದಲೇ ತಮಗೆ ದಾಖಲೆ ಕೊಡಲು ಮೀನಾಮೇಷ ಎಣಿಸುತ್ತಿದ್ದಾರೆಂದು ಅರಳೀಕೆರೆ ಗ್ರಾಮದ ವ್ಯಕ್ತಿ ಜಿಲ್ಲಾಧಿಕಾರಿಗಳ ಬಳಿ ಅಳಲು ತೋಡಿಕೊಂಡರು. ಕೂಡಲೇ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸಂಬಂಧಿಸಿದ ವ್ಯಕ್ತಿಗೆ ದಾಖಲೆ ನೀಡುವಂತೆ ಸೂಚಿಸಿದರು.

ತಾಲೂಕು ಕಚೇರಿಯಲ್ಲಿನ ಅಭಿಲೇಕಾಲಯ ಶಾಖೆ, ಆಹಾರ ಶಾಖೆ, ಸರ್ವೇ ಇಲಾಖೆ, ಸಕಾಲ ಶಾಖೆ, ಚುನಾವಣಾ ಶಾಖೆ ಹಾಗು ಭೂಮಿಶಾಖೆಗೆ ಭೇಟಿ ನೀಡಿ ಪಹಣಿ, ಪೌತಿಖಾತೆ, ಎಜಿಎಸ್‌ಕೆ ಅರ್ಜಿಗಳು, ವೃದ್ದಾಪ್ಯ ವೇತನ, ವಿಧವಾ ವೇತನ ಅರ್ಜಿಗಳನ್ನು ಪರಿಶೀಲನೆ ನಡೆಸಿದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ತಿಪಟೂರು ಉಪವಿಭಾಗಾಧಿಕಾರಿ ಬಿ.ಕೆ.ಸಪ್ತಶ್ರೀ, ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ಗ್ರೇಟ್-೨ ತಹಶೀಲ್ದಾರ್ ಬಿ.ಸಿ.ಸುಮತಿ, ಶಿರಸ್ಥೆದಾರ್ ಡಿ.ಆರ್.ಸುನಿಲ್ ಕುಮಾರ್, ಕಸಬಾ ಕಂದಾಯ ನಿರೀಕ್ಷಕರಾದ ಎ.ಬಿ.ಶಿವಕುಮಾರ್ ಸ್ವಾಮಿ, ಅಣ್ಣಪ್ಪ, ಸಿಬ್ಬಂದಿ ಗಂಗಾಧರ್ ಇನ್ನಿತರರು ಇದ್ದರು.