ಸಾರಾಂಶ
ಶಿವಕುಮಾರ ಕುಷ್ಟಗಿ
ಗದಗ: ಗದಗ -ಬೆಟಗೇರಿ ನಗರದ ಹೃದಯ ಭಾಗದಲ್ಲಿ ಇರುವ ಪ್ರಮುಖ ಅಂತರ್ಜಲ ಮೂಲವಾಗಿರುವ, ವಿಶ್ವದ ಅತೀ ಎತ್ತರದ ಬಸವೇಶ್ವರ ಮೂರ್ತಿ ನಿರ್ಮಾಣವಾಗಿ ಪ್ರವಾಸಿಗರನ್ನು ಕೈ ಬೀಸಿ ಕೆರೆಯುತ್ತಿರುವ ಭೀಷ್ಮ ಕೆರೆಯಲ್ಲಿನ ನೀರು ಈಗ ತ್ಯಾಜ್ಯ ನೀರಿನಿಂದಾಗಿ ಮಲೀನವಾಗುತ್ತಿದೆ.ನಗರದ ಹೊಸ ಬಸ್ ನಿಲ್ದಾಣಕ್ಕೆ ತೆರಳುವ ಮುಖ್ಯ ರಸ್ತೆಯ ಅಡಿಯಿಂದ ಬರುವ ಚರಂಡಿ ನೀರು ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಈ ಭೀಷ್ಮಕೆರೆಯ ಒಡಲನ್ನು ಸೇರುತ್ತಿದೆ. ಆದರೆ ಕಳೆದ ಸಾಲಿನಲ್ಲಿ ತೀವ್ರ ಮಳೆ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಕೆರೆಯ ನೀರು ತೀರಾ ಕಡಿಮೆಯಾದ ಹಿನ್ನೆಲೆಯಲ್ಲಿ ಈ ಕೊಳಚೆ ಬೆಳಕಿಗೆ ಬಂದಿದ್ದು, ಕೆರೆಯ ನೀರೆಲ್ಲಾ ನಿಧಾನವಾಗಿ ಹಸಿರು ಬಣ್ಣಕ್ಕೆ ತಿರುಗುತ್ತಿದೆ.
ಫೆಬ್ರವರಿ 20 ರಂದೇ ವರದಿ: ಭೀಷ್ಮ ಕೆರೆಯಲ್ಲಿನ ನೀರಿಗೆ ಮಲೀನ ನೀರು ಸೇರುತ್ತಿದ್ದು, ಇದರಿಂದಾಗಿ ಜಲಚರಗಳಿಗೆ, ಪ್ರಾಣಿ, ಪಕ್ಷಿಗಳಿಗೆ ಮತ್ತು ಅಂತರ್ಜಲಕ್ಕೆ ಅಪಾಯ ಆಗುವ ಸಾಧ್ಯತೆ ಅರಿತು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಕರ್ನಾಟಕ ಪಶು ವೈದ್ಯಕೀಯ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ಬೀದರ ಹಾಗೂ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರ ವಿಜಯಪುರಕ್ಕೆ ನೀರಿನ ಮಾದರಿಗಳನ್ನು ಸಂಗ್ರಹಿಸಿ ರವಾನಿಸಿದ್ದರು. ಪ್ರಯೋಗಾಲಯದ ವರದಿ ನಗರಸಭೆ ಮತ್ತು ಜಿಲ್ಲಾಡಳಿತ, ಮೀನುಗಾರಿಕಾ ಇಲಾಖೆಗೆ ಕಳೆದ ಫೆಬ್ರವರಿ 20 ರಂದೇ ತಲುಪಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.ವರದಿಯಲ್ಲೇನಿದೆ ?: ವರದಿಯಲ್ಲಿ ಸಧ್ಯ ಭೀಷ್ಮ ಕೆರೆಯಲ್ಲಿ ಸಂಗ್ರಹವಿರುವ ನೀರಿನಲ್ಲಿ ಆಮ್ಲಜನಕ ಮತ್ತು ಅಮೋನಿಯಾ ಪ್ರಮಾಣ ಕಡಿಮೆಯಾಗಿದೆ. ಇದರಿಂದಾಗಿ ಕೆರೆ ನೀರು ವಿಷಕಾರಿ ಆಗುವ ಸಾಧ್ಯತೆ ಇದೆ. ಇದರಿಂದಾಗಿ ಕೆರೆಯಲ್ಲಿರುವ ಜಲಚರಗಳಿಗೆ ತೊಂದರೆ ಆಗುತ್ತದೆ ಎಂದು ಉಲ್ಲೇಖಿಸಿದೆ.
ನೀರಿನಲ್ಲಿ ಕರಗಿದ ಆಮ್ಲಜನಕ ಪ್ರಮಾಣ ಪ್ರತಿ ಲೀಟರಿಗೆ 5-8 ಮಿ. ಗ್ರಾಂ ಇರಬೇಕು, ಆದರೆ ಇರೋದು ಮಾತ್ರ 4.2 ಮಿ. ಗ್ರಾಂ. ಮಾತ್ರ. ಇನ್ನು ಅಮೋನಿಯಾ (NH3) ಪ್ರತಿ ಲೀಟರಿಗೆ 0.40 ಮಿ. ಗ್ರಾಂ ಇರಬೇಕು. ಅದು 0.30 ಮಿ. ಗ್ರಾಂ ಮಾತ್ರ. ಕೆರೆಗೆ ಬರುವ ಕಲುಷಿತ ನೀರನ್ನು ತಕ್ಷಣವೇ ತಡೆಯಬೇಕು. ಇಲ್ಲವಾದಲ್ಲಿ ಕೆರೆಯಲ್ಲಿನ ಜಲಚರ ಪ್ರಾಣಿಗಳಿಗೆ ಹಾಗೂ ಆ ನೀರನ್ನು ಕುಡಿಯುವ ಇನ್ನಿತರ ಪ್ರಾಣಿಗಳಿಗೂ ಅಪಾಯವಿದೆ ಎಂದು ತಿಳಿಸಲಾಗಿದೆ.ಇದೇ ಪತ್ರವನ್ನು ಆಧರಿಸಿ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೆಶಕರು ನಗರಸಭೆ ಆಯುಕ್ತರಿಗೆ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ.
ಭೀಷ್ಮಕೆರೆಗೆ ಈ ಹಿಂದೆ ಮೂರು ಕಡೆಗಳಿಂದ ಕಲುಷಿತ ನೀರು ಬಂದು ಸಂಗ್ರಹವಾಗುತ್ತಿತ್ತು. ಅದನ್ನೆಲ್ಲಾ ಸ್ಥಗಿತಗೊಳಿಸಿ ರಾಜ ಕಾಲುವೆಯ ಮೂಲಕ ಬೇರೆಡೆ ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಹೊಸ ಬಸ್ ನಿಲ್ದಾಣಕ್ಕೆ ತೆರಳುವ ಮುಖ್ಯ ರಸ್ತೆಯ ಅಡಿಯಿಂದ ನೀರು ಸಂಗ್ರಹವಾಗುತ್ತಿರುವ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎನ್ನುತ್ತಾರೆ ಪರಿಸರ ಅಭಿಯಂತರ ಗದಗ -ಬೆಟಗೇರಿ ನಗರಸಭೆ ಆನಂದ ಬದಿ.ಭೀಷ್ಮಕೆರೆಗೆ ದೊಡ್ಡ ಇತಿಹಾಸವಿದೆ. ನಿತ್ಯ ಸಾವಿರಾರು ಜನ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿ ನೂರಾರು ಜನರು ವಾಯು ವಿಹಾರ ಮಾಡುತ್ತಾರೆ. ಈ ಕೆರೆಗೆ ಮಲೀನ ನೀರು ಸೇರ್ಪಡೆಯಾಗುತ್ತಿದೆ. ನಗರಸಭೆ ತಕ್ಷಣ ಕ್ರಮ ತೆಗೆದುಕೊಂಡು ಅದನ್ನು ಸ್ಥಗಿತಗೊಳಿಸಿ ಕೆರೆ ಮತ್ತು ಜಲ ಚರಗಳ ಜೀವ ಉಳಿಸಬೇಕು ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಶರಣು ಗೋಡಿ.