ಸಾರಾಂಶ
ಜಿಲ್ಲಾಮಟ್ಟದ ಕಾರ್ಯಕ್ರಮವನ್ನು ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ನ. 3ರಂದು ಮಧ್ಯಾಹ್ನ 2ಕ್ಕೆ ಆಯೋಜಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಪ್ರತಿ ತಾಲೂಕು ಮಟ್ಟದಲ್ಲಿ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಸುವರ್ಣ ಮಹೋತ್ಸವ ನಡೆಯಲಿದೆ.
ಧಾರವಾಡ:
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಯಶಸ್ವಿಯಾಗಿ 50 ವರ್ಷ ಪೂರೈಸಿದ್ದು, ಮಂಡಳಿಯ ಸುವರ್ಣ ಮಹೋತ್ಸವ ಸಾರ್ವಜನಿಕ ಜಾಗೃತಿ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ನ. 3ರಂದು ಆಚರಿಸಲು ನಿರ್ಧರಿಸಿದೆ. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಪ್ರಭಾರ ಜಿಲ್ಲಾಧಿಕಾರಿ, ಜಿಪಂ ಸಿಇಒ ಭುವನೇಶ ಪಾಟೀಲ ಹೇಳಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಸಮಾರಂಭ ಕುರಿತು ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಂಡಳಿಯ ಈ ಕಾರ್ಯಕ್ರಮದಲ್ಲಿ ವಿವಿಧ ಸಮುದಾಯ ತೊಡಗಿಸಿಕೊಂಡು, ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಮಂಡಳಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು, ಪರಿಸರ ಸಂರಕ್ಷಣಾ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದರು.
ಜಿಲ್ಲಾಮಟ್ಟದ ಕಾರ್ಯಕ್ರಮವನ್ನು ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ನ. 3ರಂದು ಮಧ್ಯಾಹ್ನ 2ಕ್ಕೆ ಆಯೋಜಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಪ್ರತಿ ತಾಲೂಕು ಮಟ್ಟದಲ್ಲಿ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಸುವರ್ಣ ಮಹೋತ್ಸವ ನಡೆಯಲಿದೆ. ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳ ಎಲ್ಲ ಜನ ಸಾಮಾನ್ಯರನ್ನು ತಲುಪುವಂತೆ ಸ್ಥಳೀಯ ಪರಿಸರ ಮಾಲಿನ್ಯ ಸಮಸ್ಯೆಗಳಾದ ಘನ ತ್ಯಾಜ್ಯ ನಿರ್ವಹಣೆ, ಜಲ ಮಾಲಿನ್ಯ, ಇ-ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಕುರಿತು ವಿಶೇಷ ಉಪನ್ಯಾಸ, ವಿವಿಧ ಸ್ಪರ್ಧೆ, ಬೀದಿ ನಾಟಕ, ಮಕ್ಕಳ ಭಾಷಣ ಆಯೋಜಿಸಲು ಕ್ರಮವಹಿಸಬೇಕೆಂದು ತಿಳಿಸಿದರು.ಕೈಗಾರಿಕೋದ್ಯಮಿಗಳು, ಪರಿಸರವಾದಿಗಳು, ವಿದ್ಯಾರ್ಥಿಗಳು, ಜನ ಪ್ರತಿನಿಧಿಗಳು, ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಸಂಘ-ಸಂಸ್ಥೆಗಳು ಹಾಗೂ ಇತರೆ ಭಾಗಿದಾರರ ಸಹಭಾಗಿತ್ವ ಇರಬೇಕು ಎಂದರು.ಹಿರಿಯ ಪರಿಸರ ಅಧಿಕಾರಿ ಜಗದೀಶ ಐ.ಎಚ್. ಸಭೆ ನಿರ್ವಹಿಸಿದರು. ವಿವಿಧ ಇಲಾಖೆ ಅಧಿಕಾರಿಗಳಾದ ಸಂತೋಷ ಕಾಣಕೋಣಕರ, ಡಿಎಚ್‌ಒ ಡಾ. ಎಸ್. ಹೊನಕೇರಿ, ತೇಜಸ್ವಿನಿ ನಾರಾಯಣಕರ, ಡಾ. ರೇಣುಕಾ ಅಮಲಜೇರಿ, ಪರಿಸರ ನಾಗರಿಕ ಸಮಿತಿ ಅಧ್ಯಕ್ಷ ಶಂಕರ ಕುಂಬಿ, ಎಲ್.ಆರ್. ನಾಯಕ ಇದ್ದರು.