ಸಾರಾಂಶ
ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಭಾವನಮನ ಸಮರ್ಪಣೆ
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಭಾರತ ಸ್ವಾತಂತ್ರ್ಯದ 79ನೇ ವರ್ಷಾಚರಣೆ ಹಿನ್ನೆಲೆ ವಾಯ್ಸ್ ಆಫ್ ಕೊಡವ (ವಿಒಕೆ) ಮತ್ತು ಯುನೈಟೆಡ್ ಕೊಡವ ಆರ್ಗನೈಜೇಷನ್ (ಯುಕೊ) ಸಹಯೋಗದಲ್ಲಿ ನೆಪ್ಪುರ ನಳತ್ ಮಾಂಜತ ಮೊಟ್ಟ್ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ದಕ್ಷಿಣ ಕೊಡಗಿನ ಪೊನ್ನಂಪೇಟೆ ಸಮೀಪದ ಕೇವ್ ಇನ್ ಸಭಾಂಗಣದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಕೊಡಗಿನ ಹೋರಾಟಗಾರರ ತ್ಯಾಗ, ಬಲಿದಾನಗಳನ್ನು ಪರಿಚಯಿಸುವ ಛಾಯಾಚಿತ್ರ ಪ್ರದರ್ಶನವನ್ನು, ಕೊಡಗಿ ಗಾಂಧಿ ಪಂದ್ಯಂಡ ಬೆಳ್ಯಪ್ಪ ಅವರ ಪುತ್ರಿ ಬುಟ್ಟಿಯಂಡ ಕುಸುಮ್ ಅಯ್ಯಪ್ಪ ಉದ್ಘಾಟಿಸಿದರು.
ಮುಖ್ಯ ಅಥಿತಿಗಳಾಗಿ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಹಾಗೂ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಮನ್ ಸುಬ್ರಮಣಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಎ.ಎಸ್. ಪೊನ್ನಣ್ಣ ಮಾತನಾಡಿ, ಸ್ವಾತಂತ್ರ್ಯ ದಿನದಂದು ಈ ನಾಡಿನ ಹಿರಿಯರ ತ್ಯಾಗ ಬಲಿದಾನಗಳನ್ನು ನೆನಪಿಸುವ, ಇತಿಹಾಸದ ಮಹತ್ವವನ್ನು ಸಾರುವ ಅದ್ಭುತ ಕಾರ್ಯಕ್ರಮ ಇದಾಗಿದೆ. ಇತಿಹಾಸವನ್ನು ಅರಿಯದವನು ಇತಿಹಾಸವನ್ನು ಸೃಷ್ಟಿಸಲಾರ ಈ ನಿಟ್ಟಿನಲ್ಲಿ ಇಂತಹ ಅರ್ಥಪೂರ್ಣ ಹಾಗೂ ಭಾವನಾತ್ಮಕ ಕಾರ್ಯಕ್ರಮ ಆಯೋಜಿಸಿದ ‘ಯುಕೊ’ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಿದ ಅವರು, ಯುಕೊ ತನ್ನ ಮುಂದಿಟ್ಟಿರುವ ಎಲ್ಲ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಹೇಳಿದರು.
ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಮನ್ ಸುಬ್ರಮಣಿ ಮಾತನಾಡಿ, ಸ್ವಾತಂತ್ರ್ಯ ಇತಿಹಾಸದಲ್ಲಿ ಕೊಡವರ ಕೊಡುಗೆ ಅಪಾರವಾದುದು. ಸಿಪಾಯಿದಂಗೆಯ ಪೂರ್ವದ ಘಟನೆಗಳನ್ನು ಪರಿಗಣಿಸುವುದಾದರೆ, ತನ್ನ ಸ್ವಂತ ಸೈನ್ಯದ ಮೂಲಕ ನೂರಕ್ಕೂ ಅಧಿಕ ಬ್ರಿಟಿಷ್ ಸೈನಿಕರನ್ನು ಕೊಂದು ಸದೆ ಬಡಿದ ಮಹಾನ್ ಶೂರ ಮಾತಂಡ ಅಪ್ಪಚ್ಚುರವರಿಗೂ ಸರ್ಕಾರ ಮನ್ನಣೆ ನೀಡಬೇಕು. ಸರ್ಕಾರ ಕೊಡಗಿನ ನೈಜ ಸ್ವಾತಂತ್ರ್ಯ ಹೋರಾಟಗಾರರಿಗೆ ಸೂಕ್ತ ಮನ್ನಣೆ ನೀಡಿ ಗೌರವಿಸುವಂತಾಗಬೇಕು ಎಂದು ಹೇಳಿದರು.ಯುಕೊ ಅಧ್ಯಕ್ಷ, ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಕೆಲವೇ ಕೆಲವು ಹೋರಾಟಗಾರರನ್ನು ಗುರ್ತಿಸಿ ಗೌರವ ನೀಡಲಾಗುತ್ತಿದೆ. ಆದರೆ ಇಲ್ಲಿನ ನೈಜ ಹೋರಾಟಗಾರರಿಗೆ ಸ್ಥಳೀಯವಾಗಿ ಸಾರ್ವಜನಿಕರು ಹಾಗೂ ಸರ್ಕಾರದಿಂದ ಗೌರವ ನೀಡಿ ಸ್ಮರಿಸುವ ಕೆಲಸವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಿಂದ ಜಿಲ್ಲಾಡಳಿತವು, ಸ್ಥಳೀಯವಾಗಿ ನೈಜ ಸ್ವಾತಂತ್ರ್ಯ ಹೋರಾಟಗಾರರನ್ನು, ಸತ್ಯಾಗ್ರಹಿಗಳನ್ನು ಗುರ್ತಿಸಿ ಗೌರವಿಸಿ ಸ್ಮರಿಸಬೇಕು, ಇಲ್ಲವಾದಲ್ಲಿ ಈ ಮಣ್ಣಿನ ನೈಜ ಇತಿಹಾಸಗಳು ಅಳಿಸಿಹೋಗಲಿದೆ, ಇದು ಸಮಾಜವನ್ನು ಅತ್ಯಂತ ಕೆಟ್ಟದಾದ ಪರಿಸ್ಥಿತಿಗೆ ತಳ್ಳಲು ಕಾರಣವಾಗಬಹುದಾದ ಆತಂಕವಿದೆ ಎಂದು ಹೇಳಿದರು.
ಈ ನಿಟ್ಟಿನಲ್ಲಿ, ಕೊಡಗಿನ ನೈಜ ಹೋರಾಟಗಾರರನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನದ ಭಾಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ವಿಚಾರ ವಿನಿಮಯ, ದೇಶಭಕ್ತಿ ಗೀತೆಗಳು ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನೆನಪಿನ ನೆರಳಲ್ಲಿ ಹುದುಗಿರುವ ಆ ಸ್ವಾತಂತ್ರ್ಯದ ಹೆಜ್ಜೆಗುರುತುಗಳನ್ನು ಸರ್ಕಾರಕ್ಕೆ ನೆನಪಿಸುವ ಹಾಗು ಇಂದಿನ ಪೀಳಿಗೆಗೆ ಪರಿಚಯಿಸುವ ಒಂದು ಪ್ರಯತ್ನ ಇದಾಗಿದೆ. ಹಾಗೆಯೇ ಆ ಹಿರಿಯರ ನೆನಪುಗಳು ಹಾಗು ಅವರ ತ್ಯಾಗ ಬಲಿದಾನಗಳನ್ನು ಮೆಲುಕು ಹಾಕುವ ನೆಪ್ಪುರ ಚೊಪ್ಪು ಎಂಬ ಛಾಯಾಚಿತ್ರ ಪ್ರದರ್ಶನದ ಮೂಲಕ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಕೊಡವರ ಪಾತ್ರಗಳನ್ನು ಅನಾವರಣಗೊಳಿಸಲಾಗಿದೆ ಎಂದು ಅವರು ಹೇಳಿದರು.ಕಾಳಿಮಾಡ ಡಾ. ಶಿವಪ್ಪ ಪ್ರಾರ್ಥನೆ ಸಲ್ಲಿಸಿದರು. ಹೆಸರಾಂತ ಗಾಯಕರಾದ, ಚೆಕ್ಕೇರ ಪಂಚಮ್ ಬೋಪಣ್ಣ, ಬೊಟ್ಟೋಳಂಡ ಅಶಿತಾ ಬೋಪಣ್ಣ, ಪಳಂಗಂಡ ಮೇಘನಾ ನಾಚಪ್ಪ, ರೀಟಾ ನಾಚಪ್ಪ,ಮತ್ತು ಶಾನ್ ನಾಚಪ್ಪ, ಜೂ.ಕಿಶೋರ್ ಕುಮಾರ್ ಖ್ಯಾತಿಯ ಮಾಳೇಟಿರ ಅಜಿತ್ ಪೂವಣ್ಣರ ದೇಶಭಕ್ತಿ ಸಾರುವ ಗೀತೆಗಳು ನೆರೆದವರ ಕಣ್ಣಾಲಿಗಳು ತೇವಗೊಳ್ಳುವಂತೆ ಮಾಡಿದವು. ಮತ್ತು ಸಾಯಿ ಶಂಕರ್ ಶಾಲೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರದರ್ಶನ ಕಾರ್ಯಕ್ರಮಕ್ಕೆ ಮೆರಗು ನೀಡಿತು.
ಬೋಡಂಗಡ ಜಗದೀಶ್, ಕೋಪುಡ ಸೌಮ್ಯ ಚಿಣ್ಣಪ್ಪ, ಕೋಟ್ರಮಾಡ ಶೀತಲ್ ಸುಮಂತ್ ಹಾಗು ಕಳ್ಳಿಚಂಡ ತನ್ವಿ ಉತ್ತಪ್ಪ, ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರಿಗೆ ನುಡಿ ನಮನಗಳನ್ನು ಸಲ್ಲಿಸಿದರು.ಕಳ್ಳಿಚಂಡ ರಾಬಿನ್ ಸುಬ್ಬಯ್ಯ ಹಾಗು ಕಳ್ಳಿಚಂಡ ದೀನಾ ಉತ್ತಪ್ಪ ನಿರೂಪಿಸಿ, ಚೆಪ್ಪುಡಿರ ಸುಜು ಕರುಂಬಯ್ಯ ವಂದಿಸಿದರು.
ಕಾರ್ಯಕ್ರಮದಲ್ಲಿ ಲೇಖಕಿ ಯಬೊಮ್ಮಂಡ ಸವೇರ ಚಂಗಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯ ಚೆಪ್ಪುಡಿರ ಅರುಣ್ ಮಾಚಯ್ಯ, ಕೊಡವ ಸಾಹಿತ್ಯ ಅಖಾಡೆಮಿ ಸದಸ್ಯ ಚೊಟ್ಟೆಯಂಡ ಸಂಜು ಕಾವೇರಪ್ಪ, ಪಂದ್ಯಂಡ ಬೆಂಳ್ಯಪ್ಪನವರ ಪುತ್ರ ಪಂದ್ಯಂಡ ವಿಜಯ್, ಚೆಕ್ಕೇರ ಬಿಪಿನ್ ಮೊಣ್ಣಯ್ಯ, ಮಲ್ಲೇಂಗಡ ಪ್ರಕಾಶ್ ಚಂಗಪ್ಪ, ಕಾಕಮಾಡ ಚಂಗಪ್ಪ, ರಾಷ್ಟ್ರಪತಿ ಪದಕ ಪುರಸ್ಕೃತೆ ಕಾಕಮಾಡ ಗಂಗಾ ಚಂಗಪ್ಪ, ಬಾಳಿಯಡ ಕರುಣ್ ಕಾಳಪ್ಪ, ಕೊಳ್ಳಿಮಾಡ ಅಜಿತ್ ಅಯ್ಯಪ್ಪ, ಮನೆಯಪಂಡ ಕಾಂತಿ ಸತೀಶ್, ಸಾಯಿಶಂಕರ್ ವಿಧ್ಯಾ ಸಂಸ್ಥೆಗಳ ಮುಖ್ಯಸ್ಥ ಕೋಳೇರ ಝರು ಗಣಪತಿ, ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.