ವಿದ್ಯಾವಂತ ಅಧಿಕಾರಿಗಳು ಮತ್ತು ನೌಕರರು ಭ್ರಷ್ಟರಾಗಿದ್ದಾರೆ. ಇವರಿಗೆ ಬಹಿರಂಗ ಪಾಠ ಕಲಿಸಬೇಕಾದ ಸ್ಥಿತಿಗೆ ರೈತಸಂಘ ಬಂದಿದೆ. ಅನ್ನ ಬೆಳೆಯುವ ರೈತ ಕುಟುಂಬಗಳಿಗೆ ರಾಜ್ಯ ಸರ್ಕಾರ ಕಳಪೆ ಪಡಿತರ ವಿತರಿಸಿ ಮಣ್ಣು ತಿನ್ನಿಸುವ ಕೆಲಸ ಮಾಡುತ್ತಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಡಿತರದಾರರಿಗೆ ಕಳಪೆ ರಾಗಿ ಪೂರೈಕೆ ಮಾಡಿದ ಏಜೆನ್ಸಿ ಮತ್ತು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಜ್ಯ ರೈತಸಂಘ ಹಲವು ಬಾರಿ ಹೋರಾಟ ನಡೆಸಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ತಾಲೂಕು ರೈತಸಂಘದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಆಹಾರ ಇಲಾಖೆ ಜಿಲ್ಲಾ ನಿರ್ದೇಶಕ ಪ್ರತೀಕ್ ಹೆಗ್ಗಡೆ ನೇತೃತ್ವದಲ್ಲಿ ನಡೆದ ಎರಡನೇ ಸಭೆಯಲ್ಲಿ ರೈತ ಮುಖಂಡರು ಕಳಪೆ ರಾಗಿ ಪೂರೈಕೆ ಸಂಬಂಧ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಕಳಪೆ ರಾಗಿ ಹಾಸನ ಜಿಲ್ಲೆಯ ಜಾವಗಲ್ ಗೋಡನ್‌ನಿಂದ ಪೂರೈಕೆಯಾಗಿತ್ತು. ರೈತ ಹೋರಾಟದ ಹಿನ್ನೆಲೆಯಲ್ಲಿ ಕಳೆದ ಜನವರಿ 22 ರಂದು ರೈತಸಂಘದ ಮುಖಂಡರೊಂದಿಗೆ ಮೊದಲ ಸುತ್ತಿನ ಮಾತುಕತೆ ನಡೆಸಿದಾಗ ಪ್ರತೀಕ್ ಹೆಗ್ಗಡೆ ಅವರು ಕಳಪೆ ರಾಗಿ ಪೂರೈಕೆಯಾದ ಆಹಾರ ಇಲಾಖೆ ಹಾಸನ ಜಿಲ್ಲಾ ನಿರ್ದೇಶಕರನ್ನು ಆಹ್ವಾನಿಸಿ ರೈತರೊಂದಿಗೆ ಸಭೆ ನಡೆಸಿ ಕ್ರಮದ ಮಾಹಿತಿ ನೀಡುವುದಾಗಿ ಭರವಸೆ ನೀಡಿದ್ದರು.ಕೊಟ್ಟ ಮಾತಿನಂತೆ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಪ್ರತೀಕ್ ಹೆಗ್ಗಡೆ ರೈತರೊಂದಿಗೆ ಸಭೆ ನಡೆಸಿದರು. ಆದರೆ, ಇಂದಿನ ಸಭೆಗೆ ಹಾಸನ ಜಿಲ್ಲಾ ಆಹಾರ ನಿರ್ದೇಶಕರು ಬರಲ್ಲಿಲ್ಲ. ಕಳಪೆ ರಾಗಿ ಪೂರೈಕೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.
ರೈತಮುಖಂಡ ಎಂವಿ.ರಾಜೇಗೌಡ ಮಾತನಾಡಿ, ವಿದ್ಯಾವಂತ ಅಧಿಕಾರಿಗಳು ಮತ್ತು ನೌಕರರು ಭ್ರಷ್ಟರಾಗಿದ್ದಾರೆ. ಇವರಿಗೆ ಬಹಿರಂಗ ಪಾಠ ಕಲಿಸಬೇಕಾದ ಸ್ಥಿತಿಗೆ ರೈತಸಂಘ ಬಂದಿದೆ. ಅನ್ನ ಬೆಳೆಯುವ ರೈತ ಕುಟುಂಬಗಳಿಗೆ ರಾಜ್ಯ ಸರ್ಕಾರ ಕಳಪೆ ಪಡಿತರ ವಿತರಿಸಿ ಮಣ್ಣು ತಿನ್ನಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.ಆಹಾರ ಇಲಾಖೆ ಆಯುಕ್ತರು ಮತ್ತು ಸಚಿವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಮುಂದಿನ ದಿನಗಳಲ್ಲಿ ಕಳಪೆ ಆಹಾರ ಧಾನ್ಯಗಳು ಪೂರೈಕೆಯಾಗದಂತೆ ಎಚ್ಚರ ವಹಿಸಬೇಕು. ಪ್ರತಿಯೊಂದು ನ್ಯಾಯಬೆಲೆ ಅಂಗಡಿ ಮಾಲೀಕರು ತಮಗೆ ಪೂರೈಕೆಯಾದ ಪಡಿತರ ಆಹಾರ ಧಾನ್ಯಗಳ ವೀಡಿಯೋ ಚಿತ್ರೀಕರಣ ಮಾಡಿ ಕಳಪೆ ಧಾನ್ಯಗಳನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಆಹಾರ ನಿರ್ದೇಶಕ ಪ್ರತೀಕ್ ಹೆಗ್ಗಡೆ ಮಾತನಾಡಿ, ನಾನು ಜಿಲ್ಲೆಗೆ ಅಧಿಕಾರಿಯಾಗಿ ಬರುವ ಮುನ್ನ ಈ ಖರೀದಿ ಪ್ರಕ್ರಿಯೆ ನಡೆದಿದೆ. ಕಳಪೆ ರಾಗಿಯನ್ನು ಈಗಾಗಲೇ ಗುಣಮಟ್ಟ ಪರಿಶೀಲನೆ ಕಳುಹಿಸಲಾಗಿದೆ. ವರದಿಗಾಗಿ ಕಾಯುತ್ತಿದ್ದೇನೆ. ಕಳಪೆ ರಾಗಿ ಪೂರೈಕೆ ಪ್ರಕರಣ ಮಾಧ್ಯಮಗಳಲ್ಲಿ ಬಂದಿದ್ದು, ಮೇಲಧಿಕಾರಿಗಳ ಗಮನ ಸೆಳೆದಿದೆ ಎಂದರು.ಕಳಪೆ ರಾಗಿ ಪೂರೈಕೆಯ ಪ್ರಕರಣದ ತನಿಖೆಗೆ ಅಗತ್ಯವಾದ ವರದಿಯನ್ನು ನಾನು ಈಗಾಗಲೇ ಸಿದ್ಧಪಡಿಸಿದ್ದು ಸಮಗ್ರ ತನಿಖೆಗೆ ಪೂರಕ ವರದಿ ಸಲ್ಲಿಸುತ್ತೇನೆ. ರೈತ ಹೋರಾಟಗಾರರು ಒಂದಷ್ಟು ಕಾಲಾವಕಾಶ ನೀಡಿ ಸಹಕರಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಮುಖಂಡರಾದ ಎಲ್.ಬಿ.ಜಗದೀಶ್, ನಗರೂರು ಕುಮಾರ್, ಕರೋಟಿ ತಮ್ಮಯ್ಯ, ಮಡುವಿನಕೋಡಿ ಪ್ರಕಾಶ್, ಚೌಡೇನಹಳ್ಳಿ ಕೃಷ್ಣೇಗೌಡ, ಮರಡಹಳ್ಳಿ ರಾಮೇಗೌಡ, ಹೊನ್ನೇಗೌಡ, ನೀತಿಮಂಗಲ ಮಹೇಶ್ ಹಲವರು ಇದ್ದರು.