ಟಿಸಿಗಳ ದುರಸ್ತಿಯಲ್ಲಿನ ಘಟನೆ ಪುನರಾವರ್ತನೆ ಆಗದಂತೆ ಮುನ್ನೆಚ್ಚರಿಕೆ ವಹಿಸುವುದಾಗಿ ಗುತ್ತಿಗೆದಾರ ತಿಳಿಸಿದ್ದು, ಘಟನೆ ಕುರಿತು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೀರೇಶ ರಾಜೂರ ತಿಳಿಸಿದರು.
ಗಜೇಂದ್ರಗಡ: ರೈತರಿಗೆ ಕಳಪೆ ಮಟ್ಟದ ವಿದ್ಯುತ್ ಪರಿವರ್ತಕಗಳ ಪೂರೈಕೆ ಕುರಿತಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ತಾಕೀತು ಮಾಡುವುದರ ಜತೆಗೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೀರೇಶ ರಾಜೂರ ಭರವಸೆ ನೀಡಿದ ಹಿನ್ನೆಲೆ ಮಂಗಳವಾರ ರೈತರು ಪ್ರತಿಭಟನೆ ಮೊಟಕುಗೊಳಿಸಿದರು.
ಕಳಪೆ ಮಟ್ಟದ ಟಿಸಿ ಪೂರೈಕೆಯಾಗುತ್ತಿವೆ ಎಂದು ಆರೋಪಿಸಿ ಸೋಮವಾರ ಸಂಜೆ ರೋಣ ರಸ್ತೆಯ ಪಟ್ಟಣದ ಹೆಸ್ಕಾಂ ಕಚೇರಿ ಎದುರು ಜೀಗೇರಿ ಗ್ರಾಮದ ರೈತರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಆಗಮಿಸಿ ಟಿಸಿ ದುರಸ್ತಿ ಗುತ್ತಿಗೆದಾರರನ್ನು ಕರೆಸುವ ಲಿಖಿತ ಭರವಸೆ ನೀಡಿದ ಹಿನ್ನೆಲೆ ರೈತರು ಪ್ರತಿಭಟನೆಗೆ ವಿರಾಮ ನೀಡಿದ್ದರು.ಅದರಂತೆ ಮಂಗಳವಾರ ಬೆಳಗ್ಗೆ ಆರಂಭವಾದ ಸಭೆಯಲ್ಲಿ ಜೀಗೇರಿ ಗ್ರಾಮದ ರೈತರು ಕಳೆದ ೨- ೩ ತಿಂಗಳಿನಿಂದ ಕಳಪೆ ಟಿಸಿಗಳನ್ನು ಪೂರೈಸುತ್ತಿರುವ ಗುತ್ತಿಗೆದಾರರನ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು. ರೋಣ ಪಟ್ಟಣಕ್ಕೆ ರೈತರು ಟಿಸಿ ದುರಸ್ತಿಗೆ ತೆಗೆದುಕೊಂಡು ಹೋಗಲು ₹೧೦ರಿಂದ ₹೨೦ ಸಾವಿರ ಖರ್ಚಾಗುತ್ತಿದೆ. ಇತ್ತ ದುರಸ್ತಿ ಕೇಂದ್ರಕ್ಕೆ ಸುಟ್ಟ ಟಿಸಿ ಹೋದರೆ ರೈತರಿಗೆ ತೀವ್ರಗತಿಯಲ್ಲಿ ಟಿಸಿ ಕೊಡಲಿ ಎನ್ನುವ ಆಶಯದಿಂದ ಸರ್ಕಾರವು ಟಿಸಿ ದುರಸ್ತಿ ಮಾಡುವ ಗುತ್ತಿಗೆ ಪಡೆದ ಗುತ್ತಿಗೆದಾರನ ಖಾತೆಗೆ ₹೧೦ರಿಂದ ₹೨೦ ಸಾವಿರ ವರ್ಗಾವಣೆ ಮಾಡುತ್ತದೆ.
ಆದರೆ ರೈತರಿಗೆ ಗುಣಮಟ್ಟದ ಟಿಸಿಗಳನ್ನು ಕೊಡುವ ಬದಲು ರೈತರೊಂದಿಗೆ ಚೆಲ್ಲಾಟವಾಡುತ್ತಿರುವ ಗುತ್ತಿಗೆದಾರರ ಪರವಾನಗಿ ರದ್ದು ಪಡಿಸಬೇಕು ಎಂದು ರೈತರು ಬಿಗಿಪಟ್ಟು ಹಿಡಿದರು. ಆಗ ಗುತ್ತಿಗೆದಾರ ಈ ಹಿಂದೆ ಆಗಿರುವ ತಪ್ಪು ತಿದ್ದಿಕೊಂಡು ಮುಂದೆ ತಪ್ಪು ಆಗದಂತೆ ಕೆಲಸ ನಿರ್ವಹಿಸುವ ಭರವಸೆ ನೀಡಿದರು.ಹೀಗಾಗಿ ಸಭೆಯಲ್ಲಿದ್ದ ರೈತರು ಘಟನೆ ಪುನರಾವರ್ತನೆಯಾದರೆ ಗುತ್ತಿಗೆದಾರರ ಪರವಾನಗಿ ಮುಲಾಜಿಲ್ಲದೆ ರದ್ದು ಪಡಿಸಬೇಕು ಎಂದು ಜೀಗೇರಿ ಗ್ರಾಮದ ರೈತರು ಅಧಿಕಾರಿಗಳಿಗೆ ಒತ್ತಾಯಿಸಿದರು. ಅಲ್ಲದೆ ಗಜೇಂದ್ರಗಡ ಪಟ್ಟಣದಲ್ಲಿ ಟಿಸಿ ದುರಸ್ತಿ ಕೇಂದ್ರ ಆರಂಭಕ್ಕೆ ಶಾಸಕರು ಮುಂದಾಗುವ ಮೂಲಕ ಸಂಕಷ್ಟ ಅನುಭವಿಸುತ್ತಿರುವ ರೈತರ ನೆರವಿಗೆ ಧಾವಿಸಬೇಕು ಎಂದರು.ಟಿಸಿಗಳ ದುರಸ್ತಿಯಲ್ಲಿನ ಘಟನೆ ಪುನರಾವರ್ತನೆ ಆಗದಂತೆ ಮುನ್ನೆಚ್ಚರಿಕೆ ವಹಿಸುವುದಾಗಿ ಗುತ್ತಿಗೆದಾರ ತಿಳಿಸಿದ್ದು, ಘಟನೆ ಕುರಿತು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೀರೇಶ ರಾಜೂರ ತಿಳಿಸಿದ ಬಳಿಕ ಪ್ರತಿಭಟನಾ ಸಭೆ ಮೊಟಕುಗೊಂಡಿತು.ಈ ವೇಳೆ ಮುತ್ತಣ್ಣ ಕೊಪ್ಪಳ, ಡಿ.ಜಿ. ಕಟ್ಟಿಮನಿ, ದೇವೆಂದ್ರಪ್ಪ ಜಿಗಳೂರ, ಮಲ್ಲಪ್ಪ ಕಮರಿ, ಬಸಪ್ಪ ಅಡಪಟ್ಟಿ, ಬಸಪ್ಪ ನೆಲಗಣಿ, ಕಳಕಪ್ಪ ಅಂಗಡಿ, ಲಕ್ಷ್ಮಣ ಚಂದೂಕರ, ಬಸವರಾಜ ಮ್ಯಾಗೇರಿ, ಮಂಜು ಕಮತರ, ಕುಮಾರ ದೇಸಾಯಿ, ಪರಶುರಾಮ ಕಮರಿ, ಮಂಜುನಾಥ ತೋಟದ, ಶರಣಪ್ಪ ಬೇವಿನಕಟ್ಟಿ ಇತರರು ಇದ್ದರು.