ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಬಡವಾದ ಕಲ್ಯಾಣ ಕರ್ನಾಟಕ: ಹಿರಿಯ ಸಾಹಿತಿ ಎ.ಎಂ. ಮದರಿ

| Published : Mar 04 2024, 01:20 AM IST

ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಬಡವಾದ ಕಲ್ಯಾಣ ಕರ್ನಾಟಕ: ಹಿರಿಯ ಸಾಹಿತಿ ಎ.ಎಂ. ಮದರಿ
Share this Article
  • FB
  • TW
  • Linkdin
  • Email

ಸಾರಾಂಶ

ಕವಿತೆ ಸಮಾಜ ಕಟ್ಟುವಂತಾಗಬೇಕೇ ಹೊರತು ಬೆಂಕಿ ಹೊತ್ತುವಂತಿರಬಾರದು. ಕವನಗಳು ಜನರ ಮನಸ್ಸು ಮುಟ್ಟಿದಾಗಲೇ ಸಜ್ಜನ ಸಮಾಜ ನಿರ್ಮಾಣವಾಗಲಿದೆ.

ಕನಕಗಿರಿ: ಕಲ್ಯಾಣ ಕರ್ನಾಟಕವು ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಬಡವಾಗಿದ್ದು, ಯುವಕರು ಕವಿಗಳಾಗುವ ಮೂಲಕ ಶ್ರೀಮಂತಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದು ಹಿರಿಯ ಸಾಹಿತಿ ಎ.ಎಂ. ಮದರಿ ಹೇಳಿದರು.

ಅವರು ಪಟ್ಟಣದ ಕನಕಗಿರಿ ಉತ್ಸವ-೨೦೨೪ರ ನಿಮಿತ್ತ ಹಮ್ಮಿಕೊಂಡಿದ್ದ ಕವಿಗೋಷ್ಠಿಯನ್ನು ಉದ್ಘಾಟಿಸಿ ಭಾನುವಾರ ಮಾತನಾಡಿದರು. ಕವಿತೆ ಸಮಾಜ ಕಟ್ಟುವಂತಾಗಬೇಕೇ ಹೊರತು ಬೆಂಕಿ ಹೊತ್ತುವಂತಿರಬಾರದು. ಕವನಗಳು ಜನರ ಮನಸ್ಸು ಮುಟ್ಟಿದಾಗಲೇ ಸಜ್ಜನ ಸಮಾಜ ನಿರ್ಮಾಣವಾಗಲಿದೆ. ಹಸಿವು, ರೈತನ ಸಂಕಷ್ಟ ಹಾಗೂ ಮಹಿಳೆಯರ ಮೇಲಾಗುವ ದೌರ್ಜನ್ಯ ನಿವಾರಣೆಯ ಕುರಿತಾದ ರಚಿಸಿ ಸಮಾಜವನ್ನು ಜಾಗೃತಿಗೊಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಕಾರ್ಯಕ್ರಮದ ಸಾಹಿತಿ ಅಧ್ಯಕ್ಷತೆ ವಹಿಸಿದ್ದ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ನಮ್ಮ ಬರಹ ಕ್ರಾಂತಿಕಾರಿಯಾಗಿದ್ದಾಗ ಮಾತ್ರ ಸಮಾಜದೊಳಗಿನ ಅಂಕು-ಡೊಂಕು ತಿದ್ದಲು ಸಾಧ್ಯ. ಕೂಡಿ ಬಾಳುವ ಕವಿತೆಗಳನ್ನು ಬರೆಯುವ ಮೂಲಕ ಅವಿಭಕ್ತ ಕುಟುಂಬದ ಆಶಯವನ್ನು ಎತ್ತಿ ಹಿಡಿಯಬೇಕಿದೆ. ಸಮಾಜದಲ್ಲಿ ಧರ್ಮಗಳಿಗೂ ಮೀರಿ ಬದುಕುವ ಜನ ದೇಶದ ಐಕ್ಯತೆಗಾಗಿ ಶ್ರಮಿಸುತ್ತಿದ್ದು, ಎಲ್ಲ ವರ್ಗಕ್ಕೂ ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಲು ಸಂವಿಧಾನ ತಿದ್ದುಪಡಿ ಅಗತ್ಯವಿದೆ ಎಂದು ತಿಳಿಸಿದರು.

ಸಾಹಿತಿ ಅಲ್ಲಾಗಿರಿರಾಜ ಮಾತನಾಡಿ, ಸಮಾಜದಲ್ಲಿ ಕವಿಗೆ ದೊಡ್ಡ ಜವಾಬ್ದಾರಿ ಇದೆ. ಓದುಗರನ್ನು ಸೃಷ್ಟಿ ಮಾಡಿಕೊಳ್ಳದ ಕವಿಗಳು ಕವಿತೆ ಬರೆಯಲಿಕ್ಕೆ ಅನರ್ಹರು. ರಾಜಕಾರಣದ ಹಾದಿ ತಪ್ಪುವ ಸ್ಥಿತಿಯಲ್ಲಿರುವಾಗ ಕವಿ ತನ್ನ ಕಾವ್ಯಲೋಕದ ಮೂಲಕ ರಾಜಕಾರಣ ತಿದ್ದಲು ಸಾಧ್ಯವಿದೆ. ಆದರೆ ಅಂತಹ ಕವಿತೆ ಬರೆಯುವ ಕವಿಗಳ ಕೊರತೆ ಎದ್ದು ಕಾಣುತ್ತಿದೆ ಎಂದರು.

ಮನೋಹರ ಬೊಂದಾಡೆ, ಮೌನೇಶ ಬಡಿಗೇರ, ಶಿರಾಜ್ ಬಿಸರಳ್ಳಿ, ಅಮೀನ್ ಅತ್ತಾರ್, ಅಲ್ಲಾವುದ್ದೀನ್ ಎಮ್ಮಿ, ದೀಪಾ ಗಡಗಿ, ಮುಮ್ತಾಜ್‌ಬೇಗಂ, ರಾಮರೆಡ್ಡಿ ಶಿವನಗುಂಡಿ ಸೇರಿ ೬೪ ಜನರು ಕವನಗಳನ್ನು ವಾಚಿಸಿದರು.

ಸಾಹಿತಿಗಳಾದ ಅಜ್ಮೀರ್ ನಂದಾಪುರ, ಉಪನ್ಯಾಸಕ ಡಾ.ಬೆಟ್ಟಪ್ಪ ಜೀರಾಳ, ಪ್ರಾಧ್ಯಾಪಕಿ ಆಶಿಕಾ ಎಚ್.ಸಿ., ಸಂಶೋಧಕ ಡಾ.ಮಂಜುನಾಥ, ತಾಲೂಕು ಕಸಾಪ ಅಧ್ಯಕ್ಷ ಮೆಹಬೂಬಹುಸೇನ ಇದ್ದರು. ಶಿಕ್ಷಕರಾದ ಮೌನೇಶ ಬಡಿಗೇರ, ಕನಕಾಚಲ ನಿರೂಪಿಸಿದರು.