ಕಳಪೆ ಕಾಮಗಾರಿ: ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ತಂತ್ರಜ್ಞರ ತಂಡದಿಂದ ಪರಿಶೀಲನೆ

| Published : Jan 15 2024, 01:45 AM IST

ಕಳಪೆ ಕಾಮಗಾರಿ: ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ತಂತ್ರಜ್ಞರ ತಂಡದಿಂದ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕರ ಸೂಚನೆ ಮೇರೆಗೆ ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜಿನ ನೂತನ ಕಟ್ಟಡಗಳ ಗುಣಮಟ್ಟ ಪರಿಶೀಲನೆಯನ್ನು ತಾಂತ್ರಿಕ ತಜ್ಞರಾದ ಪ್ರೊ. ಶ್ಯಾಂಪ್ರಸಾದ್, ಶಿವರಾಜು ಮತ್ತು ಲ್ಯಾಬ್ ಟೆಕ್ನೀಷಿಯನ್ ರಕ್ಷಿತ್ ನೇತೃತ್ವದ ತಂತ್ರಜ್ಞರ ತಂಡವು ಕಟ್ಟಡದಲ್ಲಿ ಆಧುನಿಕ ಉಪಕರಣಗಳಾದ ರಿಬ್ಯೂಟ್ಹೋಮರ್ ಮತ್ತು ಅಲ್ಟ್ರಾಸೋನಿಕ್ ಪಲ್ಸ್ ವೆಲೋಸಿಟಿ ಬಳಸಿ ಎನ್.ಡಿ.ಟಿ ಟೆಸ್ಟ್ ನಡೆಸಿತು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಶಾಸಕ ಎಚ್.ಟಿ.ಮಂಜು ಸೂಚನೆ ಮೇರೆಗೆ ಮಂಡ್ಯ ಪಿಇಎಸ್ ಎಂಜಿಯರಿಂಗ್ ಕಾಲೇಜಿನ ತಂತ್ರಜ್ಞರ ತಂಡ ಪಟ್ಟಣದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಗ್ರಂಥಾಲಯ ಕಟ್ಟಡ, ಕ್ಯಾಂಟೀನ್ ಕಟ್ಟಡ ಮತ್ತು ಸರ್ಕಾರಿ ಪಾಲಿಟೆಕ್ನಿಕ್‌ನ ಹೆಚ್ಚುವರಿ ಕೊಠಡಿಗಳ ಕಟ್ಟಡದ ಗುಣಮಟ್ಟ ಪರಿಶೀಲನೆ ನಡೆಸಿತು.

ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಒಂದೇ ಆವರಣದಲಿವೆ. ಸರ್ಕಾರಿ ಸಂಸ್ಥೆ ರೈಟ್ಸ್ ಇಲ್ಲಿ ನೂತನ ಕಟ್ಟಡಗಳ ಕಾಮಗಾರಿ ವಹಿಸಿಕೊಂಡಿದ್ದು, ಕಾಮಗಾರಿ ನಿರ್ವಹಣೆಯನ್ನು ಇಬ್ಬರು ಪ್ರತ್ಯೇಕ ಗುತ್ತಿಗೆದಾರರಿಗೆ ವಹಿಸಿದೆ.

ಈ ಕಟ್ಟಡಗಳ ಕಾಮಗಾರಿಯ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಸಕ ಎಚ್.ಟಿ.ಮಂಜು ಕಳೆದ ಜ.6 ರಂದು ಕಟ್ಟಡಗಳ ವೀಕ್ಷಣೆ ನಡೆಸಿ ಲೋಪಗಳನ್ನು ಪತ್ತೆಹಚ್ಚಿದ್ದರು.

ಕಾಮಗಾರಿ ಉಸ್ತುವಾರಿ ನಡೆಸುತ್ತಿರುವ ರೈಟ್ಸ್ ಎಂಜಿನಿಯರ್ ರಮೆಶ್ ಕೂಡ ಕಳಪೆ ಗುಣಮಟ್ಟದ ಬಗ್ಗೆ ಬಹಿರಂಗವಾಗಿ ಒಪ್ಪಿಕೊಂಡಿದ್ದು, ಗುಣಮಟ್ಟ ಪರಿಶೀಲನೆಗಾಗಿ ಸಿಮೆಂಟ್ ಕಾಂಕ್ರೀಟ್ ಸೇರಿದಂತೆ ಹಲವು ಬಳಕೆ ವಸ್ತುಗಳ ಸ್ಯಾಂಪಲ್ ಸಂಗ್ರಹಿಸಿ ಪರಿಶೀಲನೆಗಾಗಿ ಮಂಡ್ಯದ ಪಿ.ಇ.ಎಸ್ ಕಾಲೇಜಿನ ಪ್ರಯೋಗಾಲಕ್ಕೆ ಕಳುಹಿಸಲಾಗಿತ್ತು.

ಶಾಸಕರ ಸೂಚನೆಯ ಮೇರೆಗೆ ಇಂದು ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜಿನ ನೂತನ ಕಟ್ಟಡಗಳ ಗುಣಮಟ್ಟ ಪರಿಶೀಲನೆಯನ್ನು ತಾಂತ್ರಿಕ ತಜ್ಞರಾದ ಪ್ರೊ. ಶ್ಯಾಂಪ್ರಸಾದ್, ಶಿವರಾಜು ಮತ್ತು ಲ್ಯಾಬ್ ಟೆಕ್ನೀಷಿಯನ್ ರಕ್ಷಿತ್ ನೇತೃತ್ವದ ತಂತ್ರಜ್ಞರ ತಂಡ ಕಟ್ಟಡದಲ್ಲಿ ಆಧುನಿಕ ಉಪಕರಣಗಳಾದ ರಿಬ್ಯೂಟ್ಹೋಮರ್ ಮತ್ತು ಅಲ್ಟ್ರಾಸೋನಿಕ್ ಪಲ್ಸ್ ವೆಲೋಸಿಟಿ ಬಳಸಿ ಎನ್.ಡಿ.ಟಿ ಟೆಸ್ಟ್ ನಡೆಸಿತು.

ಪರೀಕ್ಷೆಯ ವೇಳೆ ಗುಣಮಟ್ಟದಲ್ಲಿ ಲೋಪಗಳು ಕಂಡು ಬಂದಿದ್ದು ಕಾಲೇಜಿನ ಪ್ರಯೋಗಾಲಯದಲ್ಲಿ ಚೆಕ್ ಮಾಡಿ ಅನಂತರ ಅಂತಿಮ ವರದಿ ನೀಡುವುದಾಗಿ ತಿಳಿಸಿತು.

ಶಾಸಕರ ಆಕ್ರೋಶ:

ಕಳಪೆ ಕಾಮಗಾರಿಯ ಹಿನ್ನೆಲೆಯಲ್ಲಿ ತಾಂತ್ರಿಕ ವರದಿ ಬರುವವರೆಗೂ ಕಾಮಗಾರಿ ನಿಲ್ಲಿಸುವಂತೆ ಶಾಸಕ ಎಚ್.ಟಿ.ಮಂಜು ಕಳೆದ ಶನಿವಾರ ರೈಟ್ಸ್ ಎಂಜಿನಿಯರ್ ರಮೇಶ್ ಅವರಿಗೆ ಸೂಚಿಸಿದ್ದರು. ಆದರೆ, ಶಾಸಕರ ಸೂಚನೆ ಕಡೆಗಣಿಸಿ ಕಾಮಗಾರಿ ಮುಂದುವರಿಸಿದ್ದರು.

ಶಾಸಕರ ಭೇಟಿ ಸಮಯದಲ್ಲಿ ಕಂಡು ಬಂದಿದ್ದ ಲೋಪದೋಷಗಳನ್ನು ಸಿಮೆಂಟ್ ಪ್ಲಾಸ್ಟರಿಂಗ್ ಮಾಡಿ ಮುಚ್ಚಿಹಾಕಲಾಗಿತ್ತು. ಇದರಿಂದ ಕುಪಿತಗೊಂಡ ಶಾಸಕರು ಎಂಜಿನಿಯರ್ ರಮೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಶಾಸಕರ ಸೂಚನೆಯನ್ನೇ ಕಡೆಗಣಿಸಿ ಎಂಜಿನಿಯರ್ ಉದ್ದಟತನದ ಬಗ್ಗೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿ ಮೇಲಾಧಿಕಾರಿಗಳು ಸ್ಥಳಕ್ಕೆ ಬರಬೇಕು ಮತ್ತು ತಾಂತ್ರಿಕ ಪರಿಶೀಲನಾ ವರದಿ ಬರುವವರೆಗೂ ಯಾವುದೇ ಕಾರಣಕ್ಕೂ ಕಾಮಗಾರಿ ನಡೆಸಬಾರದೆಂದು ಹೇಳಿ ಕಾಮಗಾರಿಯನ್ನು ಸ್ಥಗಿತಗೊಳಿಸಿದರು.

ಈ ವೇಳೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಕೆ.ಆರ್.ದಿನೇಶ್, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಹೆಚ್.ಎಸ್.ನಾಗರಾಜು ಸೇರಿದಂತೆ ಕಾಲೇಜಿನ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು.